ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ: ಮುಂಗಾರು ಹಂಗಾಮಿನ ನಾಟಿಗೆ 1.48 ಕೋಟಿ ಸಸಿಗಳು ಸಿದ್ಧ

ಕೆನರಾ ಅರಣ್ಯ ವೃತ್ತದ ನರ್ಸರಿಗಳಲ್ಲಿ ಬೆಳೆಸಿರುವ ವಿವಿಧ ಜಾತಿಯ ಗಿಡಗಳು
Last Updated 13 ಮೇ 2020, 19:30 IST
ಅಕ್ಷರ ಗಾತ್ರ

ಶಿರಸಿ: ಅರಣ್ಯ ಇಲಾಖೆಯ ಕೆನರಾ ವೃತ್ತದಲ್ಲಿ ಮುಂಗಾರು ಹಂಗಾಮಿನಲ್ಲಿ ನಾಟಿ ಮಾಡಲು ವಿವಿಧ ಜಾತಿಯ 1.48 ಕೋಟಿ ಸಸಿಗಳು ಸಿದ್ಧವಾಗಿವೆ.

ಕೆನರಾ ವೃತ್ತದ ಐದು ಅರಣ್ಯ ವಿಭಾಗಗಳು ಹಾಗೂ ಸಾಮಾಜಿಕ ಅರಣ್ಯ ಒಳಗೊಂಡು ಇರುವ 42 ಸಸ್ಯಪಾಲನಾ ಕೇಂದ್ರಗಳಲ್ಲಿ 40ಕ್ಕೂ ಹೆಚ್ಚು ಜಾತಿಯ ಸಸಿಗಳು ಚಿಗುರಿನಿಂತಿವೆ. ನೇರಳೆ, ಮತ್ತಿ, ನಂದಿ, ಕಿಂದಳ, ಶಿವಣೆ, ತಾರೆ, ಹಲಸು, ತೇಗ, ಭರಣಿ, ಹೆಬ್ಬಲಸು, ವಾಟೆ, ಅಂಟುವಾಳ, ನೆಲ್ಲಿ, ಹೊನ್ನೆ, ಅರಳಿ, ಆಲ, ಅಶೋಕ, ಹೆದ್ದಿ, ಕದಂಬ, ಮುರುಗಲು, ಉಪ್ಪಾಗೆ, ರಾಮಪತ್ರೆ, ನೇರಳೆ, ಮುತ್ತುಗ, ಸಾಲಧೂಪದಂತಹ ಸ್ಥಾನಿಕ ಜಾತಿ ಸಸ್ಯಗಳ ಜತೆಗೆ, ಬರಡು ಭೂಮಿಯಲ್ಲಿ ನಾಟಿ ಮಾಡಲು ಅಕೇಶಿಯಾ ಸಸಿಗಳನ್ನು ಬೆಳೆಸಲಾಗಿದೆ.

ಸಸ್ಯಪಾಲನಾ ಕೇಂದ್ರಗಳಲ್ಲಿ ಅಕ್ಟೋಬರ್‌ನಿಂದಲೇ ಅರಣ್ಯ ಇಲಾಖೆ ಸಸಿ ಬೆಳೆಸಲು ಪ್ರಾರಂಭಿಸುತ್ತದೆ. ಲಾಕ್‌ಡೌನ್ ನಡುವೆಯೂ ಸಸಿಗಳಿಗೆ ನಿತ್ಯ ನೀರುಣಿಸುವ ಕಾರ್ಯ ನಿರಾತಂಕವಾಗಿ ನಡೆದಿದೆ. ಕೃಷಿ ಕಾರ್ಮಿಕರು, ಇಲಾಖೆ ಸಿಬ್ಬಂದಿ ನರ್ಸರಿ ಸಸಿಗಳನ್ನು ಮಗುವಿನಂತೆ ಪೋಷಿಸಿಕೊಂಡು ಬಂದಿದ್ದಾರೆ.

ಅರಣ್ಯ ಇಲಾಖೆ ಆರ್‌ಎಸ್‌ಪಿಡಿ (ರೈಸಿಂಗ್ ಸೀಡ್ಲಿಂಗ್ಸ್‌ ಫಾರ್ ಪಬ್ಲಿಕ್ ಡಿಸ್ಟ್ರಿಬ್ಯೂಷನ್) ಯೋಜನೆಯಡಿ ಗಿಡ ಬೆಳೆಸಿ, ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿ ನೋಂದಣಿ ಮಾಡಿಕೊಂಡು, ಸಾರ್ವಜನಿಕರಿಗೆ ಗಿಡ ವಿತರಿಸಲಾಗುತ್ತದೆ. ಇದರ ಪ್ರಯೋಜನ ಪಡೆದವರು ಮೂರು ವರ್ಷಗಳಲ್ಲಿ ಬದುಕಿ ಉಳಿದ ಪ್ರತಿ ಸಸಿಗೆ ₹ 100 ನೆರವು ಪಡೆಯಬಹುದು. ಮಗುವಿಗೊಂದು ಮರ ಶಾಲೆಗೊಂದು ವನ ಹಾಗೂ ಸಿರಿ ಚಂದನವನ ಯೋಜನೆಗಳು ಸಹ ಇವೆ. ಈ ಮೂರು ಯೋಜನೆಗಳಲ್ಲಿ ಪ್ರತಿ ವರ್ಷ ರೈತರಿಗೆ ಸಸಿಗಳನ್ನು ವಿತರಿಸಲಾಗುತ್ತದೆ. ಒಟ್ಟು ಗಿಡಗಳಲ್ಲಿ ಶೇ 10–15ರಷ್ಟು ಸಸಿಗಳನ್ನು ರೈತರಿಗೆ ನೀಡಲಾಗುತ್ತದೆ ಎನ್ನುತ್ತಾರೆ ಅಧಿಕಾರಿಗಳು.

ಅಕ್ಟೋಬರ್‌ನಿಂದ ಅರಣ್ಯದಲ್ಲಿ ಸಸಿ ನೆಡಲು ಗುಂಡಿ ತೆಗೆಯಲು ಪ್ರಾರಂಭಿಸಿ, ಫೆಬ್ರುವರಿ ವೇಳೆಗೆ ಅದನ್ನು ಪೂರ್ಣಗೊಳಿಸುತ್ತೇವೆ. ಮಳೆಗಾಲ ಆರಂಭವಾಗುತ್ತಿದ್ದಂತೆ, ಸಸಿಗಳ ನಾಟಿ, ರೈತರಿಗೆ ವಿತರಣೆ ಆರಂಭವಾಗುತ್ತದೆ. ಅರಣ್ಯ ಬೆಳವಣಿಗೆಗೆ ಪೂರಕವಾಗಿ ಸ್ಥಾನಿಕ ಜಾತಿಯ ಸಸ್ಯಗಳಿಗೆ ಒತ್ತು ನೀಡಿ ಗಿಡಗಳನ್ನು ಬೆಳೆಸಲಾಗಿದೆ. ಅರಣ್ಯ ಸಂರಕ್ಷಣೆಯ ಜೊತೆಗೆ ಕಿರು ಅರಣ್ಯ ಉತ್ಪನ್ನಗಳ ಮೂಲಕ ಜನರಿಗೆ ಆದಾಯ ದೊರೆಯಲು ಅನುಕೂಲವಾಗುವಂತೆ ಈ ಜಾತಿಯ ಸಸಿಗಳಿಗೆ ವಿಶೇಷ ಒತ್ತು ನೀಡಲಾಗಿದೆ ಎನ್ನುತ್ತಾರೆ ಕೆನರಾ ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಿ. ಯತೀಶಕುಮಾರ್.

‘ಶಿರಸಿ ವಲಯದಲ್ಲಿ ಒಂದು ಲಕ್ಷ ಸಸಿಗಳನ್ನು ಸಾರ್ವಜನಿಕರಿಗೆ ವಿತರಣೆಗೆಂದು ಬೆಳೆಸಲಾಗಿದೆ. ಜನರ ಬೇಡಿಕೆಗೆ ತಕ್ಕಂತೆ ಗಿಡಗಳನ್ನು ಬೆಳೆಸುತ್ತೇವೆ. ಶಿರಸಿ ಭಾಗದಲ್ಲಿ ಹಣ್ಣಿನ ಗಿಡಗಳು, ಸಿಲ್ವರ್ ಓಕ್‌ಗೆ ಹೆಚ್ಚು ಬೇಡಿಕೆಯಿದೆ’ ಎಂದು ಆರ್‌ಎಫ್‌ಒ ಅಮಿತ್ ಚವ್ಹಾಣ ಹೇಳಿದರು.

ಕೆನರಾ ವೃತ್ತದಲ್ಲಿ ಬೆಳೆಸಿರುವ ಸಸಿಗಳು

ವಿಭಾಗ

ಒಟ್ಟು ಸಸಿಗಳು
ಹಳಿಯಾಳ 24,62,446
ಯಲ್ಲಾಪುರ 18,00,578
ಕಾರವಾರ 27,27,160
ಹೊನ್ನಾವರ 38,88,030
ಶಿರಸಿ 37,45,996
ಸಾಮಾಜಿಕ ಅರಣ್ಯ ಕಾರವಾರ 2,13,895

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT