ಭಾನುವಾರ, ಜೂನ್ 13, 2021
21 °C
ಚಿಕ್ಕನಕೋಡ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಸರ್ಕಾರ ನೀಡಿದ ಸೌಲಭ್ಯ ಮಾರಾಟದ ಆರೋಪ

ಹೊನ್ನಾವರ: ನೈಜ ಸಂತ್ರಸ್ತರಿಗೆ ಮನೆ ಮರೀಚಿಕೆ

ಎಂ.ಜಿ.ಹೆಗಡೆ Updated:

ಅಕ್ಷರ ಗಾತ್ರ : | |

prajavani

ಹೊನ್ನಾವರ: ‘ತಾಲ್ಲೂಕಿನ ಚಿಕ್ಕನಕೋಡ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಮನೆ ಹಂಚಿಕೆಯಲ್ಲಿ ಸ್ವಜನ ಪಕ್ಷಪಾತ ಮಾಡಲಾಗಿದೆ. ನದಿಯಂಚಿಗೆ ವಾಸಿಸುವ ಕುಟುಂಬಗಳಿಗೆ ಮನೆ ನೀಡದೆ, ನಿಜವಾಗಿ ಅಗತ್ಯ ಇಲ್ಲದವರಿಗೂ ನೀಡಲಾಗಿದೆ...’

‘ನೆರೆ ನದಿ’ ಎಂದೇ ಕುಖ್ಯಾತಿ ಹೊಂದಿರುವ ಗುಂಡಬಾಳಾ ನದಿ ದಂಡೆಯಲ್ಲಿರುವ ಚಿಕ್ಕನಕೋಡ ಗ್ರಾಮದಲ್ಲಿ ಆರಂಭಿಸಲಾಗಿರುವ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದ ಹಲವರ ಆರೋಪವಿದು.

‘ಮನೆ ನೀಡುವಲ್ಲಿ ಈ ಹಿಂದಿನಿಂದಲೂ ಜನಪ್ರತಿನಿಧಿಗಳು ಸ್ವಜನ ಪಕ್ಷಪಾತ ಮಾಡಿದ್ದಾರೆ. ನದಿಯಂಚಿಗೆ ವಾಸಿಸುವ ಕುಟುಂಬಗಳಿಗೆ ಮನೆ ನೀಡಿಲ್ಲ. ಮನೆ ಪಡೆದುಕೊಂಡ ಕೆಲವರು ಬಾಡಿಗೆಗೆ ನೀಡಿದ್ದಾರೆ. ಇನ್ನು ಕೆಲವರು ಮಾರಾಟ ಮಾಡಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗುಂಡಬಾಳಾ ನದಿಯಲ್ಲಿ ಪ್ರತಿ ಮಳೆಗಾಲದಲ್ಲಿ ಹಲವು ಬಾರಿ ನೆರೆ ಬರುತ್ತದೆ. ಸುತ್ತಲಿನ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗುತ್ತದೆ. ನೆರೆ ಬಂದಾಗ ಪರಿಹಾರ ಕೇಂದ್ರಗಳಲ್ಲಿ ಸಂತ್ರಸ್ತರು ಆಶ್ರಯ ಪಡೆಯುವುದು, ಈ ಕೇಂದ್ರಗಳಿಗೆ ರಾಜಕಾರಣಿಗಳು ಭೇಟಿ ನೀಡಿ ಸಾಂತ್ವನ ಹೇಳುವುದು, ನೆರೆ ಇಳಿದ ಮೇಲೆ ನೆರೆ ಪೀಡಿತರೆಲ್ಲ ಕೆಸರು ತುಂಬಿದ ತಮ್ಮ ಮನೆಗಳಿಗೆ ತೆರಳುವುದು, ನಂತರ ತಮ್ಮ ಬದುಕನ್ನು ಮತ್ತೆ ಕಟ್ಟಿಕೊಳ್ಳುವುದು ಲಾಗಾಯ್ತಿನಿಂದ ನಡೆದುಕೊಂಡು ಬಂದಿವೆ.

ಈ ಮಳೆಗಾಲದಲ್ಲಿ, ಚಿಕ್ಕನಕೋಡ ಗ್ರಾಮದ ಗುಂಡಿಬೈಲ್ ನಂ.2 ಶಾಲೆಯಲ್ಲಿ ಎರಡನೇ ಬಾರಿ ಪರಿಹಾರ ಕೇಂದ್ರ ತೆರೆಯಲಾಗಿದೆ. ಕೋವಿಡ್ ಭೀತಿಯ ನಡುವೆಯೂ 74 ಜನ ಆಶ್ರಯ ಪಡೆದಿದ್ದಾರೆ. ನೆರೆ ಪೀಡಿತರಲ್ಲಿ ಹೆಚ್ಚಿನವರು ಕ್ರಿಶ್ಚಿಯನ್, ಪರಿಶಿಷ್ಟ ಜಾತಿ, ನಾಮಧಾರಿ ಹಾಗೂ ಇತರ ಹಿಂದುಳಿದ ಜಾತಿಗೆ ಸೇರಿದ ಬಡವರಾಗಿದ್ದಾರೆ.

ಇವರಲ್ಲಿ ಕೆಲವರಿಗೆ ಗುಂಟೆ ಲೆಕ್ಕದಲ್ಲಿ ಜಮೀನಿದೆ. ಸಣ್ಣ ಪುಟ್ಟ ಉದ್ಯೋಗ ಹಾಗೂ ಕೂಲಿ ಕಾರ್ಮಿಕರಾಗಿ ಕೆಲಸ ಮಾಡಿಕೊಂಡಿರುವ ಇವರಲ್ಲಿ, ಹೆಚ್ಚಿನವರಿಗೆ ಎರಡು ಹೊತ್ತಿನ ಊಟಕ್ಕೆ ಸಮಸ್ಯೆ ಇಲ್ಲ. ಆದರೆ, ಇವರು ಬೇರೆಡೆ ಜಾಗ ಖರೀದಿಸಿ ಮನೆ ಕಟ್ಟುವಷ್ಟು ಸ್ಥಿತಿವಂತರಲ್ಲ. ಹಾಗಾಗಿ ನೆರೆಯ ಕೂಪಕ್ಕೆ ಸಿಲುಕಿ ನಲುಗುತ್ತಿದ್ದಾರೆ.

ಎರಡು ಮನೆ ಕುಸಿತ: ಗುಂಡಬಾಳಾ ನದಿ ದಂಡೆಯ ತಗ್ಗು ಪ್ರದೇಶಗಳ ಕುಟುಂಬಗಳನ್ನು ಸ್ಥಳಾಂತರಿಸಿ ಬೇರೆಡೆ ವಸತಿ ಕಲ್ಪಿಸಲು ದಶಕಗಳ ಹಿಂದೆಯೇ ಯೋಜನೆ ರೂಪಿಸಲಾಗಿದೆ. ಚಿಕ್ಕನಕೋಡ ಗ್ರಾಮದಲ್ಲಿ ಮೂರು ಎಕರೆ ಜಾಗವನ್ನೂ ಗುರುತಿಸಲಾಗಿದೆ. ಇಲ್ಲಿ 27 ನಿವೇಶನಗಳಲ್ಲಿ ಫಲಾನುಭವಿಗಳಿಗೆ ಮನೆ ನೀಡಲಾಗಿದೆ. ಇದಕ್ಕೂ ಮೊದಲು ಆಶ್ರಯ ಯೋಜನೆಯಡಿ ಕಟ್ಟಿದ್ದ ಎರಡು ಮನೆಗಳು ಸಂಪೂರ್ಣ ಕುಸಿದಿವೆ.

‘ನೆರೆ ಇಳಿದ ಮೇಲೆ ಪರಿಹಾರ ಕೇಂದ್ರದಿಂದ ಪುನಃ ಮನೆಗೆ ಹೋಗಿ ಅದನ್ನು ಮತ್ತೆ ವಾಸಯೋಗ್ಯವನ್ನಾಗಿ ಮಾಡುವಲ್ಲಿ ಹೈರಾಣಾಗುತ್ತೇವೆ. ಮೇಲ್ಭಾಗದಲ್ಲಿ ಮನೆ ಕಟ್ಟಿಕೊಡಿ ಎಂಬ ನಮ್ಮ ಬೇಡಿಕೆಗೆ ಯಾರೂ ಸ್ಪಂದಿಸುತ್ತಿಲ್ಲ’ ಎಂದು ಗ್ರೇಸಿ ಫರ್ನಾಂಡಿಸ್, ದೇವಿ ಹಳ್ಳೇರ, ಸುಬ್ಬಿ ನಾಯ್ಕ, ಲಕ್ಷ್ಮೀ ನಾಯ್ಕ, ವಿನೋದ ಸಾಲ್ವದೋರ್, ಅಶೋಕ ಫರ್ನಾಂಡಿಸ್ ಮತ್ತಿತರ 40ಕ್ಕೂ ಹೆಚ್ಚು ಜನರು ಅಳಲು ತೋಡಿಕೊಂಡರು.

***

ಮನೆ ನಿರ್ಮಿಸಲು ಲಭ್ಯ ಜಾಗದ ಸರ್ವೆ ಮಾಡಿ ನಿವೇಶನ ಗುರುತಿಸಲು ತಹಶೀಲ್ದಾರರಿಗೆ ಕೋರಿದ್ದೇವೆ. ನಂತರ ರಾಜೀವ ವಸತಿ ನಿಗಮದಿಂದ ಮನೆ ನಿರ್ಮಿಸಲಾಗುವುದು.

- ಗೀತಾ ಹೆಗಡೆ, ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ.

***

ಜಾಗ ಈ ಹಿಂದೆ ಜಿಲ್ಲಾ ಪಂಚಾಯ್ತಿ ವಶದಲ್ಲಿತ್ತು. ಜಾಗದ ಲಭ್ಯತೆ ಆಧರಿಸಿ ಕ್ರಮ ಜರುಗಿಸಲಾಗುವುದು. ನೈಜ ಸಂತ್ರಸ್ತರಿಗೆ ಮನೆ, ನಿವೇಶನ ಸಿಗಲು ಕ್ರಮ ಜರುಗಿಸಲಾಗುವುದು.

- ವಿವೇಕ ಶೇಣ್ವಿ, ತಹಶೀಲ್ದಾರ

***

ಮನೆ ಬೇಕು ಎಂದು ಹಲವು ಬಾರಿ ಮನವಿ ಸಲ್ಲಿಸಿದ್ದೇವೆ. ಜನಪ್ರತಿನಿಧಿಗಳ ಕಣ್ಣೊರೆಸುವ ತಂತ್ರಕ್ಕೆ ರೋಸಿ ಹೋಗಿ, ಈ ಬಾರಿ ಒಗ್ಗೂಡಿ ನ್ಯಾಯಕ್ಕಾಗಿ ಹೋರಾಡಲಿದ್ದೇವೆ.

- ಸುನೀಲ್ ಲೋಪಿಸ್, ಸಂತ್ರಸ್ತ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು