ಸೋಮವಾರ, ಡಿಸೆಂಬರ್ 9, 2019
20 °C
ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಮುಖಂಡ ಆನಂದ ಅಸ್ನೋಟಿಕರ್ ಆರೋಪ

ಪರಿಹಾರ ಹಣದಲ್ಲಿ ಶಾಸಕಿ ರೂಪಾಲಿ ನಾಯ್ಕ ಕಮಿಷನ್ ದಂಧೆ: ಆನಂದ್ ಅಸ್ನೋಟಿಕರ್ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ‘ನೆರೆಹಾವಳಿಗೆ ಬಂದ ಅನುದಾನದಲ್ಲಿ ಶಾಸಕಿ ರೂಪಾಲಿ ನಾಯ್ಕ ಕಮಿಷನ್ ದಂಧೆ ನಡೆಸುತ್ತಿದ್ದಾರೆ. ಇದರಲ್ಲಿ ದೊಡ್ಡ ಮಟ್ಟದ ಭ್ರಷ್ಟಾಚಾರವಾಗುತ್ತಿದ್ದು, ಅವರು ಶೇ 25ರಷ್ಟು ಕಮಿಶನ್ ಪಡೆಯುತ್ತಿದ್ದಾರೆ’ ಎಂದು ಜೆಡಿಎಸ್ ಮುಖಂಡ ಆನಂದ್ ಅಸ್ನೋಟಿಕರ್ ಗಂಭೀರ ಆರೋಪ ಮಾಡಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನೆರೆಯಿಂದಾದ ಹಾನಿಗೆ ಕೇಂದ್ರ ಸರ್ಕಾರವು ವಿವಿಧ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡಿದೆ. ನಿಯಮದ ಪ್ರಕಾರ ₹ 5 ಲಕ್ಷಕ್ಕಿಂತ ಮೇಲಿನ ಮೊತ್ತದ ಕಾಮಗಾರಿಗೆ ಟೆಂಡರ್ ಆಗಬೇಕಿತ್ತು. ಆದರೆ, ಟೆಂಡರ್ ಇಲ್ಲದೇ ನೇರವಾಗಿ ಶೇ 25ರಿಂದ ಶೇ 30ರವರೆಗೆ ಕಮಿಶನ್ ಪಡೆದು ಅವರು ಕಾಮಗಾರಿ ಮಂಜೂರಿ ಮಾಡಿಸುತ್ತಿದ್ದಾರೆ. ಬಿಜೆಪಿಯಲ್ಲಿರುವ ಗುತ್ತಿಗೆದಾರರೇ ನನಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ’ ಎಂದು ಹೇಳಿದರು.

‘ಬಡಬಗ್ಗರಿಗೆ ಸೇರಬೇಕಾದ ಪರಿಹಾರ ಧನವನ್ನು ತಮ್ಮ ಬೊಕ್ಕಸಕ್ಕೆ ಹಾಕಿಕೊಳ್ಳುತ್ತಿರುವ ಕ್ರಮವನ್ನು ನಾನು ಖಂಡಿಸುತ್ತೇನೆ. ಇದೇ ರೀತಿ ಮುಂದುವರಿದರೆ ಶಾಸಕಿ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡುತ್ತೇನೆ’ ಎಂದು ಎಚ್ಚರಿಸಿದರು. 

‘ನೆರೆಯಿಂದ ಸಮಸ್ಯೆಗೀಡಾದ ಜನಸಾಮಾನ್ಯರ ಬವಣೆ ನೀಗಿಲ್ಲ. ಅನೇಕರು ಸೂರಿಗಾಗಿ ಪರದಾಡುತ್ತಿದ್ದಾರೆ. ಹೊಟ್ಟೆ, ಬಟ್ಟೆಯ ಚಿಂತೆಯಲ್ಲಿದ್ದಾರೆ. ಬೆಳೆಹಾನಿಯಿಂದ ರೈತರು ಸಂಕಷ್ಟದಲ್ಲಿದ್ದಾರೆ. ಅವರಿಗೆ ಸಲ್ಲಬೇಕಾದ ಹಣದಲ್ಲಿ ಕಮಿಷನ್ ದೋಚುವುದು ನ್ಯಾಯವೇ? ಶಾಸಕರಾದವರಿಗೆ ಇದು ಶೋಭೆ ತರುತ್ತದೆಯೇ’ ಎಂದು ಪ್ರಶ್ನಿಸಿದರು. 

‘ಹಿಂದಿನ ಅವಧಿಯ ಶಾಸಕರು ಶೇ 20ರಷ್ಟು ಕಮಿಷನ್ ವ್ಯವಹಾರ ನಡೆಸುತ್ತಿದ್ದುದು ಬಯಲಾಗಿತ್ತು. ಈಗಿನ ಶಾಸಕರು ಅವರನ್ನೂ ಮೀರಿಸಿ ಭ್ರಷ್ಟಾಚಾರ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

ಅನುಮಾನಾಸ್ಪದ ನಡೆ: ‘ಕೈಗಾ ಐದು ಮತ್ತು ಆರನೇ ಘಟಕಗಳ ನಿರ್ಮಾಣದ ವಿಚಾರದಲ್ಲಿ ಶಾಸಕಿ ರೂಪಾಲಿ ಇದುವರೆಗೂ ತಮ್ಮ ನಿಲುವನ್ನು ವ್ಯಕ್ತಪಡಿಸಿಲ್ಲ. ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಕಾರ್ಯಕರ್ತರು ಹೋರಾಟದಲ್ಲಿ ಭಾಗಿಯಾಗಿದ್ದಾರೆ. ಆದರೆ, ಶಾಸಕಿ ಮಾತ್ರ ಜಾಣ ಮೌನ ವಹಿಸಿದ್ದಾರೆ. ಮಲ್ಲಾಪುರದಲ್ಲಿ ನಡೆದ ಪ್ರತಿಭಟನಾ ಸಮಾವೇಶಕ್ಕೂ ಅವರು ಗೈರು ಹಾಜರಾದರು. ಕೈಗಾ ಹೊಸ ಘಟಕಗಳ ನಿರ್ಮಾಣದ ವಿಚಾರದಲ್ಲಿ ಅವರು ಉತ್ತರಿಸಲೇಬೇಕು’ ಎಂದು ಆನಂದ್ ಅಸ್ನೋಟಿಕರ್ ಒತ್ತಾಯಿಸಿದರು.

ಬಂದರು ವಿಸ್ತರಣೆಗೆ ವಿರೋಧ: ‘ಕಾರವಾರಕ್ಕೆ ಇರುವ ಏಕೈಕ ಕಡಲತೀರವನ್ನು ಅಭಿವೃದ್ಧಿಯ ನೆಪದಲ್ಲಿ ಹಾಳು ಮಾಡುವ ಪ್ರಯತ್ನ ನಡೆಯುತ್ತಿದೆ. ಬಂದರು ವಿಸ್ತರಣೆ ಮಾಡುವುದಾದರೆ ತದಡಿ, ಬೆಲೆಕೇರಿಯಲ್ಲಿ ಮಾಡಲಿ. ಇಲ್ಲಿ ಮಾಡುವುದರಿಂದ ಮೀನುಗಾರರಿಗೂ ಸಮಸ್ಯೆಯಾಗಲಿದೆ. ಜೊತೆಗೆ ಪ್ರವಾಸೋದ್ಯಮಕ್ಕೂ ಪೆಟ್ಟು ಬೀಳಲಿದೆ. ಈ ಕಡಲತೀರವನ್ನು ಉಳಿಸಿಕೊಳ್ಳಲು ನಾನು ಸಾರ್ವಜನಿಕರೊಂದಿಗೆ ಕಾನೂನಾತ್ಮಕ ಹೋರಾಟ ಮಾಡುತ್ತೇನೆ’ ಎಂದು ಆನಂದ್ ಅಸ್ನೋಟಿಕರ್ ಹೇಳಿದರು.

ರಾಜೇಶ ಮಾಜಾಳಿಕರ್, ರಂಜು ಮಾಳ್ಸೇಕರ್ ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು