ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊನ್ನಾವರ | ನಾಟಿಗೆ ಸಿದ್ಧವಾಗಿವೆ 11 ಲಕ್ಷ ಸಸಿಗಳು

ಹೊನ್ನಾವರ ತಾಲ್ಲೂಕಿನ ಮೂರು ಸಸ್ಯಪಾಲನಾ ಪ್ರದೇಶಗಳಲ್ಲಿ ಬೆಳೆದಿದೆ ಹಸಿರು ಹೊನ್ನು
Last Updated 21 ಏಪ್ರಿಲ್ 2020, 19:30 IST
ಅಕ್ಷರ ಗಾತ್ರ

ಹೊನ್ನಾವರ: ತಾಲ್ಲೂಕಿನಲ್ಲಿಅರಣ್ಯ ಇಲಾಖೆಯ ಸುಪರ್ದಿಯಲ್ಲಿರುವ ಎಲ್ಲಮೂರುಸಸ್ಯಪಾಲನಾ ಕೇಂದ್ರಗಳು ಹಸಿರಿನಿಂದ ನಳನಳಿಸುತ್ತಿವೆ.ಸುಮಾರು 11 ಲಕ್ಷ ಸಸಿಗಳು ನಾಟಿಗೆ ಸಿದ್ಧವಾಗಿವೆ.

ಹೊನ್ನಾವರ ಅರಣ್ಯ ವಲಯದ ಕಾಸರಕೋಡ, ಗೇರುಸೊಪ್ಪ ಅರಣ್ಯ ವಲಯದ ಶರಾವತಿ ಹಾಗೂ ಮುಖ್ಯಪ್ರಾಣ ಸಸ್ಯಪಾಲನಾ ಕೇಂದ್ರಗಳಲ್ಲಿ ನಾಟಿ ಸಸಿಗಳ ಪೋಷಣೆ ಮಾಡಲಾಗುತ್ತಿದೆ. ಕಾಸರಕೋಡ ನರ್ಸರಿ ಒಂದರಲ್ಲೇ 6 ಲಕ್ಷಕ್ಕೂ ಹೆಚ್ಚು ಸಸಿಗಳಿವೆ. ಸಸ್ಯಪಾಲನಾ ಕೇಂದ್ರಗಳಲ್ಲಿರುವ ವಿವಿಧ ಜಾತಿಯ ಸಸಿಗಳಲ್ಲಿ ಕೆಲವು ಆಳೆತ್ತರಕ್ಕೆ ಬೆಳೆದು ನಿಂತಿವೆ.

ಪ್ರತಿ ನರ್ಸರಿಯಲ್ಲಿ ಮೂರು ವಿವಿಧ ಗಾತ್ರದ ಚೀಲಗಳಲ್ಲಿ ಗೊಬ್ಬರ ಮಿಶ್ರಿತ ಮಣ್ಣು ತುಂಬಿ ಗಿಡಗಳನ್ನು ಬೆಳೆಸಲಾಗಿದೆ. ನಿಯಮಿತವಾಗಿ ಅವುಗಳಿಗೆ ನೀರುಣಿಸುತ್ತ ಬರಲಾಗಿದೆ. ಸಾವಿರಾರು ದಿನಗಳ ಮಾನವ ಶಕ್ತಿಯನ್ನು ಗಿಡಗಳ ಆರೈಕೆಗೆ ವ್ಯಯಿಸಲಾಗಿದೆ.

ಮಹಾಗನಿ, ಬಾದಾಮಿ, ಕದಂಬ, ನೆಲ್ಲಿ, ಖೈರಾ, ಗಾಳಿ, ಸಂಪಿಗೆ, ಹೆಬ್ಬಲಸು, ಗುಳಮಾವು, ನೇರಳೆ, ಬೆಟ್ಟಹೊನ್ನೆ, ಮಹಾಗನಿ, ಕದಂಬ ಮುರುಗಲು, ಮುತ್ತುಗ, ಸಾಲಧೂಪ, ಮದ್ದಾಲೆ, ಆಲ, ಹೊಳೆ ದಾಸವಾಳ ಮುಂತಾದ 40ಕ್ಕೂ ಹೆಚ್ಚು ಜಾತಿಯ ಶುದ್ಧ ಕಾಡು ಸಸಿಗಳಿವೆ. ಜೊತೆಗೆ ಗೇರು, ಮಾವು, ಹಲಸು ಮೊದಲಾದ ಹಣ್ಣಿನ ಸಸಿಗಳು ಹಾಗೂಮೂರುಜಾತಿಯ ಬೆತ್ತದ ಸಸಿಗಳು ನರ್ಸರಿಯಲ್ಲಿವೆ.

‘ಜಿಲ್ಲೆಯ ಹೆಚ್ಚಿನ ಭಾಗ ಅರಣ್ಯ ಭೂಮಿಯಾಗಿದೆ. ಆದ್ದರಿಂದ ಇಲ್ಲಿನ ಜನರಿಗೆ ಅರಣ್ಯ ಅವಲಂಬನೆ ಅನಿವಾರ್ಯವಾಗಿದೆ. ಅರಣ್ಯ ಸಂರಕ್ಷಣೆಯ ಜೊತೆಗೆ ಕಿರು ಅರಣ್ಯ ಉತ್ಪನ್ನಗಳಿಗೆ ಮಾರುಕಟ್ಟೆ ಕಲ್ಪಿಸಿ ಜನರಿಗೆ ಆದಾಯ ಸಿಗುವಂತೆ ಮಾಡುವ ಉದ್ದೇಶವನ್ನು ಇಲಾಖೆ ಹೊಂದಿದೆ’ ಎಂದುಉಪ ಅರಣ್ಯ ಸಂರಕ್ಷಣಾಧಿಕಾರಿ ಗಣಪತಿ.ಕೆ ತಿಳಿಸಿದರು.

ಪ್ರಸಕ್ತ ಸಾಲಿನಲ್ಲಿ ಮುರುಗಲು, ಉಪ್ಪಾಗೆ, ರಾಮಪತ್ರೆ, ನೇರಳೆ, ನೆಲ್ಲಿ ಮೊದಲಾದ ಕಿರು ಅರಣ್ಯ ಉತ್ಪನ್ನ ನೀಡುವ ಸಸಿಗಳನ್ನು ನಾಟಿ ಮಾಡಲಾಗುತ್ತಿದೆ.ಅಳಿವಿನಂಚಿನಲ್ಲಿರುವ ಸೀತಾ ಅಶೋಕ, ದುರ್ವಾಸ, ಕಾಯ ಹಾಗೂ ಔಷಧಿ ಗುಣಗಳಿರುವ ಸೆಮಿಪತ್ರೆ, ಜಾಯಿಕಾಯಿ, ಬಿಲ್ವಪತ್ರೆ ಮೊದಲಾದ ಸಸಿಗಳನ್ನು ಬೆಳೆಸಲು ಕ್ರಮ ಕೈಗೊಳ್ಳಲಾಗಿದೆ’ ಎಂದರು.

ಆರ್.ಎಸ್.ಪಿ.ಡಿ. ಯೋಜನೆಯಡಿಯಲ್ಲಿ ರೈತರಿಗೆ 7,200 ಹಾಗೂ ಹಸಿರು ಕರ್ನಾಟಕ ಯೋಜನೆಯಡಿಯಲ್ಲಿ 19,300 ಸಸಿಗಳನ್ನು ಜೂನ್ ತಿಂಗಳಲ್ಲಿ ವಿತರಿಸಲಾಗುವುದು. ಸಸಿಗಳನ್ನು ನಾಟಿ ಮಾಡಲು ಅಗತ್ಯವಿರುವ ಗುಂಡಿಗಳನ್ನು ತೋಡುವ ಕೆಲಸ ಈಗಾಗಲೇ ಮುಗಿದಿದೆ ಎಂದು ಅವರು ಹೇಳಿದರು.

ಬೆಂಕಿ ಅನಾಹುತ ನಡೆದಿಲ್ಲ:ಬೇಸಿಗೆಯಲ್ಲಿ ಬೆಂಕಿ ಆಕಸ್ಮಿಕದಿಂದ ಉಂಟಾಗುವ ಅರಣ್ಯ ನಾಶವನ್ನು ತಪ್ಪಿಸಲ ಸಾಕಷ್ಟು ಮುಂಜಾಗೃತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಅರಣ್ಯದ ಯಾವುದೇ ಭಾಗದಲ್ಲಿ ಹೊಗೆ ಕಾಣಿಸಿಕೊಂಡರೆ ಉಪಗ್ರಹದ ಮೂಲಕ ಇಲಾಖೆಯ ಹಿರಿಯ ಅಧಿಕಾರಿಗಳ ಮೊಬೈಲ್‌ಗೆ ಕೂಡಲೆ ಸಂದೇಶ ರವಾನೆಯಾಗುತ್ತದೆ.

ಕೋವಿಡ್ 19 ಭೀತಿಯ ನಡುವೆಯೂ ಅರಣ್ಯ ಸಂರಕ್ಷಣೆಗೆ ಸಿಬ್ಬಂದಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ವಾಚರ್‌ಗಳು ಸೇರಿದಂತೆ ಇಲಾಖೆಯ ಕೆಳ ಹಂತದ ಸಿಬ್ಬಂದಿಗೆ ಲಾಕ್‌ಡೌನ್ ಅವಧಿಯಲ್ಲಿ ಕರ್ತವ್ಯ ನಿರ್ವಹಿಸಲು ಅನುಕೂಲವಾಗುವಂತೆ ಪಾಸ್ ವಿತರಿಸಲಾಗಿದೆ ಎಂದು ಗಣಪತಿ ಕೆ.ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT