ಶನಿವಾರ, ಜುಲೈ 24, 2021
27 °C
ಅಂಕೋಲಾ: ನದಿಬಾಗದಲ್ಲಿ ಕೋಡಿ ಕಡಿದ ಗ್ರಾಮಸ್ಥರು

ಉತ್ತರ ಕನ್ನಡ: ಸಮುದ್ರ ಸೇರಿದ ಹಳ್ಳದ ನೀರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಂಕೋಲಾ: ಎರಡು ದಿನಗಳಿಂದ ಸುರಿಯುತ್ತಿರುವ ಜೋರಾದ ಮಳೆಯು ತಾಲ್ಲೂಕಿನ ನದಿಬಾಗ ಪ್ರದೇಶದಲ್ಲಿ ಸಮಸ್ಯೆ ತಂದಿಟ್ಟಿದೆ. ಹಳ್ಳದ ನೀರು ಏರಿಕೆಯಾಗಿ, ಸುತ್ತಮುತ್ತಲಿನ ಮನೆಗಳು ಜಲಾವೃತವಾಗಿವೆ. ಹೀಗಾಗಿ ಸಮುದ್ರವನ್ನು ಸಂಪರ್ಕಿಸುವ ಕೋಡಿಯನ್ನು ಶುಕ್ರವಾರ ಕಡಿದ ಸ್ಥಳೀಯರು, ಹಳ್ಳದ ಹಿನ್ನೀರು ಸಮುದ್ರ ಸೇರುವಂತೆ ಮಾಡಿದರು.

ಮುಂಗಾರಿನ ಆರಂಭದಲ್ಲೇ ಹಳ್ಳ ಉಕ್ಕಿ ಹರಿಯುವುದನ್ನು ಕಂಡ ನದಿಬಾಗ ಗ್ರಾಮಸ್ಥರು ಒಟ್ಟಾಗಿ ಕೋಡಿ ಕಡಿದರು. ಬೇಸಿಗೆಯಲ್ಲಿ ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿ ಕೋಡಿಯು ಮರಳಿನಿಂದ ಮುಚ್ಚಿ ಹೋಗುತ್ತದೆ. ಮಳೆ ಹಳ್ಳದ ನೀರು ಮೇಲೆ ಹರಿಯುತ್ತದೆ. ಸುಮಾರು 10 ಗಂಟೆ ನಿರಂತರವಾಗಿ ಶ್ರಮಿಸಿ ನೀರು ಹರಿಯಲು ಅನುವು ಮಾಡುವುದು ಪ್ರತಿ ವರ್ಷವೂ ನಡೆದುಬಂದಿದೆ.

ವಂದಿಗೆ, ಹೊಸಗದ್ದೆ ಹಾಗೂ ಸಮೀಪದ ಬೆಟ್ಟದ ಮೇಲಿನಿಂದ ಹರಿದು ಬರುವ ಮಳೆ ನೀರು ಇದೇ ಹಳ್ಳದ ಮೂಲಕ ಸಮುದ್ರ ಸೇರುತ್ತದೆ. ಹಳ್ಳದ ತುದಿಯಲ್ಲಿ ಭಾರಿ ಪ್ರಮಾಣದಲ್ಲಿ ನೀರು ಹರಿಯುವ ಕಾರಣ ಮರಳನ್ನು ತೆಗೆಯದಿದ್ದರೆ, ಹಿನ್ನೀರು ಕೃಷಿ ಜಮೀನು, ಸಮೀಪದ ಮನೆಗಳಿಗೆ ನುಗ್ಗುತ್ತದೆ.

ಇದು ನಾಲ್ಕು ಗ್ರಾಮ ಪಂಚಾಯ್ತಿಗಳಿಗೆ ಸಂಬಂಧಿಸಿದೆ. ಆದರೆ, ಸ್ಥಳೀಯ ಬೊಬ್ರವಾಡಾ ಗ್ರಾಮ ಪಂಚಾಯ್ತಿಯು ಕೋಡಿ ಕಡಿಯಲು ಸಹಾಯಧನವಾಗಿ ₹ 10 ಸಾವಿರ ಕೊಡುತ್ತದೆ. ಇದರ ಹೊರತಾಗಿ ಸರ್ಕಾರದಿಂದ ಬೇರೆ ಯಾವುದೇ ಧನಸಹಾಯ ಇದಕ್ಕೆ ಸಿಗುತ್ತಿಲ್ಲ.

ನಿರಂತರ ಸಮಸ್ಯೆ: ಹಳ್ಳದ ಹಿನ್ನೀರಿನಿಂದ 60ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಈ ಹಳ್ಳದ ಪಕ್ಕದಲ್ಲಿ ಸುಮಾರು 50 ವರ್ಷಗಳ ಹಿಂದೆ ನಿರ್ಮಿಸಿದ ತಡೆಗೋಡೆ ಕುಸಿದಿದೆ. ಅಧಿಕಾರಿಗಳು ಇಲ್ಲಿಗೆ ಭೇಟಿ ನೀಡಿ ವಾಪಸಾಗುತ್ತಾರೆ. ಆದರೆ, ಸಮಸ್ಯೆ ಮಾತ್ರ ಹಾಗೇ ಉಳಿದಿದೆ. ಹಾಗಾಗಿ ತಡೆಗೋಡೆ ನಿರ್ಮಾಣವನ್ನು ತಕ್ಷಣ ಆರಂಭಿಸಬೇಕು ಎಂದು ಬೊಬ್ರವಾಡಾ ಗ್ರಾಮ ಪಂಚಾಯ್ತಿ ಸದಸ್ಯ ಚಂದ್ರಕಾಂತ ನಾಯ್ಕ ಒತ್ತಾಯಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು