ಭಾನುವಾರ, ಮಾರ್ಚ್ 7, 2021
19 °C
ಜಿಲ್ಲೆಯ 11 ಸಾವಿರ ನಾಯಿಗಳ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ ಶೀಘ್ರವೇ ಟೆಂಡರ್

7 ತಿಂಗಳಲ್ಲಿ 6,200 ಶ್ವಾನ ದಾಳಿ ಪ್ರಕರಣ!

ಸದಾಶಿವ ಎಂ.ಎಸ್ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಜಿಲ್ಲೆಯಲ್ಲಿ ಈ ವರ್ಷದ ಮೊದಲ ಏಳು ತಿಂಗಳ ಅವಧಿಯಲ್ಲಿ ನಾಯಿಗಳಿಂದ ಕಚ್ಚಿಸಿಕೊಂಡವರು ಬರೋಬ್ಬರಿ 6,205 ಮಂದಿ. ಶಿರಸಿ ತಾಲ್ಲೂಕಿನಲ್ಲಿ ಅತ್ಯಧಿಕ 1,138 ಪ್ರಕರಣಗಳು ದಾಖಲಾಗಿವೆ ಎಂದು ಆರೋಗ್ಯ ಇಲಾಖೆಯ ಅಂಕಿ ಅಂಶಗಳು ತಿಳಿಸುತ್ತವೆ.

ಜಿಲ್ಲೆಯ ನಗರ ಮತ್ತು ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸುಮಾರು 75,900 ನಾಯಿಗಳಿವೆ. ಈ ಪೈಕಿ ನಗರ ಹಾಗೂ ಪಟ್ಟಣಗಳಲ್ಲಿ 67 ಸಾವಿರ, ಗ್ರಾಮೀಣ ಭಾಗದಲ್ಲಿ 8,900 ನಾಯಿಗಳಿವೆ ಎಂದು ಗುರುತಿಸಲಾಗಿದೆ. ಶ್ವಾನದಾಳಿ ಪ್ರಕರಣದಲ್ಲಿ ಬೀದಿನಾಯಿಗಳಿಂದ ಕಡಿತಕ್ಕೆ ಒಳಗಾದವರ ಸಂಖ್ಯೆಯೇ ಹೆಚ್ಚಿದೆ.

ಜಿಲ್ಲೆಯಲ್ಲಿ ಪದೇಪದೇ ನಾಯಿ ದಾಳಿಯ ಬಗ್ಗೆ ದೂರುಗಳು ಬರುತ್ತಿರುವ ಕಾರಣ ಅವುಗಳ ನಿಯಂತ್ರಣಕ್ಕೆ ಜಿಲ್ಲಾಡಳಿತ ಮುಂದಾಗಿದೆ. ಈ ಸಂಬಂಧ ಗಂಡು ನಾಯಿಗಳ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಿಸಲಾಗುತ್ತಿದೆ. ಈ ಕಾರ್ಯವು ಈಗ ಆನ್‌ಲೈನ್‌ ಟೆಂಡರ್ ಹಂತದಲ್ಲಿದೆ.

ಶಸ್ತ್ರಚಿಕಿತ್ಸೆ ದುಬಾರಿ: ‘ಪ್ರತಿ ನಾಯಿಯ ಸಂತಾನಶಕ್ತಿ ಶಸ್ತ್ರಚಿಕಿತ್ಸೆಗೆ ಸರ್ಕಾರವು ₹ 465 ನಿಗದಿ ಮಾಡಿದೆ. ಈ ಲೆಕ್ಕಾಚಾರದಂತೆ ಜಿಲ್ಲೆಯ ಎಲ್ಲ ನಾಯಿಗಳಿಗೂ ಶಸ್ತ್ರಚಿಕಿತ್ಸೆ ಮಾಡಿಸಲು ₹ 3.5 ಕೋಟಿ ಬೇಕು. ಸದ್ಯಕ್ಕೆ ಜಿಲ್ಲೆಯಲ್ಲಿ ಒಟ್ಟು 11 ಸಾವಿರ ನಾಯಿಗಳಿಗೆ ₹ 50 ಲಕ್ಷ ವೆಚ್ಚದಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಲಾಗುತ್ತದೆ’ ಎಂದು ನಗರಾಭಿವೃದ್ಧಿ ಕೋಶದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಆರ್.ಪಿ.ನಾಯಕ ಮಾಹಿತಿ ನೀಡಿದರು.

‘ಇವುಗಳಲ್ಲಿ ಗ್ರಾಮೀಣ ಭಾಗದ ಶೇ 10ರಷ್ಟು ಹಾಗೂ ನಗರ ಪ್ರದೇಶದ ಶೇ 50ರಷ್ಟು ನಾಯಿಗಳನ್ನು ಪ್ರಕ್ರಿಯೆಗೆ ಒಳಪಡಿಸಲಾಗುತ್ತದೆ. ಶಸ್ತ್ರಚಿಕಿತ್ಸೆ ಮಾಡುವವರು ಪ್ರಾಣಿ ಹಿಂಸೆ ತಡೆ ಕಾಯ್ದೆ 1961ರ ನಿಯಮಗಳನ್ನು ಪಾಲನೆ ಮಾಡಬೇಕು. ಶಸ್ತ್ರಚಿಕಿತ್ಸೆ ಮಾಡಿದ ಬಳಿಕ ಅವರು ಮೂರು ದಿನ ತಮ್ಮ ಬಳಿಯೇ ಇಟ್ಟುಕೊಂಡು ಪರಿಶೀಲಿಸಬೇಕು. ಬಳಿಕ ಎಲ್ಲಿಂದ ನಾಯಿಗಳನ್ನು ಹಿಡಿಯಲಾಗಿತ್ತೋ ಅಲ್ಲಿಗೇ ತಂದು ಬಿಟ್ಟು ಆ ವ್ಯಾಪ್ತಿಯ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು’ ಎಂದು ತಿಳಿಸಿದರು.

‘ಯಾವ ನಗರ, ಪಟ್ಟಣ ಪ್ರದೇಶ ಅಥವಾ ಗ್ರಾಮದ ವ್ಯಾಪ್ತಿಯಲ್ಲಿ ನಾಯಿಗಳನ್ನು ಹಿಡಿಯಲಾಗಿತ್ತೋ ಅಲ್ಲಿನ ಸ್ಥಳೀಯ ಸಂಸ್ಥೆಗಳೇ ಶಸ್ತ್ರಚಿಕಿತ್ಸೆಯ ಹಣ ಪಾವತಿಸಬೇಕು’ ಎಂದೂ ಅವರು ಹೇಳಿದರು.

‘ಔಷಧಿ: ರಾಜ್ಯಮಟ್ಟದಲ್ಲೇ ಸಮಸ್ಯೆ’: ಜಿಲ್ಲೆಯಲ್ಲಿ ನಾಯಿಗಳಿಂದ ದಾಳಿಗೆ ಒಳಗಾದವರಿಗೆ ರೇಬೀಸ್ ಔಷಧಿ ಸೂಕ್ತ ರೀತಿಯಲ್ಲಿ ಸಿಗುತ್ತಿಲ್ಲ ಎಂಬುದು ಹಲವರ ದೂರಾಗಿದೆ. ಈ ಬಗ್ಗೆ ಸ್ಪಷ್ಟನೆ ನೀಡಿದ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ವಿನೋದ್ ಭೂತೆ, ‘ರೇಬೀಸ್ ಔಷಧಿ ಪೂರೈಕೆಯಲ್ಲಿ ರಾಜ್ಯಮಟ್ಟದಲ್ಲೇ ಸಮಸ್ಯೆಯಿದೆ. ಹಾಗಾಗಿ ಸ್ಥಳೀಯವಾಗಿ ಖರೀದಿಸುವಂತೆ ಇಲಾಖೆಯ ಕೇಂದ್ರ ಕಚೇರಿ ತಿಳಿಸಿದೆ. ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಚಿಕಿತ್ಸೆ ಲಭ್ಯವಿದೆ’ ಎಂದರು.

‘ಆ ಔಷಧಿಯನ್ನು ಹೆಚ್ಚು ದಿನ ಸಂಗ್ರಹಿಸಿ ಇಡುವಂತಿಲ್ಲ. ಕೆಲವೊಮ್ಮೆ ಒಂದೇ ಬಾರಿಗೆ ಹೆಚ್ಚು ಬೇಡಿಕೆ ಬಂದಾಗ ಮಾತ್ರ ಕೊರತೆಯಾಗುತ್ತದೆ. ಆಗ ಬೇರೆ ಕಡೆಯಿಂದ ತರಿಸಿ ಚಿಕಿತ್ಸೆ ನೀಡಲಾಗುತ್ತದೆ. ನಾಯಿ ಕಚ್ಚಿದಾಗ ಯಾರೂ ಸ್ವಯಂ ಚಿಕಿತ್ಸೆಗೆ ಮುಂದಾಗಬಾದರು. ವಿಳಂಬ ಮಾಡದೇ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕು’ ಎಂದು ಅವರು ಸಲಹೆ ನೀಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.