ಅಕ್ಷರ ದಾಸೋಹ ನೌಕರರ ಪ್ರತಿಭಟನೆ

7
ಕೇಂದ್ರೀಕೃತ ಅಡುಗೆ ಪದ್ಧತಿಗೆ ವಿರೋಧ, ಆದೇಶ ಹಿಂಪಡೆಯಲು ಒತ್ತಾಯ

ಅಕ್ಷರ ದಾಸೋಹ ನೌಕರರ ಪ್ರತಿಭಟನೆ

Published:
Updated:
Deccan Herald

ಶಿರಸಿ: ಕೇಂದ್ರೀಕೃತ ಅಡುಗೆ ಕೇಂದ್ರಗಳ ಮುಖಾಂತರ ಶಾಲೆಗಳ ಬಿಸಿಯೂಟ ತಯಾರಿಸಲು ರಾಜ್ಯ ಸರ್ಕಾರ ನೀಡಿರುವ ಅನುಮೋದನೆಯನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿ, ಅಕ್ಷರ ದಾಸೋಹ ನೌಕರರ ಸಂಘದ ತಾಲ್ಲೂಕು ಘಟಕದ ಸದಸ್ಯರು ಸೋಮವಾರ ಇಲ್ಲಿ ಮನವಿ ಸಲ್ಲಿಸಿದರು.

ಉಪವಿಭಾಗಾಧಿಕಾರಿ ಕೆ. ರಾಜು ಮೊಗವೀರ ಮೂಲಕ ಅವರು ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಹಿಳೆಯರನ್ನು ಆರ್ಥಿಕವಾಗಿ ಸಬಲಗೊಳಿಸುವ ನಿಟ್ಟಿನಲ್ಲಿ ಉದ್ಯೋಗ ಸೃಷ್ಟಿಸುವ ಬದಲು, ಬಿಸಿಯೂಟ ನೌಕರರನ್ನು ಕೆಲಸದಿಂದ ತೆಗೆಯಲು ಕೇಂದ್ರೀಕೃತ ಅಡುಗೆ ಪದ್ಧತಿಯನ್ನು ತರಲು ಮುಂದಾಗಿವೆ. ರಾಜ್ಯ ಸರ್ಕಾರ ಈ ಕುರಿತು ಸುತ್ತೋಲೆ ಹೊರಡಿಸಿ, ಒಟ್ಟು 10 ಪ್ರದೇಶಗಳಲ್ಲಿ ಇದನ್ನು ಇಸ್ಕಾನ್‌ನ ಅಕ್ಷಯ ಪಾತ್ರ ಪ್ರತಿಷ್ಠಾನಕ್ಕೆ ವಹಿಸಲು, ಆ ಸಂಸ್ಥೆಗೆ ಮೂಲಸೌಕರ್ಯ ಮತ್ತು ಸ್ಥಳಾವಕಾಶ ನೀಡಲು ಪರಿಶೀಲನೆಗೆ ಆದೇಶಿಸಿದೆ. ರಾಜ್ಯದಾದ್ಯಂತ 20ಸಾವಿರದಷ್ಟು ದುಡಿಯುವ ಮಹಿಳೆಯರು, ಉತ್ತರ ಕನ್ನಡದ ಶಿರಸಿ-ಸಿದ್ದಾಪುರದಲ್ಲಿ ಸಾವಿರದಷ್ಟು ಬಡ ಮಹಿಳೆಯರು ಇದರಿಂದ ಕೆಲಸ ಕಳೆದುಕೊಳ್ಳಲಿದಾರೆ. ಹೀಗಾಗಿ ಈ ಆದೇಶವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ಎಂ.ಎಚ್.ಆರ್.ಡಿ ನಿಯಮಗಳಿಗೆ ಮಾಡಿರುವ ತಿದ್ದುಪಡಿಯನ್ನು ವಾಪಸ್ ತೆಗೆದುಕೊಳ್ಳಬೇಕು. ಕೇಂದ್ರೀಕೃತ ಅಡುಗೆ ಪದ್ಧತಿಯು ಮಕ್ಕಳಿಗೆ ತಂಗಳನ್ನ ಹಾಕುವ ಮೋಸದ ಯೋಜನೆಯಾಗಿದೆ. ಜಂಟಿ ನಿರ್ದೇಶಕರು ರಾಜ್ಯದಲ್ಲಿ ಮಧ್ಯಾಹ್ನದ ಉಪಾಹಾರ ಯೋಜನೆಯ ಕುರಿತು ಮಾಡಿರುವ ನಿರ್ದೇಶನ ಹಿಂಪಡೆಯಬೇಕು. ಶಿಕ್ಷಕರ ಮೇಲಿನ ಹೊರೆ ಕಡಿಮೆ ಮಾಡಲು ಬಿಸಿಯೂಟ ಆಡಳಿತ ಮಂಡಳಿ ರಚಿಸಬೇಕು. ಈಗಿರುವ ಬಿಸಿಯೂಟ ಅಕ್ಷರ ದಾಸೋಹ ಯೋಜನಾ ಕಾರ್ಮಿಕರನ್ನು ಕಾಯಂ ಮಾಡಬೇಕು. 45ನೇ ಭಾರತ ರಾಷ್ಟ್ರೀಯ ಕಾರ್ಮಿಕ ಸಮ್ಮೇಳನದ ಶಿಫಾರಸು ಪ್ರಕಾರ, ಯೋಜನಾ ಕಾರ್ಮಿಕರಾದ ಅಕ್ಷರ ದಾಸೋಹದ ಸಿಬ್ಬಂದಿಯನ್ನು ಕಾರ್ಮಿಕರೆಂದು ಗುರುತಿಸಬೇಕು ಎಂದು ಮನವಿಯಲ್ಲಿ ವಿನಂತಿಸಲಾಗಿದೆ.

ಪ್ರಮುಖರಾದ ಗಂಗಾ ಹೆಗಡೆ, ಲಕ್ಷ್ಮಿ ನಾಯ್ಕ, ಭಾರತಿ ನಾಯ್ಕ, ಸುಶೀಲಾ ಹೆಗಡೆ, ಸುಮಂಗಲಾ ಮರಾಠಿ, ಸರಸ್ವತಿ ಹೆಗಡೆ, ಲಕ್ಷ್ಮಿ ಗೌಡ, ಸಿಐಟಿಯು ಪ್ರಮುಖರಾದ ಸಿ.ಆರ್.ಶಾನಭಾಗ, ನಾಗಪ್ಪ ನಾಯ್ಕ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !