ಉ.ಕ. ಕ್ಷೇತ್ರದಲ್ಲಿ ಶೇ 74.07ರಷ್ಟು ಮತದಾನ

ಸೋಮವಾರ, ಮೇ 27, 2019
33 °C
ಜಿಲ್ಲೆಯಲ್ಲಿ ಶಾಂತಿಯುತ ಮತದಾನ: ಅಭ್ಯರ್ಥಿಗಳ ಭವಿಷ್ಯ ವಿದ್ಯುನ್ಮಾನ ಮತಯಂತ್ರಗಳಲ್ಲಿ ಭದ್ರ

ಉ.ಕ. ಕ್ಷೇತ್ರದಲ್ಲಿ ಶೇ 74.07ರಷ್ಟು ಮತದಾನ

Published:
Updated:
Prajavani

ಕಾರವಾರ: ಉತ್ತರ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ಮಂಗಳವಾರ ನಡೆದ ಮತದಾನದಲ್ಲಿ ಸಂಜೆ 6 ಗಂಟೆಯವರೆ ಸುಮಾರು ಶೇ 74.07ರಷ್ಟು ಮತದಾನವಾಗಿದೆ. ಸಂಜೆಯಾಗುತ್ತಿದ್ದಂತೆ ಮತಗಟ್ಟೆಗಳಲ್ಲಿ ಮತದಾರರ ಸಂಖ್ಯೆ ಹೆಚ್ಚಿದ್ದ ಕಾರಣ, ಮತದಾನದ ಪ್ರಮಾಣದಲ್ಲಿ ಸ್ವಲ್ಪ ಏರಿಕೆ ಕಾಣುವ ಸಾಧ್ಯತೆಯಿದೆ. 2014ರ ಚುನಾವಣೆಯಲ್ಲಿ ಶೇ 69.04ರಷ್ಟು ಮತ ಚಲಾವಣೆಯಾಗಿತ್ತು.

ಈ ಬಾರಿ ಕೆಲವು ಕಡೆಗಳಲ್ಲಿ ವಿದ್ಯುನ್ಮಾನ ಮತಯಂತ್ರಗಳಲ್ಲಿ ದೋಷ, ತಾಂತ್ರಿಕ ಅಡಚಣೆಗಳಿಂದ ಮತದಾನ ಆರಂಭವಾಗುವುದು ವಿಳಂಬವಾಯಿತು. ಉಳಿದಂತೆ ಜಿಲ್ಲೆಯಾದ್ಯಂತ ಮತದಾನ ಶಾಂತಿಯುತವಾಗಿ ನಡೆಯಿತು.

ಬೆಳಿಗ್ಗೆ 7 ಗಂಟೆಗೆ ಮತದಾನ ಆರಂಭವಾಗುತ್ತಿದ್ದಂತೆ ಮತದಾರರು ಸಾಲಾಗಿ ಬಂದು ತಮ್ಮ ಹಕ್ಕು ಚಲಾಯಿಸಿದರು. ಬೆಳಿಗ್ಗೆ 9 ಗಂಟೆಗೆ ಕ್ಷೇತ್ರದಲ್ಲಿ ಶೇ 8.47ರಷ್ಟು ಮತದಾನವಾಗಿತ್ತು. ಬಳಿಕ ಬಿಸಿಲು ಏರುತ್ತಿದ್ದಂತೆ ಮತದಾನದ ಪ್ರಮಾಣವೂ ಹೆಚ್ಚುತ್ತ ಹೋಯಿತು. ಮಧ್ಯಾಹ್ನ ಒಂದು ಗಂಟೆಯ ವೇಳೆಗೆ ಶೇ 39.87ರಷ್ಟು ಮತದಾರರು ಮತ ಚಲಾಯಿಸಿದ್ದರು. ಮಧ್ಯಾಹ್ನ ಮೂರು ಗಂಟೆಗೆ ಶೇ 53.48ರಷ್ಟು ಮತ‌ ಚಲಾವಣೆಯಾಯಿತು.

ನಗರದ ಸೇಂಟ್ ಮೈಕೆಲ್‌ ಕಾನ್ವೆಂಟ್ ಪ್ರೌಢಶಾಲೆಯಲ್ಲಿ ಸ್ಥಾಪಿಸಲಾದ ಮತಗಟ್ಟೆಗಳಲ್ಲಿ ಆರಂಭದಿಂದಲೂ ಮತದಾರರ ಸಾಲು ಹೆಚ್ಚಿತ್ತು. ತಾಲ್ಲೂಕಿನ ಗ್ರಾಮೀಣ ಭಾಗದ ಮತದಾರರು ಆರಂಭದಲ್ಲಿ ಅಷ್ಟೊಂದು ಉತ್ಸಾಹ ತೋರಲಿಲ್ಲ. ಆದರೆ, ಹೊತ್ತು ಏರಿದಂತೆ ಮತಗಟ್ಟೆಗಳತ್ತ ಬಂದು ವಿದ್ಯುನ್ಮಾನ ಮತಯಂತ್ರಗಳಲ್ಲಿ ತಮ್ಮ ಹಕ್ಕನ್ನು ಚಲಾಯಿಸಿದರು. 

ಪ್ರಮುಖರಿಂದ ಮತದಾನ: ಮೈತ್ರಿಕೂಟದ ಅಭ್ಯರ್ಥಿ ಜೆಡಿಎಸ್‌ನ ಆನಂದ ಅಸ್ನೋಟಿಕರ್ ಕಾರವಾರದ ಸೇಂಟ್ ಮೈಕೆಲ್ ಕಾನ್ವೆಂಟ್ ಪ್ರೌಢಶಾಲೆಯ ಮತಗಟ್ಟೆ ಸಂಖ್ಯೆ 100ರಲ್ಲಿ ಮತ ಚಲಾವಣೆ ಮಾಡಿದರು. ಅವರ ತಾಯಿ ಶುಭಲತಾ ಅಸ್ನೋಟಿಕರ್ ಕೂಡ ಜೊತೆಯಲ್ಲಿದ್ದರು. ಇದೇ ಮತಗಟ್ಟೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿನಾಯಕ ಪಾಟೀಲ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮೊಹಮ್ಮದ್ ರೋಶನ್ ಹಾಗೂ ಅವರ ಪತ್ನಿ ಅಂಕಿತಾ ವರ್ಮಾ ತಮ್ಮ ಹಕ್ಕು ಚಲಾಯಿಸಿದರು.

ಶಾಸಕಿ ರೂಪಾಲಿ ನಾಯ್ಕ ಚೆಂಡಿಯಾದ ಸರ್ಕಾರಿ ಶಾಲೆಯ ಮತಗಟ್ಟೆಯಲ್ಲಿ, ಕಾಂಗ್ರೆಸ್ ಮುಖಂಡ ಸತೀಶ ಸೈಲ್ ಕಾರವಾರ ತಾಲ್ಲೂಕಿನ ಮೆಡಿಸಿಟ್ಟಾದ ಸರ್ಕಾರಿ ಶಾಲೆಯಲ್ಲಿ ಮತ ಚಲಾಯಿಸಿದರು.

ಮೊದಲ ಮತದಾನದ ಪುಳಕ: ಉತ್ತರ ಕನ್ನಡ ಜಿಲ್ಲೆಯಲ್ಲಿ 13,958 ಹೊಸ ಮತದಾರರು ಈ ಬಾರಿ ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ. ಅವರಲ್ಲಿ ಸಾವಿರಾರು ಜನರು ತಮ್ಮ ಆಯ್ಕೆಯ ಅಭ್ಯರ್ಥಿಯ ಹೆಸರನ್ನು ಇವಿಎಂಗಳಲ್ಲಿ ದಾಖಲಿಸಿದರು. ಚೆಂಡಿಯಾದ ಸರ್ಕಾರಿ ಶಾಲೆಯ ಮತಗಟ್ಟೆಯಲ್ಲಿ ಮೊದಲಿಗರಾಗಿ ತಮ್ಮ ಮೊದಲ ಮತವನ್ನು ಚಲಾಯಿಸಿದ ಅಶ್ವಿನಿ ನಾಗರಾಜ ಸ್ವಾಮಿ ಸಂಭ್ರಮಿಸಿದರು.

ಗಾಬಿತವಾಡದ ರೋಶನಿ ಮತ ಚಲಾವಣೆಯ ಪುಳಕವನ್ನು ಹಂಚಿಕೊಂಡರು. ‘ಮೊದಲ ಬಾರಿಗೆ ಮತ ಚಲಾಯಿಸಲು ಸಂಭ್ರಮವಾಯಿತು. ಸಂಸತ್ತಿನಲ್ಲಿ ನನ್ನ ಪ್ರತಿನಿಧಿಯನ್ನು ಆಯ್ಕೆ ಮಾಡಿದ ಸಂತೃಪ್ತಿ, ಹೆಮ್ಮೆಯಿದೆ. ಚುನಾವಣಾ ಕರ್ತವ್ಯದಲ್ಲಿರುವ ಸಿಬ್ಬಂದಿಯೂ ಸೂಕ್ತವಾದ ಮಾಹಿತಿ, ಮಾಗರ್ದರ್ಶನ ಮಾಡಿದ್ದರಿಂದ ಮತ ಚಲಾವಣೆಯ ಸಂದರ್ಭ ಯಾವುದೇ ಗೊಂದಲವಾಗಲಿಲ್ಲ’ ಎಂದರು.

ಹಿರಿಯ ಮತದಾರರು ತಮ್ಮ ಮಕ್ಕಳು, ಮೊಮ್ಮಕ್ಕಳೊಂದಿಗೆ ಮತಗಟ್ಟೆಗಳಿಗೆ ಬಂದು ಮತ ಚಲಾಯಿಸಿದರು. ಮತದಾರರು ಮತಗಟ್ಟೆ ಅಧಿಕಾರಿಗಳು, ವಿವಿಧ ಪಕ್ಷಗಳ ಏಜೆಂಟರ ಜತೆ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇರುವುದನ್ನು ಖಚಿತ ಪಡಿಸಿಕೊಳ್ಳುತ್ತಿದ್ದುದು  ಸಾಮಾನ್ಯವಾಗಿತ್ತು ಮತಗಟ್ಟೆಗಳಿಂದ 100 ಮೀಟರ್ ದೂರದಲ್ಲೇ ವಾಹನಗಳನ್ನು ನಿಷೇಧಿಸಲಾಗಿತ್ತು. ಅಲ್ಲದೇ ಅಷ್ಟೇ ದೂರದಲ್ಲಿ ರಾಜಕೀಯ ಪಕ್ಷಗಳ ಹಾಗೂ ಅಭ್ಯರ್ಥಿಗಳ ಏಜೆಂಟರಿಗೆ ಸ್ಥಳ ನಿಗದಿ ಮಾಡಲಾಗಿತ್ತು. ತಮ್ಮ ಪಕ್ಷಗಳ ಧ್ವಜವೊಂದನ್ನು ಕುರ್ಚಿಗೆ ಕಟ್ಟಿ, ಮತದಾರರಿಗೆ ಮಾಹಿತಿ ನೀಡುತ್ತಿದ್ದರು.

ವಿವಿಧೆಡೆ ವಿಳಂಬವಾದ ಮತದಾನ: ವಿವಿಧೆಡೆ ಮತಯಂತ್ರಗಳಲ್ಲಿ ದೋಷ ಹಾಗೂ ತಾಂತ್ರಿಕ ಕಾರಣಗಳಿಂದಾಗಿ ಮತದಾನ ವಿಳಂಬವಾಗಿ ಆರಂಭವಾಯಿತು. ಅಮದಳ್ಳಿಯ ಮತಗಟ್ಟೆಯಲ್ಲಿ ವಿವಿಪ್ಯಾಟ್‌ನಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತು. ಹಾಗಾಗಿ ಅದನ್ನು ಬದಲಾವಣೆ ಮಾಡಲಾಯಿತು.

ಕಾರವಾರದ ಬಾಯಿ ಕುವರ ಬಾಯಿ ಸರ್ಕಾರಿ ಶಾಲೆ, ಕುರ್ನಿಪೇಟೆ ಮತಗಟ್ಟೆ 130, ಚಿತ್ತಾಕುಲಾ ಶಿವಾಜಿ ಕಾಲೇಜಿನ  ಮತಗಟ್ಟೆ, ನಂದನಗದ್ದಾ ಮತಗಟ್ಟೆ ಸಂಖ್ಯೆ 73ರಲ್ಲಿ, ಕೇಣಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಗಳಲ್ಲಿ ತಾಂತ್ರಿಕ ಕಾರಣಗಳಿಂದ ಸಮಸ್ಯೆಯಾಗಿತ್ತು. ಚುನಾವಣಾ ಕರ್ತವ್ಯದಲ್ಲಿರುವ ಸಿಬ್ಬಂದಿ ಕೂಡಲೇ ಅವುಗಳನ್ನು ಸರಿಪಡಿಸಿ ಮತದಾನಕ್ಕೆ ಅನುವು ಮಾಡಿಕೊಟ್ಟರು.

ವಿದ್ಯಾರ್ಥಿಗಳಿಂದ ‘ಮಾರ್ಗದರ್ಶನ’: ವಿವಿಧ ಶಾಲೆಗಳ ಮತದಾನ ಕೇಂದ್ರಗಳಲ್ಲಿ ಮತಗಟ್ಟೆಗಳ ಮಾಹಿತಿ ನೀಡಲು ವಿದ್ಯಾರ್ಥಿಗಳು ಸ್ವಯಂ ಸೇವಕರಾಗಿ ಭಾಗವಹಿಸಿ ಗಮನ ಸೆಳೆದರು. ಶಾಸಕರ ಮಾದರಿ ಶಾಲೆ, ಸೇಂಟ್ ಮೈಕೆಲ್ ಕಾನ್ವೆಂಟ್ ಪ್ರೌಢಶಾಲೆಯಲ್ಲಿ ಆಸಕ್ತ ವಿದ್ಯಾರ್ಥಿಗಳು ಮತದಾರರಿಗೆ ಮಾರ್ಗದರ್ಶನ ಮಾಡಿದರು. ಈ ಮೂಲಕ ಪ್ರಜಾಪ್ರಭುತ್ವದ ಚುನಾವಣೆ ವ್ಯವಸ್ಥೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು.

***

ವಿಧಾನಸಭಾ ಕ್ಷೇತ್ರವಾರು

ವಿಧಾನಸಭೆ: ಮತದಾನ ಪ್ರಮಾಣ (ಶೇಕಡಾವಾರು)
ಖಾನಾ‍ಪುರ: 70.72
ಕಿತ್ತೂರು: 72.56
ಹಳಿಯಾಳ: 73.04
ಕಾರವಾರ: 72.42
ಕುಮಟಾ: 77.13
ಭಟ್ಕಳ: 71.73
ಶಿರಸಿ: 78.09
ಯಲ್ಲಾಪುರ: 77.75
ಒಟ್ಟು: 74.07

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !