ಯಲ್ಲಾಪುರ: ತಾಲ್ಲೂಕಿನ ಅರಬೈಲ್ ಘಟ್ಟದ ತಾಳಿಕುಂಬ್ರಿ ಕ್ರಾಸ್ ಬಳಿ ತಿರುವಿನಲ್ಲಿ ಚಲಿಸುತ್ತಿದ್ದ ಗ್ಯಾಸ್ ಟ್ಯಾಂಕರ್‌ನ ಟ್ರಾಲಿಯಿಂದ ಭರ್ತಿಯಾಗಿದ್ದ ಟ್ಯಾಂಕರ್ ಕಳಚಿ ಬಿದ್ದಿದೆ. ಅದನ್ನು ಶನಿವಾರ ತೆರವು ಮಾಡಲಾಯಿತು.
ಶುಕ್ರವಾರ ಸಂಜೆ ಈ ಅವಘಡ ಸಂಭವಿಸಿದ್ದು, ಅದೃಷ್ಟವಶಾತ್ ಅನಿಲ ಸೋರಿಕೆ ಆಗಿಲ್ಲ. ಈ ಟ್ಯಾಂಕರ್ ಭಾರತ್ ಪೆಟ್ರೋಲಿಯಂಗೆ ಸೇರಿದ್ದಾಗಿದ್ದು, ಮಂಗಳೂರಿನಿಂದ ಮಹಾರಾಷ್ಟ್ರದ ಕಡೆ ಹೊರಟಿತ್ತು.
ವಿಷಯ ತಿಳಿದ ತಕ್ಷಣ ರಾಷ್ಟ್ರೀಯ ಹೆದ್ದಾರಿ ಉಸ್ತುವಾರಿ ಮುರುಗೇಶ ಶೆಟ್ಟಿ ಟ್ಯಾಂಕರ್‌ನ ಚಾಲಕನನ್ನು ಸಿಗ್ನಲ್ ಬರುವ ಕಡೆ ಕರೆದುಕೊಂಡು ಹೋಗಿ ಮಾಲೀಕರನ್ನು ಸಂಪರ್ಕಿಸುವಂತೆ ಮಾಡಿದರು. ಹೆದ್ದಾರಿ ಗಸ್ತುವಾಹನಕ್ಕೆ ಮಾಹಿತಿ ನೀಡಿ ಸಂಚಾರಕ್ಕೆ ಅಡಚಣೆಯಾಗದಂತೆ ನೋಡಿಕೊಂಡರು.
ಅಂಕೋಲಾದಿಂದ ಕ್ಷಿಪ್ರ ಕಾರ್ಯಾಚರಣೆ ಪಡೆಯ ತಂತ್ರಜ್ಞರು ಬಂದು ಪರಿಶೀಲಿಸಿ ಗ್ಯಾಸ್ ಸೋರಿಕೆ ಇಲ್ಲವೆಂದು ಖಚಿತಪಡಿಸಿದರು. ಶನಿವಾರ ಬೆಳಿಗ್ಗೆ ಎರಡು ಕ್ರೇನ್ ಬಳಸಿ ತಂತ್ರಜ್ಞರ ಸಮ್ಮುಖದಲ್ಲಿ ಮೇಲಕ್ಕೆತ್ತಿ ಟ್ರಾಲಿಗೆ ಅಳವಡಿಸಲಾಯಿತು.
ಈ ಸಂದರ್ಭದಲ್ಲಿ ಸ್ವಲ್ಪ ಹೊತ್ತು ಹೆದ್ದಾರಿಯಲ್ಲಿ ವಾಹನ ಸಂಚಾರದಲ್ಲಿ ವ್ಯತ್ಯಯ ಉಟಾಯಿತು. ಸ್ಥಳದಲ್ಲಿ ಅಗ್ನಿಶಾಮಕ ದಳ ಹಾಗೂ ಪೊಲೀಸ್ ಸಿಬ್ಬಂದಿ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.