ಶನಿವಾರ, ಮಾರ್ಚ್ 6, 2021
32 °C
ನಡುಗಡ್ಡೆಯಲ್ಲಿ ಜಾತ್ರೆಗೆ ಬಂದ ಭಕ್ತರ ಸಂಖ್ಯೆಯಲ್ಲಿ ಗಣನೀಯವಾಗಿ ಇಳಿಕೆ

ಕಾರವಾರ: ಸರಳವಾಗಿ ನಡೆದ ಕೂರ್ಮಗಡ ಜಾತ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ನಗರ ಸಮೀಪದ ಕೂರ್ಮಗಡ ನಡುಗಡ್ಡೆಯಲ್ಲಿ ನರಸಿಂಹ ದೇವರ ಜಾತ್ರೆಯು ಸಂಪ್ರದಾಯ ಬದ್ಧವಾಗಿ ಗುರುವಾರ ನೆರವೇರಿತು. ದೋಣಿಗಳಲ್ಲಿ ಬಂದ ನೂರಾರು ಭಕ್ತರು, ಹರಕೆ ಸಲ್ಲಿಸಿ ದೇವರ ದರ್ಶನ ಪಡೆದರು.

ಕೋಡಿಭಾಗದ ದೇವಸ್ಥಾನದಿಂದ ದೇವರ ವಿಗ್ರಹವನ್ನು ಫಲ, ಪುಷ್ಪಗಳಿಂದ ಸಿಂಗರಿಸಿದ್ದ ದೋಣಿಯಲ್ಲಿ ಬೆಳಿಗ್ಗೆ ಕೂರ್ಮಗಡಕ್ಕೆ ತಂದು ಪೂಜೆ ಸಲ್ಲಿಸಲಾಯಿತು.

ನರಸಿಂಹ ದೇವರಿಗೆ ಬಾಳೆಗೊನೆಯನ್ನು ಹರಕೆ ಸಲ್ಲಿಸುವುದು ವಿಶೇಷವಾಗಿದೆ. ಹಾಗಾಗಿ ಭಕ್ತರು ಮಿಟ್ಕಾ ಬಾಳೆ (ಏಲಕ್ಕಿ ಬಾಳೆ) ಗೊನೆಗಳನ್ನು ತಂದು ದೇವರಿಗೆ ಹರಕೆ ಸಲ್ಲಿಸಿದರು. ಬಳಿಕ ನೈವೇದ್ಯ ಮಾಡಿದ ಗೊನೆಗಳನ್ನು ಹರಾಜಿನಲ್ಲಿ ಭಕ್ತರು ಪಡೆದುಕೊಂಡರು.

ನಡುಗಡ್ಡೆಗೆ ಬೈತಖೋಲ್ ಮೀನುಗಾರಿಕಾ ಬಂದರಿನಿಂದ ಮಾತ್ರ ದೋಣಿಗಳ ಸಂಚಾರಕ್ಕೆ ಅನುಮತಿ ನೀಡಲಾಗಿತ್ತು. ಸಿಂಗರಿಸಿದ್ದ ಮೀನುಗಾರಿಕಾ ದೋಣಿಗಳಲ್ಲಿ ಭಕ್ತರನ್ನು ಕರೆದುಕೊಂಡು ಹೋಗಲಾಯಿತು. ಈ ಬಾರಿ ಕೊರೊನಾ ಮತ್ತು ಎರಡು ವರ್ಷಗಳ ಹಿಂದಿನ ದೋಣಿ ದುರಂತದ ಕರಾಳ ನೆನಪಿನಿಂದಾಗಿ ಅನೇಕ ಭಕ್ತರು ಜಾತ್ರೆಗೆ ಹಾಜರಾಗಲಿಲ್ಲ. ಅಲ್ಲದೇ, ರಾಜ್ಯದ ವಿವಿಧ ಜಿಲ್ಲೆಗಳು, ಮಹಾರಾಷ್ಟ್ರ, ಗೋವಾದಿಂದಲೂ ಜನ ಬರಲಿಲ್ಲ. ಹಾಗಾಗಿ ಉತ್ಸವದ ಸಂದರ್ಭದಲ್ಲಿ ಗಿಜಿಗುಡುವ ನಡುಗಡ್ಡೆಯಲ್ಲಿ ಹೆಚ್ಚಿನ ಗೌಜು, ಗದ್ದಲಗಳು ಇರಲಿಲ್ಲ.

ನಡುಗಡ್ಡೆಯಲ್ಲಿ ದೇವಸ್ಥಾನದ ಕೆಳಭಾಗದ ಪ್ರದೇಶದಲ್ಲಿ ಕುಡಿಯುವ ನೀರು ಮಾರಾಟ ಮಾಡುವವರನ್ನು ಹೊರತುಪಡಿಸಿ ಒಂದೂ ಅಂಗಡಿ, ಜಿಲೇಬಿ ತಯಾರಿಸುವ ಅಂಗಡಿಗಳು ಇರಲಿಲ್ಲ. ಭಕ್ತರ ಸಾಲು ಕೂಡ ಸಣ್ಣದಾಗಿತ್ತು. ಹಾಗಾಗಿ ಮಧ್ಯಾಹ್ನದ ವೇಳೆಗೆ ಜಾತ್ರೆ ಮುಕ್ತಾಯವಾಗಿತ್ತು.

ದೋಣಿಗಳಲ್ಲಿ ಸಾಗುವ ಪ್ರತಿಯೊಬ್ಬರಿಗೂ ಜೀವರಕ್ಷಕ ಜಾಕೆಟ್ ಅನ್ನು ಕಡ್ಡಾಯ ಮಾಡಲಾಗಿತ್ತು. ಬೈತಖೋಲ್ ಬಂದರಿನಲ್ಲಿ ತಹಶೀಲ್ದಾರ್ ಆರ್.ವಿ.ಕಟ್ಟಿ, ಮೀನುಗಾರಿಕಾ ಇಲಾಖೆ ಉಪ ನಿರ್ದೇಶಕ ಪಿ.ನಾಗರಾಜು ಹಾಜರಿದ್ದು, ಸುರಕ್ಷತೆಯ ಕ್ರಮಗಳನ್ನು ಪರಿಶೀಲಿಸಿದರು. ಕೂರ್ಮಗಡ ನಡುಗಡ್ಡೆಗೆ ‍ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬದರಿನಾಥ ಭೇಟಿ ನೀಡಿದರು. ಚಿತ್ತಾಕುಲಾ, ಕಾರವಾರದ ವಿವಿಧ ಠಾಣೆಗಳ ಪೊಲೀಸ್ ಇನ್‌ಸ್ಪೆಕ್ಟರ್‌ಗಳು, ಸಿಬ್ಬಂದಿ ಭದ್ರತೆ ನೋಡಿಕೊಂಡರು.

‘ಭಕ್ತರಿಗೆ ನೆರಳಿನ ವ್ಯವಸ್ಥೆ’: ಶಾಸಕಿ ರೂಪಾಲಿ ನಾಯ್ಕ ಅವರು ಕೂರ್ಮಗಡಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಈ ವೇಳೆ ಸುದ್ದಿಗಾರರ ಜೊತೆ ಮಾತನಾಡಿ, ‘ಇಲ್ಲಿನ ಜಾತ್ರೆಗೆ ಬರುವ ಭಕ್ತರಿಗೆ ಸಾಲಾಗಿ ನಿಲ್ಲುವಾಗ ನೆರಳಿನ ವ್ಯವಸ್ಥೆ ಮಾಡಲಾಗುವುದು. ದೋಣಿಯು ನಿಲ್ಲುವ ಸ್ಥಳದಿಂದ ದೇವಸ್ಥಾನದವರೆಗೆ ಮೆಟ್ಟಿಲುಗಳಿಗೆ ಶೀಟ್‌ಗಳನ್ನು ಅಳವಡಿಸಿ ಚಾವಣಿ ನಿರ್ಮಿಸಲು ಯೋಚಿಸಲಾಗಿದೆ’ ಎಂದರು.

‘ನಡುಗಡ್ಡೆಯು ಖಾಸಗಿ ಸ್ವತ್ತಾಗಿದ್ದು, ಇದರ ಮಾಲೀಕರ ಜೊತೆ ಈ ವಿಚಾರವಾಗಿ ಚರ್ಚಿಸಲಾಗಿದೆ. ಅವರು ಕೂಡ ಒಪ್ಪಿಗೆ ನೀಡಿದ್ದಾರೆ’ ಎಂದು ಮಾಹಿತಿ ನೀಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು