ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಮೂಡಿದ ಹುಲಿ ಹೆಜ್ಜೆ

ಮುಂದುವರಿದ ಅರಣ್ಯ ಸಿಬ್ಬಂದಿ ಕಾರ್ಯಾಚರಣೆ
Last Updated 17 ಫೆಬ್ರುವರಿ 2020, 14:54 IST
ಅಕ್ಷರ ಗಾತ್ರ

ಮುಂಡಗೋಡ: ಗಡಿಭಾಗದಲ್ಲಿ ಹುಲಿ ಪ್ರತ್ಯಕ್ಷವಾಗಿ ವಾರ ಕಳೆದರೂ, ಹುಲಿ ಸೆರೆ ಹಿಡಿಯುವ ಅರಣ್ಯ ಇಲಾಖೆಯ ಕಾರ್ಯಾಚರಣೆ ಸಫಲವಾಗಿಲ್ಲ. ತಾಲ್ಲೂಕಿನ ಹುನಗುಂದ ಗ್ರಾಮದ ಗಡಿಗೆ ಹೊಂದಿಕೊಂಡಿರುವ, ಕಲಘಟಗಿ ತಾಲ್ಲೂಕಿನ ನೆಲ್ಲಿಹರವಿ ಗ್ರಾಮದ ಗದ್ದೆಯಲ್ಲಿ ಎರಡು ದಿನಗಳ ಹಿಂದೆ, ಮತ್ತೆ ಹುಲಿ ಹೆಜ್ಜೆ ಕಂಡುಬಂದಿದ್ದರಿಂದ, ಅರಣ್ಯ ಸಿಬ್ಬಂದಿ ಮತ್ತಷ್ಟು ಜಾಗೃತರಾಗಿದ್ದಾರೆ.

ಒಂದು ವಾರದ ಹಿಂದೆ ಕಲಘಟಗಿ ತಾಲ್ಲೂಕಿನ ಬೆಂಡ್ಲಗಟ್ಟಿ ಗ್ರಾಮದ ಸನಿಹ ಹುಲಿ ಪ್ರತ್ಯಕ್ಷವಾಗಿದ್ದನ್ನು ಅರಣ್ಯ ಸಿಬ್ಬಂದಿ ಖಚಿತಪಡಿಸಿದ್ದರು. ನಂತರ ಹುಲಿ ಸಂಚಾರ ನಡೆಸುತ್ತ, ಸನಿಹದ ಗ್ರಾಮದಂಚಿನ ಗದ್ದೆಗಳಲ್ಲಿ ಹೆಜ್ಜೆ ಗುರುತು ಮೂಡಿಸುತ್ತ, ಆತಂಕವನ್ನು ಜೀವಂತವಾಗಿಟ್ಟಿದೆ.
ತಾಲ್ಲೂಕಿನ ಹುನಗುಂದ ಗ್ರಾಮದ ಹಳ್ಳ ದಾಟಿದರೆ ನೆಲ್ಲಿಹರವಿ ಗ್ರಾಮದ ಗಡಿ ಆರಂಭವಾಗುತ್ತದೆ. ಆ ಭಾಗದ ಗದ್ದೆಯಲ್ಲಿ ಈಚೆಗೆ ಹುಲಿ ಹೆಜ್ಜೆ ಮೂಡಿರುವುದನ್ನು ರೈತರು ತೋರಿಸಿದ್ದು, ಗಡಿಭಾಗದಲ್ಲಿಯೇ ಹುಲಿ ಸಂಚಾರ ನಡೆಸಿದೆ ಎಂಬುದಕ್ಕೆ ಪುಷ್ಟಿ ನೀಡುತ್ತದೆ ಎಂದು ಅರಣ್ಯ ಸಿಬ್ಬಂದಿ ಹೇಳುತ್ತಾರೆ.

‘ಕಲಘಟಗಿ ತಾಲ್ಲೂಕಿನ ನೆಲ್ಲಿಹರವಿ ಗ್ರಾಮದ ಗದ್ದೆಯೊಂದರಲ್ಲಿ ಹುಲಿ ಹೆಜ್ಜೆ ಗುರುತು ಕಂಡುಬಂದಿತ್ತು. ಅರಣ್ಯ ಸಿಬ್ಬಂದಿ ಅದನ್ನು ಪರಿಶೀಲಿಸಿ, ಮುಂದೆ ಸಾಗಿರಬಹುದಾದ ದಾರಿಯನ್ನು ಅಂದಾಜಿಸಿ ಕಾರ್ಯಾಚರಣೆ ನಡೆಸಲಾಗಿದೆ. ಮುಂಡಗೋಡ ತಾಲ್ಲೂಕಿನ ಗಡಿಯಲ್ಲಿ ದಟ್ಟವಾದ ಅರಣ್ಯ ಇದ್ದು, ಬಯಲು ಪ್ರದೇಶಕ್ಕೆ ಹುಲಿ ಬರುವ ಸಾಧ್ಯತೆ ಕಡಿಮೆ. ಆದರೂ ಗಡಿಭಾಗದ ಗ್ರಾಮಗಳಲ್ಲಿ ಅರಣ್ಯ ಸಿಬ್ಬಂದಿ ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿದ್ದಾರೆ’ ಎಂದು ವಲಯ ಅರಣ್ಯ ಅಧಿಕಾರಿ ಸುರೇಶ ಕುಲ್ಲೋಳ್ಳಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT