ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರು ದಿನಗಳಲ್ಲಿ 30ಸಾವಿರ ಕಾಯಿ ಮಾಯ !

ಅಡುಗೆಗೂ ತೆಂಗಿನಕಾಯಿ ತತ್ವಾರ
Last Updated 20 ಆಗಸ್ಟ್ 2019, 12:21 IST
ಅಕ್ಷರ ಗಾತ್ರ

ಶಿರಸಿ: ಕೊಡಸಳ್ಳಿ ಅಣೆಕಟ್ಟು ನಿರ್ಮಾಣದ ವೇಳೆ ನಿರಾಶ್ರಿತರಾಗಿ, ಹೆಗ್ಗಾರಿಗೆ ಬಂದು ನೆಲೆಸಿದವರೆಲ್ಲರೂ ಬಹುತೇಕ ಕೃಷಿಕರು. ಅಡಿಕೆ ಹಾಗೂ ತೆಂಗಿನ ಬೆಳೆ ಅವರ ಮುಖ್ಯ ಆದಾಯ. ಗಂಗಾವಳಿಯ ನೆರೆ, ತೆಂಗಿನ ನಾಡಿನಲ್ಲೇ ತೆಂಗಿನಕಾಯಿಗೆ ತತ್ವಾರ ತಂದಿಟ್ಟಿದೆ.

ಎಣ್ಣೆ ತಯಾರಿಕೆ, ಮನೆಯಲ್ಲಿ ನಿತ್ಯದ ಅಡುಗೆ ಬಳಸಿ, ಮಿಕ್ಕಿದ ತೆಂಗಿನಕಾಯಿಯನ್ನು ಇಲ್ಲಿನ ಕೃಷಿಕರು ಮಾರಾಟ ಮಾಡುತ್ತಿದ್ದರು. ಈಗ ಇಲ್ಲಿ ನೆರೆ ಇಳಿದ ಮೇಲೆ, ಅಡುಗೆಗೂ ಕಾಯಿ ಇಲ್ಲದಂತಾಗಿದೆ. ತೇಲಿ ಹೋದ ಕಾಯಿ ಮರ–ಗಿಡಗಳ ನಡುವೆ ತಡವಿ, ತಡೆದು ನಿಂತಿದ್ದರೆ ಎಂಬ ಭರವಸೆಯಲ್ಲಿ ತೋಟದಲ್ಲಿ ಕಾಯಿ ಹುಡುಕಾಟ ನಡೆಸಿದ್ದಾರೆ ಹೆಂಗಸರು.

ಗಂಗಾವಳಿಗೆ ಪ್ರವಾಹ ಬಂದ ಮೂರು ದಿನಗಳಲ್ಲಿ, ಸುಮಾರು 30ಸಾವಿರ ತೆಂಗಿನಕಾಯಿಗಳು ತೇಲಿ ಹೋಗಿರಬಹುದೆಂದು ಅಂದಾಜಿಸಲಾಗಿದೆ. ಇವಿಷ್ಟು ಹೋಗಿದ್ದು ಎರಡು ಕಿ.ಮೀ ವ್ಯಾಪ್ತಿಯ ಕೃಷಿಕರ ತೋಟದಲ್ಲಿ ಬೆಳೆದಿದ್ದ ಕಾಯಿಗಳು !

‘ಕೈಗಡಿಯ ದತ್ತಾತ್ರೇಯ ಹೆಗಡೆಯವರು ಕೊಯ್ಲು ಮಾಡಿದ ಸುಮಾರು 8000 ತೆಂಗಿನಕಾಯಿಗಳನ್ನು ಮನೆಪಕ್ಕದ ಗೋಡಾನ್‌ನಲ್ಲಿ ದಾಸ್ತಾನು ಮಾಡಿಟ್ಟಿದ್ದರು. ಮನೆಸುತ್ತ ನೀರು ಆವರಿಸಿದ ಮೇಲೆ ಭದ್ರವಾಗಿದ್ದ ಕೊಠಡಿಗೆ ಬೀಗ ಹಾಕಿ, ಸುರಕ್ಷಿತ ಸ್ಥಳಕ್ಕೆ ತಲುಪಿದ್ದರು. ಆ ಕೊಠಡಿಗೆ ಸಣ್ಣ ಒಂದು ವೆಂಟಿಲೇಟರ್ ಇತ್ತು. ನೆರೆ ಇಳಿದ ಮೇಲೆ ಬಂದು ಬೀಗ ತೆಗೆದರೆ, ಅವರಿಗೆ ಅಚ್ಚರಿ. ಕೋಣೆಯಲ್ಲಿ ಒಂದು ತೆಂಗಿನಕಾಯಿ ಕೂಡ ಇರಲಿಲ್ಲ. ಪ್ರವಾಹದ ನೀರಿನ ಸೆಳೆತದಲ್ಲಿ ಎಲ್ಲ ತೆಂಗಿನಕಾಯಿಗಳು ವೆಂಟಿಲೇಟರ್ ಮೂಲಕ ತೇಲಿ ಹೋಗಿತ್ತು’ ಎಂದು ಸ್ಥಳೀಯರು ಪ್ರವಾಹ ಭೀಕರತೆಯನ್ನು ತೆರೆದಿಟ್ಟರು.

‘ಗಡಿ ಕೊಯ್ಲಿನಲ್ಲಿ ಪ್ರತಿ ಮರದಿಂದ ಸರಾಸರಿ 50ರಿಂದ 90 ಕಾಯಿ ಸಿಗುತ್ತದೆ. ಪ್ರತಿ ಕುಟುಂಬವು 40ರಿಂದ 80ರಷ್ಟು ತೆಂಗಿನಮರಗಳನ್ನು ಹೊಂದಿದೆ. ಕಾಯಿ ಕೊಯ್ಲು ಮಾಡಿದ ಮೇಲೆ ಸಾಮಾನ್ಯವಾಗಿ ಅಂಗಳಕ್ಕೆ ತಂದು ರಾಶಿ ಹಾಕಿಡುವುದೇ ಹೆಚ್ಚು. ಬಹುತೇಕ ಎಲ್ಲ ತೋಟಗಳಲ್ಲೂ ಕೊಯ್ಲು ಮುಗಿದಿತ್ತು. ಕಾಯಿಯೂ ಅಂಗಳದಲ್ಲಿತ್ತು. ನಮ್ಮ ಮನೆಯ ಕೊಟ್ಟಿಗೆಯಲ್ಲಿ ಸಾವಿರಾರು ಕಾಯಿ ಇದ್ದವು. ಎಲ್ಲವೂ ನೀರು ಪಾಲಾಗಿವೆ’ ಎಂದರು ಕೃಷ್ಣ ಭಾಗವತ. ‘ಮನೆಯಲ್ಲಿ ಈಗ ಬಹುಶಃ 25 ಕಾಯಿ ಕೂಡ ಇಲ್ಲ. ತೋಟದಲ್ಲಿ ಬಿದ್ದ ಕಾಯಿಯನ್ನು ಹುಡುಕಿತರಬೇಕು’ ಎಂದು ದನಿಗೂಡಿಸಿದರು ಅವರ ಪತ್ನಿ ಗಾಯತ್ರಿ ಭಾಗವತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT