ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರಕನ್ನಡ ಜಿಲ್ಲೆಯಲ್ಲಿ 402 ಬಿಎಸ್‌ಎನ್‌ಎಲ್ ಟವರ್‌

ಇಸಳೂರಿನಲ್ಲಿ ನೂತನ ಟವರ್ ಉದ್ಘಾಟಿಸಿದ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಹೇಳಿಕೆ
Last Updated 30 ಜನವರಿ 2019, 13:51 IST
ಅಕ್ಷರ ಗಾತ್ರ

ಶಿರಸಿ: ತಾಲ್ಲೂಕಿನ ಇಸಳೂರು ಹಾಗೂ ಸುತ್ತಮುತ್ತಲ ಗ್ರಾಮಗಳ ಬಹುದಿನಗಳ ಬೇಡಿಕೆಯಾಗಿದ್ದ ಬಿಎಸ್ಎನ್ಎಲ್ ಮೊಬೈಲ್ ಟವರ್ ಅನ್ನು ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಬುಧವಾರ ಉದ್ಘಾಟಿಸಿದರು.

ಜಿಲ್ಲೆಯಲ್ಲಿ ಒಟ್ಟು 402 ಬಿಎಸ್‌ಎನ್‌ಎಲ್ ಟವರ್‌ಗಳನ್ನು ಉದ್ಘಾಟಿಸಲಾಗಿದೆ. ಅವುಗಳಲ್ಲಿ 160 3ಜಿ ಟವರ್‌ಗಳಾಗಿವೆ. ಇನ್ನೂ ಹಲವು ಟವರ್‌ಗಳ ನಿರ್ಮಾಣ ಪ್ರಗತಿಯಲ್ಲಿದೆ. ಜಿಲ್ಲೆಯಿಂದ ₹ 85 ಕೋಟಿ ಆದಾಯ ಬರುತ್ತಿದೆ. ಇಲ್ಲಿನ ಭೌಗೋಳಿಕ ಪರಿಸರದ ಕಾರಣ, ಎಲ್ಲೆಡೆ ಮೊಬೈಲ್ ಸಿಗ್ನಲ್ ತಲುಪಿಸಲು ಸಾಧ್ಯವಾಗುತ್ತಿಲ್ಲ. 180ಕ್ಕೂ ಹೆಚ್ಚು ವೈಫೈ ಹಾಟ್‌ಸ್ಪಾಟ್ ನೀಡಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಉದ್ಯಮಕ್ಕೆ ಅನುಕೂಲವಾಗುವ ಉದ್ದೇಶದಿಂದ ಇಂತಹ ಸೌಲಭ್ಯ ಕಲ್ಪಿಸಲಾಗುತ್ತಿದೆ. 8000ಕ್ಕೂ ಅಧಿಕ ಬ್ರಾಡ್‌ಬ್ಯಾಂಡ್ ಸಂಪರ್ಕ ನೀಡಲಾಗಿದೆ ಎಂದರು.

ಆಯುಷ್ಮಾನ್ ಕಾರ್ಡ್‌ ಮನೆ ಮನೆ ತಲುಪುತ್ತಿದೆ. ಸುಮಾರು 1.38 ಲಕ್ಷ ಜನರಿಗೆ ಉಚಿತ ಗ್ಯಾಸ್ ವಿತರಿಸಲಾಗಿದೆ. ಹಾವೇರಿ– ಶಿರಸಿ ಹಾಗೂ ತಾಳಗುಪ್ಪ– ಸಿದ್ದಾಪುರ ರೈಲ್ವೆ ಮಾರ್ಗ ನಿರ್ಮಾಣ ಕುರಿತಂತೆ ಸಮೀಕ್ಷೆ ಪೂರ್ಣಗೊಂಡಿದೆ. ಪ್ರಸ್ತುತ ಕೈಗೆತ್ತಿಕೊಂಡಿರುವ ಯೋಜನೆ ಪೂರ್ಣಗೊಂಡ ಮೇಲೆ ಇದನ್ನು ಅನುಷ್ಠಾನಗೊಳಿಸಲಾಗುತ್ತದೆ ಎಂದು ತಿಳಿಸಿದರು.

‘ಸಾಗರಮಾಲಾ ಯೋಜನೆಯಡಿ ಹಾವೇರಿ–ಶಿರಸಿ ನಡುವೆ ಬೇಲೆಕೇರಿ ಬಂದರಿಗೆ ಸಂಪರ್ಕ ಕಲ್ಪಿಸುವ ಚತುಷ್ಪಥ ರಸ್ತೆ ನಿರ್ಮಾಣವಾಗಲಿದೆ. ಶಿರಸಿ– ಹುಬ್ಬಳ್ಳಿ ನಡುವೆ ಸಹ ಚತುಷ್ಪಥ ರಸ್ತೆ ನಿರ್ಮಾಣದ ಯೋಜನೆ ಸಿದ್ಧವಾಗಿದೆ. ಸೋ ಕಾಲ್ಡ್ ಪರಿಸರವಾದಿಗಳ ಮರಗಳ ಲೆಕ್ಕಾಚಾರದಿಂದ ಕಾಮಗಾರಿ ವಿಳಂಬವಾಗಿದೆ. ಆದರೆ, ನಾವು ರಸ್ತೆ ಮಾಡುವುದು ನಿಶ್ಚಿತ’ ಎಂದು ಅನಂತಕುಮಾರ್ ಸ್ಪಷ್ಟಪಡಿಸಿದರು.

ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷ ಚಂದ್ರು ದೇವಾಡಿಗ, ಜಿಲ್ಲಾ ಪಂಚಾಯ್ತಿ ಸದಸ್ಯೆ ಉಷಾ ಹೆಗಡೆ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ನಿರ್ಮಲಾ ಶೆಟ್ಟಿ, ಉಪಾಧ್ಯಕ್ಷೆ ಕವಿತಾ ಕೆರೆಕೊಪ್ಪ, ಬಿಎಸ್ಎನ್ಎಲ್ ಅಧಿಕಾರಿ ಎ.ಬಿ.ಗೌಡ ಇದ್ದರು. ಗ್ರಾಮ ಪಂಚಾಯ್ತಿ ಸದಸ್ಯ ಶಿವರಾಮ ಭಟ್ಟ ಸ್ವಾಗತಿಸಿದರು.

ಹೈವೆ ಮತ್ತೆಲ್ಲಿ ?
‘ಶಿರಸಿಗೆ ಬೈಪಾಸ್ ರಸ್ತೆ ನಿರ್ಮಾಣವಾಗಲಿದ್ದು, ದಾಸನಗದ್ದೆಯಿಂದ ದೊಡ್ನಳ್ಳಿ, ಹಂಚಿನಕೇರಿ ಮಾರ್ಗವಾಗಿ ಕಾಗೇರಿ ಕ್ರಾಸ್ ಮೂಲಕ ಮುಖ್ಯ ರಸ್ತೆಗೆ ಸೇರಲಿದೆ’ ಎಂದು ಅನಂತಕುಮಾರ್ ಹೇಳಿದಾಗ, ಸಭೆಯಲ್ಲಿದ್ದ ಸಾರ್ವಜನಿಕರು ನಕ್ಕರು. ‘ನಮ್ಮಿಬ್ಬರ ಮಧ್ಯೆ ಹೈವೆ ಇಲ್ಲದೇ ಮತ್ತೆಲ್ಲಿ’ ಎಂದು ಸಚಿವರು ಮುಗುಳ್ನಗುತ್ತ ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT