ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ: ಆರೋಗ್ಯ ಸುರಕ್ಷೆಯ ನಡುವೆ ನಾಳೆಯಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ

ವಿದ್ಯಾರ್ಥಿಗಳ ನಡುವೆ ಅಂತರ ಕಾಯ್ದುಕೊಳ್ಳಲು ವ್ಯವಸ್ಥೆ
Last Updated 24 ಜೂನ್ 2020, 12:37 IST
ಅಕ್ಷರ ಗಾತ್ರ

ಕಾರವಾರ: ಕೊರೊನಾ ವೈರಸ್ ಆತಂಕದಿಂದ ಮುಂದೂಡಲಾಗಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಜೂನ್ 25ರಿಂದ ನಡೆಯಲಿದ್ದು, ಜಿಲ್ಲೆಯಲ್ಲಿ ಸಕಲ ಸಿದ್ಧತೆ ಪೂರ್ಣಗೊಂಡಿದೆ. ಪರೀಕ್ಷಾ ಕೇಂದ್ರಗಳಲ್ಲಿ ಮಕ್ಕಳ ಮತ್ತು ಸಿಬ್ಬಂದಿಯ ಸುರಕ್ಷತೆಗೂ ಮೂರು ದಿನಗಳಿಂದ ವಿವಿಧ ಸುರಕ್ಷಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಕಾರವಾರ ಶೈಕ್ಷಣಿಕ ಜಿಲ್ಲೆಯ ಐದು ತಾಲ್ಲೂಕುಗಳಲ್ಲಿ ಒಟ್ಟು 38 ಪರೀಕ್ಷಾ ಕೇಂದ್ರಗಳಿದ್ದು, 9,593 ವಿದ್ಯಾರ್ಥಿಗಳು ಪರೀಕ್ಷೆಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ. ಅಲ್ಲದೇ ಗೋವಾದ ಎರಡು ಕನ್ನಡ ಮಾಧ್ಯಮ ಶಾಲೆಗಳ ವಿದ್ಯಾರ್ಥಿಗಳೂ ಪರೀಕ್ಷೆಗೆ ಹಾಜರಾಗಲಿದ್ದಾರೆ.

ಎಲ್ಲ ಪರೀಕ್ಷಾ ಕೇಂದ್ರಗಳನ್ನು ಮೂರು ದಿನಗಳಿಂದ ಸ್ಯಾನಿಟೈಸ್ ಮಾಡಲಾಗಿದೆ. ಶಿಕ್ಷಣ ಇಲಾಖೆ ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿ ಸ್ಥಳದಲ್ಲಿ ಹಾಜರಿದ್ದು, ಎಲ್ಲ ಸಿದ್ಧತೆಗಳ ಉಸ್ತುವಾರಿ ನೋಡಿಕೊಂಡಿದ್ದಾರೆ. ಪರೀಕ್ಷೆ ನಡೆಯುವ ಕೊಠಡಿಗಳಲ್ಲಿ ಒಂದು ಮೀಟರ್‌ ಅಂತರದಲ್ಲಿ ಡೆಸ್ಕ್‌ಗಳನ್ನು ಅಳವಡಿಸಲಾಗಿದೆ.ಕೊರೊನಾ ಕಾರಣದಿಂದ ಕುಮಟಾದಲ್ಲಿ ಮೂರು, ಕಾರವಾರ, ಅಂಕೋಲಾ ಹಾಗೂ ಹೊನ್ನಾವರದಲ್ಲಿ ತಲಾ ಒಂದು ಹೆಚ್ಚುವರಿ ಉಪ ಕೇಂದ್ರಗಳನ್ನು ಮಾಡಿಕೊಳ್ಳಲಾಗಿದೆ.

3,284 ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಬರಲು ಮತ್ತುಮರಳಿ ಹೋಗಲು ಬಸ್‌ಗಳು ಬೇಕು ಎಂದು ಮನವಿ ಮಾಡಿದ್ದರು. ಅದರಂತೆರಾಜ್ಯ ರಸ್ತೆ ಸಾರಿಗೆ ಇಲಾಖೆಯ ಬಸ್‌ಗಳನ್ನುಶಿಕ್ಷಣ ಇಲಾಖೆಯಿಂದ ವ್ಯವಸ್ಥೆ ಮಾಡಲಾಗಿದೆ. ತುರ್ತು ಸಂದರ್ಭದಲ್ಲಿ ಪರೀಕ್ಷಾ ಕೇಂದ್ರ ಬದಲಾವಣೆಯಾದರೆ 10 ಕೇಂದ್ರಗಳನ್ನು ಸಿದ್ಧವಾಗಿ ಇಟ್ಟುಕೊಳ್ಳಲಾಗಿದೆ.

ಪರೀಕ್ಷಾ ಕೇಂದ್ರಗಳ ಹೊರಗೆ ವಿದ್ಯಾರ್ಥಿಗಳು ಪರಸ್ಪರ ಅಂತರ ಕಾಯ್ದುಕೊಂಡು ನಿಲ್ಲಲು ಅನುಕೂಲವಾಗುವಂತೆ ವ್ಯವಸ್ಥೆ ಮಾಡಲಾಗಿದೆ. ಕೊಠಡಿ ಪ್ರವೇಶಿಸುವ ಮೊದಲು ಅವರದೇಹದ ಉಷ್ಣತೆಯನ್ನು ಥರ್ಮಲ್ ಸ್ಕ್ರೀನಿಂಗ್ ಮೂಲಕ ತಿಳಿದುಕೊಳ್ಳಲಾಗುತ್ತದೆ. ಬಳಿಕ ಅವರ ಕೈಗಳಿಗೆ ಸ್ಯಾನಿಟೈಸರ್ ಸಿಂಪಡಿಸಿ ಕೊಠಡಿಗೆ ಸೇರಿಸಿಕೊಳ್ಳಲಾಗುತ್ತದೆ. ಅದೇರೀತಿ ಪ್ರಶ್ನೆ ಮತ್ತು ಉತ್ತರ ಪತ್ರಿಕೆಗಳನ್ನು ಕೂಡ ಸ್ಯಾನಿಟೈಸ್ ಮಾಡಿಯೇ ನೀಡಲಾಗುತ್ತದೆ ಎಂದು ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಹರೀಶ ಗಾಂವ್ಕರ ತಿಳಿಸಿದರು.

‘ವಿದ್ಯಾರ್ಥಿಗಳಿಗೆ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯವರು11 ಸಾವಿರ ಮುಖಗವಸುಗಳನ್ನು ನೀಡಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿಗಳುವಿವಿಧ ಮೂಲಗಳಿಂದ 12 ಸಾವಿರ ಮುಖಗವಸುಗಳನ್ನು ಸಂಗ್ರಹಿಸಿದ್ದಾರೆ. ಪ್ರೌಢಶಿಕ್ಷಣ ಮಂಡಳಿಯಿಂದ ಅಗತ್ಯವಾದ ಸ್ಯಾನಿಟೈಸರ್ ಪೂರೈಕೆಯಾಗಿದೆ.ತಲಾ 200 ವಿದ್ಯಾರ್ಥಿಗಳಿಗೆ ಒಂದರಂತೆ ಆರೋಗ್ಯ ತಪಾಸಣಾ ಕೌಂಟರ್ ತೆರೆಯಲಾಗಿದೆ. ಅವುಗಳಲ್ಲಿ ಇಬ್ಬರು ಸ್ವಯಂ ಸೇವಕರು ಹಾಗೂ ಆರೋಗ್ಯ ಇಲಾಖೆಯಒಬ್ಬರು ಇರುತ್ತಾರೆ’ ಎಂದು ಮಾಹಿತಿ ನೀಡಿದರು.

‘ಮುಂಚಿತವಾಗಿ ಬನ್ನಿ’:ಎಲ್ಲರ ಆರೋಗ್ಯ ತಪಾಸಣೆ ಮಾಡಿ ಪರೀಕ್ಷಾ ಕೊಠಡಿಗೆ ಬಿಡುವ ಕಾರಣದಿಂದ, ವಿದ್ಯಾರ್ಥಿಗಳು ಕನಿಷ್ಠ ಒಂದೂವರೆ ತಾಸು ಮುಂಚಿತವಾಗಿ ಬರಬೇಕಿದೆ. ಅನಗತ್ಯವಾಗಿ ಯಾರನ್ನೂ ಒಳಹೋಗದಂತೆ ನಿರ್ಬಂಧಿಸಲಾಗಿದೆ. ವಿದ್ಯಾರ್ಥಿಗಳನ್ನು ಕರೆದುಕೊಂಡು ಬರುವ ಪಾಲಕರು ಪರೀಕ್ಷಾ ಕೇಂದ್ರಗಳ ಗೇಟಿನಿಂದ ಒಳಗೆ ಬಾರದಂತೆಯೂ ಸೂಚಿಸಲಾಗಿದೆ.

ವಿದ್ಯಾರ್ಥಿಗಳು ನಿರಾತಂಕವಾಗಿ ಪರೀಕ್ಷೆ ಬರೆಯಲು ಸಹಾಯವಾಗುವಂತೆ ಶಿಕ್ಷಕರು ವಿದ್ಯಾರ್ಥಿಗಳ ನಿರಂತರ ಸಂಪರ್ಕದಲ್ಲಿದ್ದರು. ‘ನಾವಿದ್ದೇವೆ ನೀವೂ ಬನ್ನಿ’ ಎಂಬ ಐದು ದಿನಗಳ ವಿಶೇಷ ಆಂದೋಲವನ್ನೂ ಶಿಕ್ಷಣ ಇಲಾಖೆಯಿಂದ ನಡೆಸಲಾಗಿದೆ.

ಕಾರವಾರ ಶೈಕ್ಷಣಿಕ ಜಿಲ್ಲೆ: ಅಂಕಿ ಅಂಶ

ಒಟ್ಟು ಪ್ರೌಢಶಾಲೆಗಳು- 186

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು- 9,593

ಪರೀಕ್ಷಾ ಕೇಂದ್ರಗಳು- 38

ಹೊರ ಜಿಲ್ಲೆಯ ವಿದ್ಯಾರ್ಥಿಗಳು- 72

ಜಿಲ್ಲೆಯಿಂದ ಹೊರಗೆ ಹೋದವರು- 263

ಗೋವಾದಲ್ಲಿ ಪರೀಕ್ಷೆ ಬರೆಯುವವರು- 54

ಸುರಕ್ಷತೆಗೆ ಕ್ರಮ

119 -ಬಸ್‌ಗಳ ವ್ಯವಸ್ಥೆ

65 -ಥರ್ಮಲ್ ಸ್ಕ್ಯಾನರ್‌ಗಳು

23 ಸಾವಿರ -ಲಭ್ಯವಿರುವ ಮಾಸ್ಕ್‌ಗಳು

186 ಲೀಟರ್ -ಪೂರೈಕೆಯಾದ ಸ್ಯಾನಿಟೈಸರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT