ಶುಕ್ರವಾರ, ಸೆಪ್ಟೆಂಬರ್ 24, 2021
21 °C
ಸರ್ಕಾರಿ ಆಸ್ಪತ್ರೆಯಲ್ಲಿ ದಿನೇ ದಿನೇ ಹೆಚ್ಚುತ್ತಿದೆ ಹೊರ ಜಿಲ್ಲೆಯವರ ಸಂಖ್ಯೆ; ಆಸ್ಪತ್ರೆಯ ‍ಪ್ರಸಿದ್ಧಿ ಹಣಕ್ಕಾಗಿ ದುರ್ಬಳಕೆ

ಭಟ್ಕಳ: ಹೊರಗಿನ ಸೋಂಕಿತರ ಕರೆತರುವ ಆಂಬುಲೆನ್ಸ್ ಚಾಲಕರು

ಮೋಹನ ನಾಯ್ಕ Updated:

ಅಕ್ಷರ ಗಾತ್ರ : | |

ಭಟ್ಕಳ: ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಹೊರಜಿಲ್ಲೆಗಳಿಂದ ಬರುವ ಕೋವಿಡ್ ಸೋಂಕಿತರ ಸಂಖ್ಯೆ ದಿನಕಳೆದಂತೆ ಹೆಚ್ಚುತ್ತಿದೆ. ಇದಕ್ಕೆ ಅಲ್ಲಿಂದ ಕರೆತರುವ ಆಂಬುಲೆನ್ಸ್ ಚಾಲಕರ ಹಣದಾಸೆ ಕಾರಣವೇ ಎಂಬ ಅನುಮಾನ ವ್ಯಕ್ತವಾಗಿದೆ.

ಪ್ರತಿದಿನ ಸಾಗರ, ಶಿವಮೊಗ್ಗ, ಭದ್ರಾವತಿ, ಹಾವೇರಿ, ದಾವಣಗೆರೆ, ಉಡುಪಿ, ಕುಂದಾಪುರ ಕಡೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿತರು ಬರುತ್ತಿದ್ದಾರೆ. ಇಲ್ಲಿನ ಸರ್ಕಾರಿ ಆಸ್ಪತ್ರೆಯ ಸೌಲಭ್ಯ, ವೈದ್ಯರು, ಸಿಬ್ಬಂದಿ ವರ್ತನೆಯಿಂದ ಆಸ್ಪತ್ರೆ ಹೊರ ಜಿಲ್ಲೆಗಳಲ್ಲೂ ಜನಪ್ರಿಯತೆ ಪಡೆದಿರುವುದರಿಂದ ಎಂದು ತಿಳಿಯಲಾಗಿತ್ತು.

ಶಿವಮೊಗ್ಗದ ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ಅಗತ್ಯ ಇರುವ ಸೋಂಕಿತರ ಮಾಹಿತಿಯನ್ನು ಸಂಗ್ರಹಿಸುವ ಆಂಬುಲೆನ್ಸ್ ಚಾಲಕರು ಮೊದಲು ಭಟ್ಕಳದ ಸರ್ಕಾರಿ ಆಸ್ಪತ್ರೆಗೆ ಕರೆ ಮಾಡುತ್ತಾರೆ. ಇಲ್ಲಿ ವೆಂಟಿಲೇಟರ್, ಆಮ್ಲಜನ ಕದ ಸೌಲಭ್ಯದ ಕುರಿತು ಮಾಹಿತಿ ಪಡೆಯುತ್ತಾರೆ.

ನಂತರ ಸೋಂಕಿತರ ಬಳಿಗೆ ತೆರಳಿ ಅತಿ ಕಡಿಮೆ ದರದಲ್ಲಿ ವೆಂಟಿಲೇಟರ್ ಸೌಲಭ್ಯ ಒದಗಿಸುವುದಾಗಿ ಹೇಳುತ್ತಾರೆ. ಆಂಬುಲೆನ್ಸ್ ಬಾಡಿಗೆ ಹಾಗೂ ₹ 40 ಸಾವಿರದಿಂದ ₹ 60 ಸಾವಿರ ನೀಡಿದರೆ ಸಾಕು ಎಂಬ ಬೇಡಿಕೆ ಇಡುತ್ತಾರೆ. 

ಅನುಮಾನ ಯಾಕೆ?: ಭಟ್ಕಳದಲ್ಲಿ ಪ್ರಸೂತಿ ತಜ್ಞೆಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಡಾ.ಶಂಶನೂರ ಅವರು ಸಾಗರದವರು. ಅವರಿಗೆ ಭದ್ರಾವತಿ ತಾಲ್ಲೂಕಿನ ವ್ಯಕ್ತಿಯೊಬ್ಬರು ಮಂಗಳವಾರ ಕರೆ ಮಾಡಿದ್ದರು. ಭಟ್ಕಳದ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಎಷ್ಟಿದೆ ಎಂಬ ಮಾಹಿತಿಯನ್ನು ಕೇಳಿದ್ದರು.

ಬುಧವಾರ ಮತ್ತೆ ಶಿವಮೊಗ್ಗದ ಖಾಸಗಿ ಆಸ್ಪತ್ರೆಯ ವೈದ್ಯರೊಬ್ಬರು ಡಾ.ಶಂಶನೂರ ವೆಂಟೀಲೇಟರ್ ಲಭ್ಯತೆಯ ಕುರಿತು ಪ್ರಶ್ನಿಸಿದ್ದರು. ಕಾರಣ ಕೇಳಿದಾಗ ‘ನಮ್ಮ ಆಸ್ಪತ್ರೆಯಿಂದ ಐವರು ಸೋಂಕಿತರು ಭಟ್ಕಳಕ್ಕೆ ಹೊರಡಲು ಆಂಬುಲೆನ್ಸ್ ವ್ಯವಸ್ಥೆ ಮಾಡಿಕೊಂಡಿದ್ದಾರೆ’ ಎಂದರು. ಅಲ್ಲದೇ ಇದ್ದಕ್ಕಿದ್ದಂತೆ ಭಟ್ಕಳ ಹಾಗೂ ಮಂಗಳೂರಿನ ಆಸ್ಪತ್ರೆಗಳಿಗೆ ಕರೆದುಕೊಂಡು ಹೋಗುತ್ತಿರುವ ಕುರಿತು ಅನುಮಾನ ವ್ಯಕ್ತಪಡಿಸಿದಾಗ ದಂಧೆ ಬೆಳಕಿಗೆ ಬಂತು.

‘ವಿಚಾರಿಸಿ ಮುಂದುವರಿಯಿರಿ’: ‘ಆಂಬುಲೆನ್ಸ್ ಚಾಲಕರು ಸೋಂಕಿತರನ್ನು ಶಿವಮೊಗ್ಗದಿಂದ ಭಟ್ಕಳಕ್ಕೆ ಹೆಚ್ಚಾಗಿ ಕರೆದುಕೊಂಡು ಹೋಗುತ್ತಿದ್ದಾರೆ. ಈ ಬಗ್ಗೆ ಅನುಮಾನದಿಂದ ಮಾಹಿತಿ ಕಲೆ ಹಾಕಿದಾಗ ಈ ವಿಚಾರ ಗೊತ್ತಾಗಿದೆ. ಸೋಂಕಿತರು ಇಲ್ಲಿಂದ ತೆರಳುವ ಮೊದಲು ಬೇರೆ ಆಸ್ಪತ್ರೆಗಳಲ್ಲಿ ಹಾಸಿಗೆ ಲಭ್ಯತೆ, ಆಂಬುಲೆನ್ಸ್ ಚಾಲಕರಿಗೆ ಕೊಡುವ ಹಣದ ಕುರಿತು ವಿಚಾರಿಸಿದರೆ ಉತ್ತಮ’ ಎಂದು ಶಿವಮೊಗ್ಗದ ಖಾಸಗಿ ಆಸ್ಪತ್ರೆಯೊಂದರ ವೈದ್ಯರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಮಾನವೀಯ ನೆಲೆಯಲ್ಲಿ ಚಿಕಿತ್ಸೆ’: ‘ಭಟ್ಕಳ ಆಸ್ಪತ್ರೆಯಲ್ಲಿ ಸದ್ಯಕ್ಕೆ ಕೋವಿಡ್ ಹಾಸಿಗೆಗಳು ಲಭ್ಯ ಇವೆ. ರೋಗಿಯು ಹೊರ ಜಿಲ್ಲೆಯವರಾಗಿದ್ದು, ಉಸಿರಾಟದ ಸಮಸ್ಯೆ ಎಂದು ಆಸ್ಪತ್ರೆಗೆ ಬಂದಾಗ ಯಾವುದೇ ಶಿಫಾರಸು ಪತ್ರ ಇಲ್ಲದಿದ್ದರೂ ಮಾನವೀಯ ನೆಲೆಯಲ್ಲಿ ಚಿಕಿತ್ಸೆ ನೀಡುತ್ತಿದ್ದೇವೆ. ಈ ಬಗ್ಗೆ ತಾಲ್ಲೂಕು ಆಡಳಿತದ ಗಮನಕ್ಕೂ ತರಲಾಗಿದೆ’ ಎಂದು ಡಾ. ಸವಿತಾ ಕಾಮತ್ ಹೇಳಿದ್ದಾರೆ.

**
ರೋಗಿಗೆ ವೆಂಟಿಲೇಟರ್‌ ಬೇಕಾಗುವುದು ಗಂಭೀರ ಸ್ಥಿತಿಯಲ್ಲಿದ್ದಾಗ ಮಾತ್ರ. ಅಂತವರಿಂದಲೂ ಹಣ ವಸೂಲಿ ಅತ್ಯಂತ ಹೀನ ಸಂಗತಿ.
– ಡಾ.ಸವಿತಾ ಕಾಮತ್, ಭಟ್ಕಳ ತಾಲ್ಲೂಕು ಆಸ್ಪತ್ರೆ ವೈದ್ಯಾಧಿಕಾರಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು