ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಣ್ಣ ಲೋಪಕ್ಕೂ ಅವಕಾಶ ನೀಡದಿರಿ

ಜಾತ್ರಾ ಪೂರ್ವಭಾವಿ ಸಭೆಯಲ್ಲಿ ಎಡಿಸಿ ರಾಜು ಮೊಗವೀರ
Last Updated 10 ಮಾರ್ಚ್ 2022, 14:55 IST
ಅಕ್ಷರ ಗಾತ್ರ

ಶಿರಸಿ: ಜಾತ್ರೆ ವೇಳೆ ಸ್ವಚ್ಛತೆ, ಆರೋಗ್ಯದ ದೃಷ್ಟಿಯಿಂದ ಹೆಚ್ಚು ಮುನ್ನೆಚ್ಚರಿಕೆ ವಹಿಸಬೇಕು. ಸಣ್ಣ ಲೋಪಕ್ಕೂ ಅವಕಾಶ ನೀಡಬಾರದು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವೀರ ಹೇಳಿದರು.

ಇಲ್ಲಿನ ಮಿನಿ ವಿಧಾನಸೌಧದಲ್ಲಿ ಗುರುವಾರ ಮಾರಿಕಾಂಬಾ ಜಾತ್ರೆ ಪೂರ್ವಭಾವಿ ಸಭೆ ನಡೆಸಿದ ಅವರು, ‘ದಕ್ಷಿಣ ಭಾರತದ ಅತಿದೊಡ್ಡ ಜಾತ್ರೆ ಆಗಿರುವ ಕಾರಣ ಬರುವ ಭಕ್ತರ ಸಂಖ್ಯೆಯೂ ಹೆಚ್ಚಿರಲಿದೆ. ಜಾತ್ರೆಪೇಟೆಯಲ್ಲಿ ಆಹಾರ ಸುರಕ್ಷತೆಗೆ ಗಮನಹರಿಸಬೇಕು. ಜಾತ್ರೆ ವೇಳೆ ತುರ್ತು ಚಿಕಿತ್ಸೆಗೆ ಆಸ್ಪತ್ರೆಯಲ್ಲಿ ಪ್ರತ್ಯೇಕ ವ್ಯವಸ್ಥೆ ಮೀಸಲಿಡಬೇಕು’ ಎಂದರು.

‘ಹೆಸ್ಕಾಂ ಸಹಾಯವಾಣಿ ಆರಂಭಿಸಬೇಕು. ಜಾತ್ರೆಪೇಟೆಯಲ್ಲಿ ಸಂಚಾರಕ್ಕೆ ಅಡ್ಡಿಯಾಗುವಂತೆ ಮಳಿಗೆ ಸ್ಥಾಪಿಸದಂತೆ ಎಚ್ಚರವಹಿಸಬೇಕು. ಮಳಿಗೆಗಳ ವಿಸ್ತರಣೆಗೆ ಅವಕಾಶ ಕೊಡಬಾರದು. ಊಟ, ಪಾನಕ ವಿತರಣೆ ಬಗ್ಗೆ ಆಹಾರ ಸುರಕ್ಷತಾ ತಪಾಸಣೆ ತಂಡ ನಿಗಾ ಇಡಬೇಕು’ ಎಂದರು.

ಭದ್ರತೆ ಕುರಿತು ವಿವರಿಸಿದ ಡಿಎಸ್ಪಿ ರವಿ ನಾಯ್ಕ, ‘ಜಾತ್ರಾ ಕರ್ತವ್ಯಕ್ಕೆ ಸುಮಾರು 800 ಸಿಬ್ಬಂದಿ ನಿಯೋಜಿಸಲಾಗುತ್ತಿದೆ. ಮೂರು ವಲಯಗಳನ್ನಾಗಿ ವಿಂಗಡಿಸಿಕೊಂಡಿದ್ದೇವೆ. ಇಪ್ಪತ್ತು ಜನರ ಅಪರಾಧ ಪತ್ತೆ ದಳ ರಚಿಸಲಾಗಿದೆ. ಆಯಕಟ್ಟಿನ ಜಾಗದಲ್ಲಿ 40 ಜನ ಕ್ಷಿಪ್ರ ಕಾರ್ಯಪಡೆ ಸಿಬ್ಬಂದಿ ನಿಯೋಜಿಸಲಾಗುವುದು. 15 ಕಡೆಗಳಲ್ಲಿ ವಾಹನ ನಿಲುಗಡೆಗೆ ಸ್ಥಳ ನಿಗದಿಪಡಿಸಿದ್ದೇವೆ’ ಎಂದರು.

ಪೌರಾಯುಕ್ತ ಕೇಶವ ಚೌಗುಲೆ, ‘ಸ್ವಚ್ಛತೆಗೆ ಹೆಚ್ಚುವರಿ ಸಿಬ್ಬಂದಿ ನಿಯೋಜಿಸಿಕೊಳ್ಳಲಾಗಿದೆ. 12 ಕಡೆಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ’ ಎಂದು ಮಾಹಿತಿ ನೀಡಿದರು.

ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ಉಪಾಧ್ಯಕ್ಷೆ ವೀಣಾ ಶೆಟ್ಟಿ, ಉಪವಿಭಾಗಾಧಿಕಾರಿ ದೇವರಾಜ ಆರ್., ತಹಶೀಲ್ದಾರ ಎಂ.ಆರ್.ಕುಲಕರ್ಣಿ, ಧರ್ಮದರ್ಶಿ ಮಂಡಳದ ಅಧ್ಯಕ್ಷ ಆರ್.ಜಿ.ನಾಯ್ಕ, ಉಪಾಧ್ಯಕ್ಷ ಸುಧೀಶ ಜೋಗಳೇಕರ ಇದ್ದರು.

ಸಹಬಾಳ್ವೆಯ ಜಾತ್ರೆ ನಡೆಯಲಿ:

‘ಮಾರಿಕಾಂಬಾ ದೇವಿ ಜಾತ್ರೆ ಸಹಬಾಳ್ವೆಗೆ ಹೆಸರಾಗಿದ್ದು ಈ ಕೀರ್ತಿಯನ್ನು ಉಳಿಸಿಕೊಳ್ಳಬೇಕು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವೀರ ಹೇಳಿದರು.

ಶಾಂತಿಪಾಲನಾ ಸಭೆಯಲ್ಲಿ ಮಾತನಾಡಿದ ಅವರು ‘ಸಮಸ್ಯೆಗಳು ಉದ್ಭವಿಸಿದರೆ ಕೂಡಲೇ ಪೊಲೀಸರಿಗೆ ವಿಷಯ ತಿಳಿಸಬೇಕು. ಜಾತ್ರೆಗೆ ದೇಶದ ನಾನಾ ಭಾಗಗಳಿಂದ ಭಕ್ತರು ಬರಲಿದ್ದು, ಅವರಿಗೆ ತೊಂದರೆ ಉಂಟಾಗದಂತೆ ಗಮನಹರಿಸಬೇಕು’ ಎಂದರು. ಸಭೆಯಲ್ಲಿ ವಿವಿಧ ಧರ್ಮದ ಪ್ರಮುಖರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT