ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲು ಅಪಘಾತ; ಅರಬೈಲ್, ಆರತಿಬೈಲ್ ಘಟ್ಟದಲ್ಲಿ ಹೆಚ್ಚುತ್ತಿರುವ ವಾಹನಗಳ ಪಲ್ಟಿ

Last Updated 20 ಸೆಪ್ಟೆಂಬರ್ 2021, 16:02 IST
ಅಕ್ಷರ ಗಾತ್ರ

ಕಾರವಾರ: ತಿರುವಿನಲ್ಲಿ ಪಲ್ಟಿಯಾದ ಲಾರಿ.. ಮತ್ತೊಂದೆಡೆ ಮುಖಾಮುಖಿ ಡಿಕ್ಕಿಯಾದ ವಾಹನಗಳು.. ಇನ್ನೊಂದೆಡೆ ಘಟ್ಟದ ಏರಿಯನ್ನು ಸಾಗಲಾಗದೇ ರಸ್ತೆಯಲ್ಲಿ ನಿಂತ ಕಂಟೈನರ್‌.. ದಿನವೂ ಒಂದಲ್ಲ ಒಂದು ಅಪಘಾತ...

ಇದು ಅಂಕೋಲಾ– ಯಲ್ಲಾಪುರ ನಡುವೆ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಸಾಮಾನ್ಯವಾಗಿ ಕಂಡು ಬರುವ ದೃಶ್ಯಗಳು. ಮಳೆಗಾಲದಲ್ಲಿ ಹೆದ್ದಾರಿಯ ಅಲ್ಲಲ್ಲಿ ಉಂಟಾಗಿರುವ ಹೊಂಡಗಳು, ಅರಬೈಲ್‌ ಘಟ್ಟದಲ್ಲಿ ಗುಡ್ಡ ಕುಸಿತದಿಂದ ರಸ್ತೆಯ ಮೇಲಾಗಿರುವ ಒತ್ತಡಗಳಿಂದಾಗಿ ವಾಹನ ಸಂಚಾರ ಮತ್ತಷ್ಟು ಕಠಿಣವಾಗಿದೆ. ದೊಡ್ಡ ವಾಹನಗಳ ಮೇಲೆ ಚಾಲಕರು ಸ್ವಲ್ಪ ನಿಯಂತ್ರಣ ತಪ್ಪಿದರೂ ಅಪಘಾತ ಕಟ್ಟಿಟ್ಟ ಬುತ್ತಿಯಂತಾಗಿದೆ.

ಅರಬೈಲ್, ಆರತಿಬೈಲ್ ಘಟ್ಟಗಳ ತಿರುವುಗಳು ಈ ಹಿಂದಿನಿಂದಲೂ ಅಪಾಯಕಾರಿಯಾಗಿದ್ದವು. ಮಳೆಗಾಲದ ಅವಧಿಯಲ್ಲಿ ಹೆದ್ದಾರಿಯ ಬದಿಯಲ್ಲಿ ಆಗಿರುವ ಗುಡ್ಡ ಕುಸಿತಗಳಿಂದಾಗಿ ಮತ್ತಷ್ಟು ತೊಂದರೆಯಾಗಿದೆ.

‘ಹೆದ್ದಾರಿಯ ಘಟ್ಟದಲ್ಲಿ ಸಾಗುವುದು ದೊಡ್ಡ ಅನಿಶ್ಚಿತತೆ ಎಂಬಂತಾಗಿದೆ. ಯಾವುದೋ ಒಂದು ತಿರುವಿನಲ್ಲಿ ಲಾರಿ, ಕಂಟೈನರ್ ಲಾರಿ, ಟ್ಯಾಂಕರ್‌ನಂತಹ ವಾಹನಗಳು ಬಾಕಿಯಾಗಿದ್ದರೆ ಇಡೀ ಘಟ್ಟದಲ್ಲಿ ವಾಹನಗಳ ಸಂಚಾರ ಅಸ್ತವ್ಯಸ್ತವಾಗುತ್ತಿದೆ. ಇತ್ತೀಚಿನ ಕೆಲವು ದಿನಗಳಿಂದ ನಾಟಾ ಸಾಗಿಸುವ ಲಾರಿ, ಅಡುಗೆ ಅನಿಲ, ರಾಸಾಯನಿಕ ಸಾಗಣೆಯ ಟ್ಯಾಂಕರ್‌ಗಳು, ವಿವಿಧ ಸರಕು ಸಾಗಿಸುತ್ತಿದ್ದ ಲಾರಿಗಳು ರಸ್ತೆಯ ಮಧ್ಯೆ ಪಲ್ಟಿಯಾಗಿವೆ. ಸೆ.19ರಂದು ಸರ್ಕಾರಿ ಬಸ್ ಮತ್ತು ಲಾರಿ ಮುಖಾಮುಖಿ ಡಿಕ್ಕಿಯಾಗಿವೆ. ತಿರುವುಗಳಲ್ಲಿ ಈ ರೀತಿ ಆದಾಗ ಇತರ ವಾಹನಗಳಿಗೂ ಮುಂದೆ ಹೋಗಲು ಜಾಗ ಇರುವುದಿಲ್ಲ’ ಎನ್ನುತ್ತಾರೆ ಕಾರು ಚಾಲಕ ಕಾರವಾರದ ರಮೇಶ ನಾಯ್ಕ.

‘ಕೆಲವು ಅಪಘಾತಗಳು, ವಾಹನಗಳು ರಸ್ತೆ ಮಧ್ಯೆ ಬಾಕಿಯಾಗುವ ಪ್ರಕರಣಗಳು ಚಾಲಕರ ನಿರ್ಲಕ್ಷ್ಯದಿಂದಲೂ ಆಗುತ್ತಿವೆ. ಮಿತಿ ಮೀರಿದ ಸರಕು ಹೇರುತ್ತಾರೆ. ದೂರದ ಊರುಗಳಿಗೆ ಸಾಗುವ ವಾಹನಗಳ ಚಕ್ರಗಳ ಪರಿಸ್ಥಿತಿ, ‌ಕ್ಲಚ್ ಮತ್ತು ಬ್ರೇಕ್‌ಗಳನ್ನೂ ಘಟ್ಟವೇರುವ ಮೊದಲು ಪರಿಶೀಲಿಸುವುದಿಲ್ಲ. ಅವುಗಳು ಸುಸ್ಥಿತಿಯಲ್ಲಿದ್ದರೆ ಮಾತ್ರ ಘಟ್ಟದ ರಸ್ತೆಯನ್ನು ಏರುವ ಅಥವಾ ಇಳಿಯಲು ಮುಂದಾಗಬೇಕು. ಇಲ್ಲದಿದ್ದರೆ ಅಪಾಯವನ್ನು ಖುದ್ದು ಆಹ್ವಾನಿಸಿದಂತಾಗುತ್ತದೆ’ ಎಂದು ಅವರು ಹೇಳುತ್ತಾರೆ.

ಶೀಘ್ರವೇ ಆರಂಭ ಸಾಧ್ಯತೆ

‘ಅರಬೈಲ್ ಘಟ್ಟದಲ್ಲಿ ಗುಡ್ಡ ಕುಸಿದ ಪ್ರದೇಶದಲ್ಲಿ ರಸ್ತೆಯನ್ನು ತಾತ್ಕಾಲಿಕವಾಗಿ ದುರಸ್ತಿ ಮಾಡಲಾಗಿದೆ. ಇಷ್ಟು ದಿನ ಮಳೆಯೂ ಹೆಚ್ಚು ಇದ್ದ ಕಾರಣ ಶಾಶ್ವತ ಕಾಮಗಾರಿ ಹಮ್ಮಿಕೊಳ್ಳಲು ಸಾಧ್ಯವಾಗಲಿಲ್ಲ. ಕಾಮಗಾರಿಗೆ ಸರ್ಕಾರಗಳಿಂದಲೂ ಹಣ ಬಿಡುಗಡೆಯಾಗಿದೆ. ನಾಲ್ಕೈದು ದಿನಗಳಿಂದ ಮಳೆ ಕಡಿಮೆಯಾಗಿದೆ. ಇದೇ ರೀತಿಯ ವಾತಾವರಣ ಮುಂದುವರಿದರೆ ಶೀಘ್ರವೇ ಕಾಮಗಾರಿ ಆರಂಭಿಸಬಹುದು’ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಯೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT