ಸೋಮವಾರ, ಆಗಸ್ಟ್ 26, 2019
22 °C
50 ತಾತ್ಕಾಲಿಕ ಪುನರ್ವಸತಿ ಕೇಂದ್ರಗಳು ಆರಂಭ

ಕಾರವಾರ ಜಿಲ್ಲೆಯಲ್ಲಿ ಭಾರಿ ಮಳೆ: 1,688 ಜನರ ಸ್ಥಳಾಂತರ

Published:
Updated:
Prajavani

ಕಾರವಾರ: ಭಾರಿ ಮಳೆಯಿಂದಾಗಿ ಕಾರವಾರ ಮತ್ತು ಅಂಕೋಲಾ ತಾಲ್ಲೂಕಿನಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಜಲಾವೃತ ಪ್ರದೇಶಗಳಿಂದ ಒಟ್ಟು 1,688 ಜನರನ್ನು ಸ್ಥಳಾಂತರಿಸಲಾಗಿದೆ. 

ಮಳೆಯಿಂದ ತೊಂದರೆಗೆ ಒಳಗಾಗಿರುವ ಕಾರವಾರದಲ್ಲಿ 16, ಹೊನ್ನಾವರ ತಾಲ್ಲೂಕಿನಲ್ಲಿ 15, ಅಂಕೋಲಾದಲ್ಲಿ 12, ಕುಮಟಾದಲ್ಲಿ ಮೂರು, ಮುಂಡಗೋಡದಲ್ಲಿ ಎರಡು, ಹಳಿಯಾಳದಲ್ಲಿ ಮತ್ತು ಯಲ್ಲಾಪುರದಲ್ಲಿ ತಲಾ ಒಂದು ಒಟ್ಟು 50 ತಾತ್ಕಾಲಿಕ ಪುನರ್ವಸತಿ ಕೇಂದ್ರಗಳನ್ನು ತೆರೆಯಲಾಗಿದೆ.

ಕಾರವಾರ ಮತ್ತು ಅಂಕೋಲಾದಲ್ಲಿ ನೆರೆಯಲ್ಲಿ ಸಿಲುಕಿದ್ದ ಜನರ ರಕ್ಷಣೆಗೆ ಸ್ಥಳೀಯ ಪೊಲೀಸರು, ಕರಾವಳಿ ಭದ್ರತಾ ಪಡೆ ಮತ್ತು ನೌಕಾದಳದ ಸಹಕಾರವನ್ನು ಜಿಲ್ಲಾಡಳಿತ ಪಡೆದುಕೊಂಡಿದೆ. ಇನ್ನೂ ಮೂರು ದಿನ ಇದೇ ರೀತಿ ಮಳೆಯಾಗುವ ಸಾಧ್ಯತೆಯಿದೆ. ಆದ್ದರಿಂದ ಕಾರಣ ಜಿಲ್ಲೆಯ ಎಲ್ಲ ಅಧಿಕಾರಿ, ಸಿಬ್ಬಂದಿ ಕೇಂದ್ರಸ್ಥಾನದಲ್ಲಿದ್ದು ಪ್ರವಾಹ ಪರಿಸ್ಥಿತಿಯನ್ನು ನಿಭಾಯಿಸುವಂತೆ ಸೂಚಿಸಲಾಗಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ನಾಗರಾಜ ಸಿಂಗ್ರೇರ್ ತಿಳಿಸಿದ್ದಾರೆ. 

ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿನಾಯಕ ಪಾಟೀಲ ಅವರು ಕುಮಟಾ, ಹೊನ್ನಾವರ, ಅಂಕೋಲಾ ತಾಲ್ಲೂಕುಗಳಲ್ಲಿ ಮಳೆಯಿಂದ ಹಾನಿಗೊಳಗಾದ ಕೆಲವು ಸ್ಥಳಗಳನ್ನು ಮಂಗಳವಾರ ಪರಿಶೀಲಿಸಿದರು. ಜಿಲ್ಲಾಧಿಕಾರಿ, ಎಸ್‌ಪಿ ಹಾಗೂ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೊಹಮ್ಮದ್ ರೋಶನ್ ಪ್ರವಾಹ ಪೀಡಿತ ಕದ್ರಾದಲ್ಲಿ ಮಂಗಳವಾರ ಮೊಕ್ಕಾಂ ಹೂಡಿದ್ದಾರೆ.

Post Comments (+)