ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭಾ ಚುನಾವಣೆ: ಬಿಗಿ ಭದ್ರತೆಯಲ್ಲಿ ಮತ ಎಣಿಕೆಗೆ ಸಿದ್ಧತೆ

ಕುಮಟಾದ ಎ.ವಿ.ಬಾಳಿಗಾ ಕಾಲೇಜಿನತ್ತ ಎಲ್ಲರ ಚಿತ್ತ
Last Updated 22 ಮೇ 2019, 11:45 IST
ಅಕ್ಷರ ಗಾತ್ರ

ಕಾರವಾರ:ಲೋಕಸಭಾ ಚುನಾವಣೆಯಲ್ಲಿ ಸಂಸದರಾಗಿ ಆಯ್ಕೆಯಾಗುವವರು ಯಾರು? ಒಂದು ತಿಂಗಳಿನಿಂದ ಮತದಾರರನ್ನು ತೀವ್ರ ಕುತೂಹಲಕ್ಕೆ ದೂಡಿರುವ ಈ ಪ್ರಶ್ನೆಗೆ ಗುರುವಾರ ಮಧ್ಯಾಹ್ನದ ವೇಳೆಗೆ ಉತ್ತರ ಸಿಗಲಿದೆ. ಇಡೀ ಕ್ಷೇತ್ರದ ಗಮನವೀಗ ಮತ ಎಣಿಕೆ ನಡೆಯುವಕುಮಟಾದ ಎ.ವಿ.ಬಾಳಿಗಾ ಕಾಲೇಜಿನತ್ತ ನೆಟ್ಟಿದೆ.

ಈ ಬಾರಿ ಕಣದಲ್ಲಿ 13ಅಭ್ಯರ್ಥಿಗಳಿದ್ದು, ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಬಿಜೆಪಿಯಿಂದ, ಮಾಜಿ ಸಚಿವ ಆನಂದ ಅಸ್ನೋಟಿಕರ್ ಕಾಂಗ್ರೆಸ್– ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಜೆಡಿಎಸ್‌ನಿಂದ ಸ್ಪರ್ಧೆಯಲ್ಲಿದ್ದಾರೆ. ಉಳಿದಂತೆ ಪ್ರಾದೇಶಿಕ ಪಕ್ಷದ ಒಬ್ಬರು ಅಭ್ಯರ್ಥಿ ಹಾಗೂ 10 ಮಂದಿ ಪಕ್ಷೇತರರು ಕಣದಲ್ಲಿದ್ದಾರೆ. ಈ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 15.52ಲಕ್ಷ ಮತದಾರರಿದ್ದು,11.49 ಲಕ್ಷ ಮತ ಚಲಾವಣೆಯಾಗಿವೆ. ಕಳೆದ ಬಾರಿಗಿಂತ ಅಧಿಕ ಅಂದರೆ, ಶೇ 74.07ರಷ್ಟು ಮತದಾನವಾಗಿದೆ.

ಮತ ಎಣಿಕೆ ಪ್ರಕ್ರಿಯೆಯ ಬಗ್ಗೆ ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಬೆಳಿಗ್ಗೆ 8ಕ್ಕೆ ಮತ ಎಣಿಕೆ ಆರಂಭವಾಗಲಿದೆ. ನಾಲ್ಕು ವಿಧಾನಸಭಾ ಕ್ಷೇತ್ರಗಳಿಗೆ ತಲಾ ಇಬ್ಬರಂತೆ ಮತ ಎಣಿಕೆ ಆಬ್ಸರ್ವರ್‌ಗಳನ್ನು ನೇಮಿಸಲಾಗಿದೆ. ಒಬ್ಬರು ಮತಗಟ್ಟೆ ಅಧಿಕಾರಿ ಹಾಗೂ 10 ಮಂದಿ ಸಹಾಯಕ ಮತಗಟ್ಟೆ ಅಧಿಕಾರಿಗಳು (ಎಆರ್‌ಒ) ಮತ ಎಣಿಕೆ ಮಾಡಲಿದ್ದಾರೆ. ಎಂಟುಎಆರ್‌ಒಗಳು ವಿದ್ಯುನ್ಮಾನ ಮತಯಂತ್ರಗಳನ್ನು ಲೆಕ್ಕ ಹಾಕಲಿದ್ದಾರೆ. ಇಬ್ಬರು ಹೆಚ್ಚುವರಿ ಎಆರ್‌ಒಗಳು ಸೇವಾ ಮತ್ತು ಅಂಚೆ ಮತಗಳನ್ನು ಎಣಿಸಲಿದ್ದಾರೆ ಎಂದು ತಿಳಿಸಿದರು.

ವಿಧಾನಸಭಾ ಕಾಲೇಜಿನಲ್ಲಿ ಎಂಟು ಎಣಿಕೆ ಕೊಠಡಿಗಳನ್ನು ನಿರ್ಮಿಸಲಾಗಿದೆ. 14 ಟೇಬಲ್‌ಗಳನ್ನು ಅಳವಡಿಸಲಾಗಿದ್ದು, ಪ್ರತಿಯೊಂದಕ್ಕೂ ಎಣಿಕೆ ಉಸ್ತುವಾರಿ ಹಾಗೂ ಸಹಾಯಕರನ್ನು ನಿಯೋಜನೆ ಮಾಡಲಾಗಿದೆ.ತಲಾ120 ಎಣಿಕೆ ಉಸ್ತುವಾರಿಗಳು, ಸಹಾಯಕರು ‘ಡಿ’ ದರ್ಜೆ ಸಿಬ್ಬಂದಿಹಾಗೂ 128 ಮೈಕ್ರೊ ಆಬ್ಸರ್ವರ್‌ಗಳನ್ನು ನೇಮಿಸಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ತಲಾ ಐದು ವಿವಿಪ್ಯಾಟ್ ಯಂತ್ರಗಳನ್ನು ಆಯ್ಕೆ ಮಾಡಲಾಗುತ್ತದೆ. ಇದಕ್ಕಾಗಿ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಪ್ರತಿ ಸುತ್ತಿನ ಎಣಿಕೆಯ ಮಾಹಿತಿಯು ‘ಸುವಿಧಾ’ ಅಪ್ಲಿಕೇಷನ್‌ನಲ್ಲಿ ನಮೂದಾಗಲಿದೆ. ಎಲ್ಲ ಎಣಿಕೆಕೋಣೆಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳು, ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ತಲಾ ಇಬ್ಬರು ವಿಡಿಯೊಗ್ರಾಫರ್‌ಗಳನ್ನುನೇಮಿಸಲಾಗಿದೆ. ಎಣಿಕೆ ಕೇಂದ್ರದ ಸುತ್ತ ನಾಲ್ಕುಹಂತದ ಭದ್ರತಾ ವ್ಯವಸ್ಥೆ, ಪ್ರತಿ ಸುತ್ತಿನ ಮತ ಎಣಿಕೆಯ ಮಾಹಿತಿ ನೀಡಲು ಎಲ್‌ಇಡಿ ಪರದೆಗಳನ್ನು ಅಳವಡಿಸಲಾಗಿದೆ ಎಂದು ತಿಳಿಸಿದರು.

ಮೊಬೈಲ್ ನಿಷೇಧ:ಮತ ಎಣಿಕೆ ಕೇಂದ್ರದಲ್ಲಿ ನಿರ್ಮಿಸಲಾಗಿರುವ ಸಂವಹನ ಕೊಠಡಿಯವರೆಗೆಅಭ್ಯರ್ಥಿ ಮತ್ತು ಅವರ ಚುನಾವಣಾ ಏಜೆಂಟ್‌ಗೆ ಮಾತ್ರ ಮೊಬೈಲ್ ಫೋನ್ ತೆಗೆದುಕೊಂಡು ಹೋಗಬಹುದು. ಅಲ್ಲಿ ಸ್ಥಿರ ದೂರವಾಣಿಯೊಂದರ ವ್ಯವಸ್ಥೆಯನ್ನೂ ಮಾಡಲಾಗಿದೆ. ಉಳಿದಂತೆ ಎಲ್ಲರಿಗೂ ಮೊಬೈಲ್ ಫೋನ್ ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ ಎಂದು ಡಾ.ಕೆ.ಹರೀಶಕುಮಾರ್ಹೇಳಿದರು.

ಮತ ಎಣಿಕೆಗೆ ಬಿಗಿ ಭದ್ರತೆ:ಮತ ಎಣಿಕೆ ಕೇಂದ್ರದ ಸುತ್ತ ಕೇಂದ್ರ ಮೀಸಲು ಪಡೆಯ ಪೊಲೀಸರಿಂದ ಭದ್ರತೆ ಇರಲಿದೆ. ಕುಮಟಾ ಪಟ್ಟಣದಲ್ಲಿ ರಾಜ್ಯದ650 ಪೊಲೀಸರು, ರಾಜ್ಯ ಮೀಸಲು ಪೊಲೀಸ್ ಪಡೆಯ ಐದು ತುಕಡಿಗಳು, ಜಿಲ್ಲಾ ಸಶಸ್ತ್ರ ಮೀಸಲು ಪಡೆಯ 16 ತುಕಡಿಗಳು, ಕೇಂದ್ರ ಮೀಸಲು ಪಡೆಯ ಒಂದು ತುಕಡಿ ಹಾಗೂ 300 ಹೋಮ್‌ಗಾರ್ಡ್‌ಗಳನ್ನು ನಿಯೋಜಿಸಲಾಗಿದೆ. ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ಒಟ್ಟು 1,200 ಪೊಲೀಸರನ್ನು ನಿಯುಕ್ತಿಗೊಳಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿನಾಯಕ ಪಾಟೀಲ ಮಾಹಿತಿ ನೀಡಿದರು.

ಮತ ಎಣಿಕೆ ನಡೆಯುವ ಬಾಳಿಗಾ ಕಾಲೇಜಿನ ಬಲ ಭಾಗದಲ್ಲಿ ಅಧಿಕೃತ ಪಾಸ್ ಇದ್ದವರ ವಾಹನ ನಿಲ್ಲಿಸಬಹುದು. ಸಾರ್ವಜನಿಕರಿಗೆ ಕೃಷಿ ಕಾಲೇಜಿನ ಆವರಣದಲ್ಲಿ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ನಾಗರಾಜ ಸಿಂಗ್ರೇರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT