ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಸರಿಗೆ ಮಾತ್ರ ಅಭ್ಯರ್ಥಿಯಾಗಿದ್ದ ಹೆಗಡೆ: ಆನಂದ ಅಸ್ನೋಟಿಕರ್

'ಚುನಾವಣೆಯ ತುಂಬ ವ್ಯಾಪಿಸಿಕೊಂಡ ನರೇಂದ್ರ ಮೋದಿ'
Last Updated 24 ಮೇ 2019, 19:30 IST
ಅಕ್ಷರ ಗಾತ್ರ

ಕಾರವಾರ:‘ಅಭಿವೃದ್ಧಿ ಕಾರ್ಯಕ್ರಮಗಳನ್ನು ನೋಡದೇ ಕೇವಲ ಮೋದಿಯನ್ನು ತಲೆಯಲ್ಲಿಟ್ಟುಕೊಂಡು ಜನ ಮತ ನೀಡಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಅನಂತಕುಮಾರ ಹೆಗಡೆ ಹೆಸರಿಗೆ ಮಾತ್ರ ಅಭ್ಯರ್ಥಿಯೇ ಹೊರತು, ಅವರೆಲ್ಲೂ ಕಾಣಲಿಲ್ಲ. ಈಗ ಕಾಣ್ತಿರೋದು ಮೋದಿ, ಜೆಡಿಎಸ್, ಕಾಂಗ್ರೆಸ್, ಆನಂದ ಅಸ್ನೋಟಿಕರ್...’

ಲೋಕಸಭಾ ಚುನಾವಣೆಯಲ್ಲಿ ಉತ್ತರ ಕನ್ನಡ ಕ್ಷೇತ್ರದ ಮೈತ್ರಿ ಅಭ್ಯರ್ಥಿಯಾಗಿದ್ದ ಜೆಡಿಎಸ್‌ನ ಆನಂದ ಅಸ್ನೋಟಿಕರ್ ತಮ್ಮ ಸೋಲನ್ನು ಈ ರೀತಿ ವಿಮರ್ಶಿಸಿದರು.

ಬಿಜೆಪಿಯ ಅನಂತಕುಮಾರ ಹೆಗಡೆ ಗೆಲುವಿನಅಂತರದಷ್ಟು ಮತಗಳನ್ನೂ ಆನಂದ ಅಸ್ನೋಟಿಕರ್ ಪಡೆದುಕೊಳ್ಳಲು ಸಾಧ್ಯವಾಗಲಿಲ್ಲ.ಯಾಕೆ ಹೀಗಾಯ್ತು, ಸೋಲಿಗೆ ಕಾರಣಗಳೇನು, ಮುಂದಿನ ನಡೆಯೇನು ಮುಂತಾದ ವಿಚಾರಗಳ ಬಗ್ಗೆ ‘ಪ್ರಜಾವಾಣಿ’ ಜತೆ ಅವರು ಮಾತನಾಡಿದ್ದಾರೆ.

* ತುಂಬ ಪ್ರಯತ್ನದ ಬಳಿಕವೂ ಸೋಲಿಗೆ ಕಾರಣವೇನು ಎಂದು ಭಾವಿಸಿದ್ದೀರಿ?

ಈ ಚುನಾವಣೆ ಆನಂದ ಅಸ್ನೋಟಿಕರ್ ಹಾಗೂ ಅನಂತಕುಮಾರ ನಡುವೆ ಆಗಿಲ್ಲ. ಇದು ಜೆಡಿಎಸ್, ಕಾಂಗ್ರೆಸ್ ಮತ್ತು ನರೇಂದ್ರ ಮೋದಿ ಎಂದಾಗಿದೆ. ಹಿಂದುತ್ವದ ಆಧಾರದ ಮೇಲೆ ಜನರ ನಡುವೆ ಒಂದು ರೀತಿಯ ವಾತಾವರಣ ನಿರ್ಮಿಸಲಾಯಿತು. ನಮ್ಮ ಜಿಲ್ಲೆಯ ಕರಾವಳಿ ಭಾಗದಲ್ಲಿ ಅದು ಜಾಸ್ತಿಯಾಯಿತು. ಇಲ್ಲಿನವರು ಭಾವನಾತ್ಮಕ ಜನ. ಧರ್ಮ, ಜಾತಿ ಆಧಾರದ ಮೇಲೆ ಬಿಜೆಪಿಯಿಂದ ಆಕರ್ಷಣೆ ಉಂಟಾಯಿತು. ಮೋದಿಯ ಮಾತುಗಳಿಗೆ ಜನ ಮರುಳಾಗಿದ್ದೇ ನನ್ನ ಸೋಲಿಗೆ ಕಾರಣ.

* ಮೈತ್ರಿಧರ್ಮದಅಂಗವಾಗಿತಮಗೆ ಟಿಕೆಟ್ ಘೋಷಣೆಯಾದಾಗ ಕಾಂಗ್ರೆಸ್ ಮುಖಂಡರುಅಸಮಾಧಾನ ವ್ಯಕ್ತಪಡಿಸಿದ್ದರು. ಅದು ಸೋಲಿಗೆ ಕಾರಣವಾಗಲಿಲ್ಲವೇ?

ನಾನು ಈ ಸಂದರ್ಭದಲ್ಲಿ ಯಾರನ್ನೂ ಟೀಕಿಸುವುದಿಲ್ಲ. ಯಾರು ಎಷ್ಟು ಸಹಕಾರ ಕೊಟ್ಟಿದ್ದಾರೆ ಎಂದು ಕ್ಷೇತ್ರದ ಜನರಿಗೆ ತಿಳಿದಿದೆ. ಹಾಗಾಗಿ ನಾನು ರಾಜಕೀಯದಲ್ಲಿ ಮುಂದುವರಿಯುತ್ತೇನೆ, ಜನರ ಸಂಪರ್ಕದಲ್ಲಿರುತ್ತೇನೆ.

* ಅನಂತಕುಮಾರ ಹೆಗಡೆ ವಿರುದ್ಧ ಅಲೆಯಿದೆ ಎಂದು ಹೇಳಿದ್ದಿರಿ. ಆದರೆ, ಅದರಿಂದ ನಿಮಗೆ ಯಾಕೆ ಲಾಭವಾಗಲಿಲ್ಲ?

ನಾನು ನೂರಕ್ಕೆ ನೂರು ಗೆಲ್ಲುತ್ತೇನೆ ಎಂಬ ವಿಶ್ವಾಸದಲ್ಲಿದ್ದೆ. ಕ್ಷೇತ್ರದಲ್ಲಿ ಅನಂತಕುಮಾರ ವಿರುದ್ಧ ಬಹಳ ದೊಡ್ಡ ಅಲೆಯಿತ್ತು. ಅವರ ಹೆಸರು ಹೇಳಿದರೆ ಜನ ಬೈಯುತ್ತಿದ್ದರು. ಅವರು ಹೋದಲ್ಲಿ ಕಾರ್ಯಕ್ರಮಗಳಿಗೆ ಕಡಿಮೆ ಜನ ಸೇರುತ್ತಿದ್ದರು. ಕಿತ್ತೂರು ಖಾನಾಪುರದಲ್ಲೂಇದೇ ರೀತಿಯಿತ್ತು. ಆದರೆ, ಬಳಿಕ ಕಂಡುಬಂದ ವಾತಾವರಣದಿಂದ ನನಗೇ ಆಶ್ಚರ್ಯವಾಗಿದೆ.

* ಅನಂತಕುಮಾರ ಹೆಗಡೆ ವಿರುದ್ಧ ಕಟುವಾಗಿ ವಾಗ್ದಾಳಿ ಮಾಡಿದ್ದಿರಿ...

ನಾನು ಅವರನ್ನು ಮುಂದೆಯೂ ಟೀಕಿಸುತ್ತೇನೆ. ಅವರ ವ್ಯಕ್ತಿತ್ವ, ನಡವಳಿಕೆ, ಜಿಲ್ಲೆಗೇನು ಮಾಡಿದ್ದಾರೆ ಎಂದು ಜನರಿಗೆ ಗೊತ್ತಿದೆ. ಮುಂದೆಯೂ ಅವರು ತಪ್ಪು ಮಾಡಿದಾಗ ಸರಿಯಾದ ಮಾರ್ಗದರ್ಶನ ಮಾಡುತ್ತೇನೆ. ಉತ್ತಮ ಕಾರ್ಯಗಳಿಗೆಸಹಕಾರ ಕೊಡ್ತೇನೆ. ಅವರು ಚುರುಕಾಗಿ ಕೆಲಸ ಮಾಡಲಿ.

* ಈ ಬಾರಿಯ ಚುನಾವಣೆ ಯಾವ ಆಧಾರದಲ್ಲಿ ನಡೆಯಿತು?

ದೇಶದಲ್ಲಿ ರಾಜಕೀಯ ದೃಷ್ಟಿಯಿಂದ ಈಗಾಗಲೇ ಎರಡು ಭಾಗಗಳಾಗಿವೆ. ಜಾತ್ಯತೀತ ಭಾವನೆಯುಳ್ಳ ಪಕ್ಷಗಳಿಗೆ ‘ಮುಸ್ಲಿಮರ ಪಕ್ಷ’ಎಂದು ನೋಡಲಾಗುತ್ತಿದೆ.ಈ ಬಾರಿಯ ಮಾದರಿಯಲ್ಲೇ ಧರ್ಮ ಆಧಾರದ ಚುನಾವಣೆಗಳು ಮುಂದೆಯೂ ಆಗಬಹುದು. ಹಿಂದುತ್ವದ ಆಧಾರದಲ್ಲಿ ಜನರನ್ನು ಯಾಮಾರಿಸುವಲ್ಲಿ ಬಿಜೆಪಿಯವರು ಸಫಲರಾಗಿದ್ದಾರೆ. ಹಾಗಾಗಿ ಎಲ್ಲ ಪಕ್ಷಗಳೂ ತಮ್ಮ ಚಿಹ್ನೆಗಳ ಪಕ್ಕದಲ್ಲಿ ಹಿಂದೂ ಧರ್ಮದ ಚಿಹ್ನೆಗಳಾದ ಓಂ ಆಗಲೀ ತ್ರಿಶೂಲವನ್ನಾಗಲೀ ಇಟ್ಟುಕೊಳ್ಳಬೇಕು ಎಂದು ಸಲಹೆ ನೀಡುತ್ತೇನೆ.

* ಕಾಂಗ್ರೆಸ್ ಮುಖಂಡರಿಗೆ ಏನು ಹೇಳುತ್ತೀರಿ?

ನನಗೆ ಸಹಕಾರ ನೀಡಿದ ಕಾಂಗ್ರೆಸ್‌ ಪಕ್ಷದ ಪ್ರತಿಯೊಬ್ಬರಿಗೂ ನಾನು ಧನ್ಯವಾದ ಹೇಳುತ್ತೇನೆ. ಮುಂದೊಂದು ದಿನ ಮತ್ತೆ ಪುಲ್ವಾಮಾ ಮಾದರಿಯ ದಾಳಿ, ಭಾರತ– ಪಾಕಿಸ್ತಾನ ನಡುವೆ ದಾಳಿಗಳಾಗುತ್ತವೆ. ಹಿಂದೂ– ಮುಸ್ಲಿಂ ವಿವಾದಗಳಾಗುತ್ತವೆ. ಬಳಿಕಇದೇ ರೀತಿಯ ಚುನಾವಣೆಗಳಾಗುತ್ತವೆ. ಹಾಗಾಗಿ ಎಲ್ಲ ಪ್ರಾದೇಶಿಕ ಪಕ್ಷಗಳ ಹಾಗೂ ಕಾಂಗ್ರೆಸ್ ಮುಖಂಡರು ಒಟ್ಟಾಗಿ ಕುಳಿತು ಮುಂದಿನ ಹಾದಿಯ ಬಗ್ಗೆ ಯೋಚನೆ ಮಾಡಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT