ಉತ್ತರ ಕನ್ನಡ ಜಿಲ್ಲೆಯಲ್ಲೂ ‘ಅನಂತ’ ಹೆಜ್ಜೆ ಗುರುತು

7
ಕೇಂದ್ರ ಸಚಿವ ಅನಂತಕುಮಾರ್ ಅವರ ಜತೆ ಒಡನಾಟ ನೆನಪಿಸಿಕೊಂಡ ಡಾ.ಪಿಕಳೆ

ಉತ್ತರ ಕನ್ನಡ ಜಿಲ್ಲೆಯಲ್ಲೂ ‘ಅನಂತ’ ಹೆಜ್ಜೆ ಗುರುತು

Published:
Updated:
Deccan Herald

ಕಾರವಾರ: ಅನಾರೋಗ್ಯದಿಂದ ನಿಧನರಾದ ಕೇಂದ್ರ ಸಚಿವ ಅನಂತಕುಮಾರ್ ಅವರ ಹೆಜ್ಜೆ ಗುರುತುಗಳು ಉತ್ತರ ಕನ್ನಡ ಜಿಲ್ಲೆಯಲ್ಲೂ ಸಾಕಷ್ಟು ಬಾರಿ ಮೂಡಿವೆ. ಎಬಿವಿಪಿ, ಬಿಜೆಪಿ ಸಂಘಟನೆ ಸಲುವಾಗಿ ಅವರು ಜಿಲ್ಲೆಗೆ ಹಲವು ಸಲ ಭೇಟಿ ನೀಡಿದ್ದರು. 

ಸಂಘಟನಾ ಚತುರ ಎಂದೇ ಪ್ರಸಿದ್ಧರಾಗಿದ್ದ ಅನಂತಕುಮಾರ್, ಮೊದಲ ಬಾರಿ ಕಾರವಾರಕ್ಕೆ 1984ರಲ್ಲಿ ಭೇಟಿ ನೀಡಿದ್ದರು ಎಂದು ನೆನಪಿಸಿಕೊಳ್ಳುತ್ತಾರೆ ನಗರದ ಹಿರಿಯರಾದ ಡಾ.ಎಸ್.ಆರ್.ಪಿಕಳೆ.

‘ಎಬಿವಿಪಿಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸುವ ಸಲುವಾಗಿ ಅವರು ಅಂದು ಭೇಟಿ ನೀಡಿದ್ದರು. ಆಗ ಅವರು ಸಂಘಟನೆಯ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿಯ ಜವಾಬ್ದಾರಿ ವಹಿಸಿಕೊಂಡಿದ್ದರು. ಅವರನ್ನು ನಾನೇ ದಾಂಡೇಲಿಗೆ ಕರೆದುಕೊಂಡು ಹೋಗಿದ್ದೆ’ ಎಂದು ನೆನಪಿಸಿಕೊಂಡರು. 

‘ಅವರು ದಾಂಡೇಲಿ ಕಾರ್ಯಕ್ರಮ ಮುಗಿಸಿಕೊಂಡು ನಮ್ಮ ಮನೆಗೆ ರಾತ್ರಿ ಊಟಕ್ಕೆ ಬಂದಿದ್ದರು. ಎಲ್ಲರನ್ನೂ ಅತ್ಯಂತ ಗೌರವ, ಪ್ರೀತಿಯಿಂದ ಮಾತನಾಡಿಸಿದ್ದರು. ಆಗಿನ ಕಾಲದ ರಾಜಕೀಯ, ಎಬಿವಿಪಿ ಸಂಘಟನೆ ಹೇಗೆ ಮತ್ತು ಯಾಕೆ ಅಗತ್ಯ ಎಂದೆಲ್ಲ ಅವರು ನನ್ನ ಜತೆ ಮಾತನಾಡಿದ್ದ ನೆನಪು. ಅವರ ಸಾಮರ್ಥ್ಯದಿಂದ ಪಕ್ಷದಲ್ಲಿ ಸಣ್ಣ ಪ್ರಾಯಕ್ಕೇ ಉನ್ನತ ಜವಾಬ್ದಾರಿಗಳು ಸಿಕ್ಕವು’ ಎಂದು ಅವರು ಸ್ಮರಿಸಿದರು. 

‘ಒಮ್ಮೆ ಪರಿಚಯವಾದರೆ ಅವರ ಹೆಸರು ಹೇಳಿ ಕರೆದು ಮಾತನಾಡಿಸುತ್ತಿದ್ದುದು ಅನಂತಕುಮಾರ್ ಅವರ ವಿಶೇಷತೆಯಾಗಿತ್ತು. ಅವರೊಮ್ಮೆ ಕಾರವಾರದಲ್ಲಿ ಹೆಲಿಕಾಪ್ಟರ್‌ನಿಂದ ಇಳಿದವರೇ ‘ಡಾಕ್ಟರ್ ಹೇಗಿದೀರಿ’ ಎಂದು ವಿಚಾರಿಸಿದ್ದರು. ನನ್ನ ಮಾತ್ರವಲ್ಲ, ಪರಿಚಯವಾದ ಎಲ್ಲರನ್ನೂ ಇದೇ ರೀತಿ ನಗುಮುಖದಿಂದ ಮಾತನಾಡಿಸುತ್ತಿದ್ದರು. ಅಟಲ್ ಬಿಹಾರಿ ವಾಜಪೇಯಿ, ಲಾಲ್ ಕೃಷ್ಣ ಅಡ್ವಾಣಿ ಅವರಂತಹ ರಾಜಕಾರಣಿಗಳ ಸಂಗ ಸಿಕ್ಕಿದ್ದ ಅವರು ತಮ್ಮ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿದ್ದರು’ ಎಂದು ಹೇಳಿದರು.

ಪ್ರಚಾರಕ್ಕೆ ಬಂದಿರಲಿಲ್ಲ: ಅನಂತಕುಮಾರ್ ಅವರು ದಶಕದ ಹಿಂದೆ ಪಕ್ಷ ಸಂಘಟನೆಗೆಂದು ಹಲವು ಬಾರಿ ಉತ್ತರ ಕನ್ನಡ ಜಿಲ್ಲೆಗೆ ಭೇಟಿ ನೀಡಿದ್ದರು. ಆದರೆ, ಪಕ್ಷದಲ್ಲಿ ಹಾಗೂ ಸರ್ಕಾರದಲ್ಲಿ ಜವಾಬ್ದಾರಿ ಹೆಚ್ಚಿದ್ದರಿಂದ ಈಚಿನ ವರ್ಷಗಳಲ್ಲಿ ಆಗಮಿಸುವುದು ಕಡಿಮೆಯಾಯಿತು. ಈ ಬಾರಿ ವಿಧಾನಸಭೆ ಚುನಾವಣೆ ಸಂದರ್ಭದಲ್ಲೂ ಅವರು ಜಿಲ್ಲೆಯ ಬಿಜೆಪಿಯ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಬಂದಿರಲಿಲ್ಲ.

ಸಚಿವ ಆರ್.ವಿ. ದೇಶಪಾಂಡೆ ಬೇಸರ: ಅನಂತಕುಮಾರ್ ಅವರು ಸ್ನೇಹಜೀವಿಯಾಗಿದ್ದರು. ಪಕ್ಷಾತೀತವಾದ ವರ್ಚಸ್ಸನ್ನು ಬೆಳೆಸಿಕೊಂಡಿದ್ದ ಅವರ ಅಕಾಲಿಕ ನಿಧನದಿಂದ ನಾಡು ಒಬ್ಬ ಸಮರ್ಥ ನೇತಾರನನ್ನು ಕಳೆದುಕೊಂಡಿದೆ ಎಂದು ಕಂದಾಯ ಮತ್ತು ಕೌಶಲಾಭಿವೃದ್ಧಿ ಸಚಿವ ಆರ್.ವಿ.ದೇಶಪಾಂಡೆ ಬೇಸರ ವ್ಯಕ್ತಪಡಿಸಿದ್ದಾರೆ.

ಉತ್ತಮ ಸಂಸದೀಯ ಪಟುವಾಗಿದ್ದ ಅನಂತಕುಮಾರ್, ರಾಷ್ಟ್ರಮಟ್ಟದಲ್ಲಿ ರಾಜ್ಯದ ಕೆಲಸಗಳಿಗೆ ಸದಾ ನೆರವಿನ ಹಸ್ತ ಚಾಚುತ್ತಿದ್ದರು ಎಂದು ಸ್ಮರಿಸಿದ್ದಾರೆ. 

ಬಿಜೆಪಿ ಕಚೇರಿಯಲ್ಲಿ ಶ್ರದ್ಧಾಂಜಲಿ: ನಗರದ ಬಿಜೆಪಿ ಕಚೇರಿಯಲ್ಲಿ ಶ್ರದ್ಧಾಂಜಲಿ ಸಭೆ ಆಯೋಜಿಸಲಾಗಿತ್ತು. ಅನಂತಕುಮಾರ್ ಅವರ ಭಾವಚಿತ್ರಕ್ಕೆ ಹೂವಿನ ಹಾರ ಹಾಕಿ, ದೀಪ ಬೆಳಗಿದ ಕಾರ್ಯಕರ್ತರು, ಪಕ್ಷಕ್ಕೆ ಹಾಗೂ ರಾಜಕೀಯ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಎಂದು ಬೇಸರಿಸಿದರು. ಶಾಸಕಿ ರೂಪಾಲಿ ನಾಯ್ಕ ಅವರು, ‘ಅನಂತಕುಮಾರ್ ಅವರು ಸರಳ ವ್ಯಕ್ತಿತ್ವ, ನೇರ ನುಡಿಯಿಂದ ಎಲ್ಲರ ಗಮನ ಸೆಳೆಯುತ್ತಿದ್ದರು. ಆಡಳಿತಾತ್ಮಕ ಮತ್ತು ಅಭಿವೃದ್ಧಿ ವಿಚಾರಗಳಲ್ಲಿ ತಾರ್ಕಿಕವಾಗಿ ಚರ್ಚಿಸುತ್ತಿದ್ದರು’ ಎಂದು ನೆನಪಿಸಿಕೊಂಡರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !