147 ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

7

147 ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

Published:
Updated:

ಶಿರಸಿ: ಇಲ್ಲಿನ ನಗರಸಭೆಗೆ ಆ.31ರಂದು ನಡೆಯಲಿರುವ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಶನಿವಾರ ಒಟ್ಟು 115 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು. 31 ವಾರ್ಡ್‌ಗಳಿಗೆ ಈವರೆಗೆ ಒಟ್ಟು 147 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದಂತಾಗಿದೆ.

ಕಾಂಗ್ರೆಸ್‌ನಿಂದ 45, ಬಿಜೆಪಿಯಿಂದ 37, ಜೆಡಿಎಸ್‌ನಿಂದ 26, ಎಸ್‌ಡಿಪಿಐನಿಂದ 3 ಹಾಗೂ 36 ಪಕ್ಷೇತರರು ನಾಮಪತ್ರ ನೀಡಿದ್ದಾರೆ. ನಾಮಪತ್ರ ಹಿಂಪಡೆಯಲು ಆ.23 ಕೊನೆಯ ದಿನವಾಗಿದೆ. ವಿವಿಧ ಪಕ್ಷಗಳ ಹೆಸರಿನಲ್ಲಿ ಅನೇಕರು ನಾಮಪತ್ರ ನೀಡಿದ್ದರೂ, ‘ಬಿ’ ಫಾರ್ಮ್ ಪಡೆದವರು ಅಧಿಕೃತ ಅಭ್ಯರ್ಥಿಯಾಗಲಿದ್ದಾರೆ.

ಆ.15ರಂದು ಪಕ್ಷದ ಅಧಿಕೃತ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುವುದಾಗಿ ಹೇಳಿದ್ದ ಕಾಂಗ್ರೆಸ್‌ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಪೂರ್ಣಗೊಂಡ ಮೇಲೆ ಪಕ್ಷದ ಅಭ್ಯರ್ಥಿಗಳ ಹೆಸರನ್ನು ಬಹಿರಂಗಗೊಳಿಸಿದೆ. ಎರಡು ವಾರ್ಡ್‌ಗಳ ಅಭ್ಯರ್ಥಿಗಳ ಹೆಸರನ್ನು ಬಿಜೆಪಿ ಕೊನೆಯ ಕ್ಷಣದವರೆಗೂ ಬಹಿರಂಗಗೊಳಿಸಿರಲಿಲ್ಲ. ಜೆಡಿಎಸ್ 26 ವಾರ್ಡ್‌ಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.

ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಕೆಲವು ಅನುಭವಿ ಸದಸ್ಯರಿಗೆ ಟಿಕೆಟ್ ನೀಡಿದರೆ, ಇನ್ನು ಕೆಲವು ಹೊಸ ಮುಖಗಳನ್ನು ಆಯ್ಕೆ ಮಾಡಿವೆ. ಎರಡನೇ ಅವಧಿಯ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಐವರು ಸ್ವ ಪಕ್ಷದ ಹಾಗೂ ಬಿಜೆಪಿ ಸದಸ್ಯರ ಬೆಂಬಲ ಪಡೆದು ಅಧ್ಯಕ್ಷರಾಗಲು ಯಶಸ್ವಿಯಾಗಿದ್ದ ಪ್ರದೀಪ ಶೆಟ್ಟಿ ಅವರಿಗೆ ಟಿಕೆಟ್ ದೊರೆತಿದೆ. ಅವರನ್ನು ಬೆಂಬಲಿಸಿದ್ದ ಫ್ರಾನ್ಸಿಸ್ ನರೋನ್ಹಾ ಅವರಿಗೂ ಕಾಂಗ್ರೆಸ್ ಟಿಕೆಟ್ ನೀಡಿದೆ. ಉಪಾಧ್ಯಕ್ಷೆಯಾಗಿದ್ದ ಅರುಣಾ ವೆರ್ಣೇಕರ್ ಅವರಿಗೆ ಟಿಕೆಟ್ ಕೈ ತಪ್ಪಿದ್ದು, ಅವರು ಪಕ್ಷೇತರರಾಗಿ ಕಣಕ್ಕಿಳಿದಿದ್ದಾರೆ.

ಎರಡು ದಿನಗಳ ಹಿಂದಷ್ಟೇ ಬಿಜೆಪಿಯಿಂದ ಕಾಂಗ್ರೆಸ್ಸಿಗೆ ನೆಗೆದಿದ್ದ ಅರುಣ ಪ್ರಭು ಹಾಗೂ ಕೇಶವ ಶೆಟ್ಟಿ, ಟಿಕೆಟ್ ಗಿಟ್ಟಿಸುವಲ್ಲಿ ಸಫಲರಾಗಿದ್ದಾರೆ. ಮಾಜಿ ಅಧ್ಯಕ್ಷ ಶ್ರೀಕಾಂತ ತಾರೀಬಾಗಿಲು ಅವರು 31 ವಾರ್ಡ್ ಬಿಟ್ಟು, 17ನೇ ವಾರ್ಡಿಗೆ ನಾಮಪತ್ರ ಸಲ್ಲಿಸಿದ್ದಾರೆ.

ಹಿಂದಿನ ಅವಧಿಯಲ್ಲಿ ಬಿಜೆಪಿ ಸದಸ್ಯರಾಗಿದ್ದ ನಾಗರಾಜ ಮೂಗ್ತಿ ಈ ಬಾರಿ ಪಕ್ಷದ ‘ಬಿ’ ಫಾರ್ಮ್ ಸಿಗದಿದ್ದರೂ ನಾಮಪತ್ರ ಸಲ್ಲಿಸಿದ್ದಾರೆ. ಮೊದಲು ಬಿಜೆಪಿಯಲ್ಲಿದ್ದು, ನಾಲ್ಕಾರು ವರ್ಷಗಳಿಂದ ತಟಸ್ಥರಾಗಿದ್ದ ಸಂಧ್ಯಾ ಕುರ್ಡೇಕರ್ ಬಿಜೆಪಿ ಟಿಕೆಟ್ ಪಡೆಯುವಲ್ಲಿ ವಿಫಲರಾಗಿದ್ದು, ಸ್ವತಂತ್ರವಾಗಿ ಕಣಕ್ಕಿಳಿದಿದ್ದಾರೆ. ಕಾಂಗ್ರೆಸ್ ಸದಸ್ಯೆಯಾಗಿದ್ದ ಶೀಲು ವಾಜ್ ಈ ಬಾರಿ ಜೆಡಿಎಸ್ ಅಭ್ಯರ್ಥಿಯಾಗಿದ್ದಾರೆ.

‘ಕೈ’ ತಪ್ಪಿದ ಟಿಕೆಟ್!

ಹಿಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿ, ಬಂಡಾಯ ಅಧ್ಯಕ್ಷ ಪ್ರದೀಪ ಶೆಟ್ಟಿ ಅವರನ್ನು ಬೆಂಬಲಿಸಿದ್ದ ಶ್ರೀಧರ ಮೊಗೇರ, ಒಂದೆರಡು ತಿಂಗಳುಗಳಿಂದ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದರು. 10ನೇ ವಾರ್ಡಿನ ಟಿಕೆಟ್ ಆಕಾಂಕ್ಷಿಯಾಗಿದ್ದ ಅವರು, ಬಿಜೆಪಿ ಟಿಕೆಟ್ ತಪ್ಪಿತೆಂದು ಖಚಿತವಾದ ಮೇಲೆ, ಎರಡು ದಿನಗಳ ಹಿಂದೆ ಕಾಂಗ್ರೆಸ್‌ ಟಿಕೆಟ್ ಪಡೆಯಲು ಶತಾಯಗತಾಯ ಪ್ರಯತ್ನಿಸಿದರು. ಕೊನೆಯ ಕ್ಷಣದಲ್ಲಿ ಕಾಂಗ್ರೆಸ್‌ ಟಿಕೆಟ್‌ನಿಂದಲೂ ವಂಚಿತರಾದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !