ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕ್ರಿಮ್ಸ್‌’ಗೆ ಇನ್ನೊಂದು ಆರ್.ಟಿ.ಪಿ.ಸಿ.ಆರ್ ಯಂತ್ರ

ಸರ್ಕಾರದಿಂದ 15 ದಿನಗಳಲ್ಲಿ ಪೂರೈಕೆ: ಜಿಲ್ಲಾಧಿಕಾರಿ ಡಾ.ಹರೀಶಕುಮಾರ್ ಮಾಹಿತಿ
Last Updated 23 ಆಗಸ್ಟ್ 2020, 13:25 IST
ಅಕ್ಷರ ಗಾತ್ರ

ಕಾರವಾರ: ‘ಜಿಲ್ಲೆಯಲ್ಲಿ ಕೊರೊನಾ ವೈರಸ್ ಅನ್ನು ಸಂಪೂರ್ಣ ನಿಯಂತ್ರಣಕ್ಕೆ ತರಲು ಹೆಚ್ಚು ಜನರನ್ನು ಪರೀಕ್ಷೆಗೆ ಒಳಪಡಿಸುವುದು ಅಗತ್ಯವಾಗಿದೆ. ಈ ಸಲುವಾಗಿ ಕಾರವಾರ ವೈದ್ಯಕೀಯ ಕಾಲೇಜಿನಲ್ಲಿ (ಕ್ರಿಮ್ಸ್) ಪರೀಕ್ಷೆಯ ಪ್ರಮಾಣವನ್ನು ಹೆಚ್ಚಿಸಲು ಇನ್ನೊಂದು ಆರ್.ಟಿ.ಪಿ.ಸಿ.ಆರ್ ಯಂತ್ರವನ್ನು ಸರ್ಕಾರವು 15 ದಿವಸದಲ್ಲಿ ಒದಗಿಸಲಿದೆ’ ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ತಿಳಿಸಿದ್ದಾರೆ.

‘ಹೊಸ ಯಂತ್ರವನ್ನೂ ಬಳಸಿಕೊಂಡು ಪ್ರತಿ ದಿನ 1,000 ಪರೀಕ್ಷೆಗಳನ್ನು ಮಾಡಬಹುದು. ಅಲ್ಲದೇ ಪ್ರತಿ ದಿನ 1,000 ರ‍್ಯಾಪಿಡ್ ಆ್ಯಂಟಿಜೆನ್ ಪರೀಕ್ಷೆ ನಡೆಸಲು ಸರ್ಕಾರವು ಕಿಟ್‌ಗಳನ್ನು ಒದಗಿಸುತ್ತಿದೆ. ಈ ಮೂಲಕ ಪ್ರತಿ ದಿನ 2,000 ಪರೀಕ್ಷೆಗಳನ್ನು ನಡೆಸಲು ಉದ್ದೇಶಿಸಲಾಗಿದೆ. ಇದರಿಂದ ಸೋಂಕಿತರನ್ನು ಬಹು ಬೇಗ ಪತ್ತೆ ಹಚ್ಚಿ ರೋಗದ ಹರಡುವಿಕೆಯನ್ನು ತಡೆಯಬಹುದು’ ಎಂದು ಹೇಳಿದ್ದಾರೆ.

‘ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣದಲ್ಲಿದ್ದು, ಆರೋಗ್ಯ ಇಲಾಖೆಯ ಮಾರ್ಗಸೂಚಿಯನ್ನು ಪಾಲಿಸಬೇಕು. ಜಿಲ್ಲೆಯನ್ನು ಕೊರೊನಾ ಮುಕ್ತವನ್ನಾಗಿಸುವ ಅಭಿಯಾನಕ್ಕೆ ಸಹಕರಿಸಬೇಕು’ ಎಂದು ನಾಗರಿಕರಿಗೆ ಮನವಿ ಮಾಡಿದ್ದಾರೆ.

‘ಜಿಲ್ಲೆಯ ಒಟ್ಟು ಸೋಂಕಿತರಲ್ಲಿ ಶೇ 75ರಷ್ಟು ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸೋಂಕಿತರ ಸಂಖ್ಯೆ ದ್ವಿಗುಣಗೊಳ್ಳಲು 24 ದಿನಗಳು ಬೇಕಾಗಿದೆ. ಇದು ಸೋಂಕು ಹರಡುವುದು ಕಡಿಮೆಯಾಗುವ ನಿಟ್ಟಿನಲ್ಲಿ ಒಳ್ಳೆಯ ಬೆಳವಣಿಗೆಯಾಗಿದೆ. ಮರಣ ಪ್ರಮಾಣ ಕೇವಲ ಶೇ 1ಕ್ಕಿಂತಲೂ ಕಡಿಮೆಯಾಗಿದೆ’ ಎಂದು ತಿಳಿಸಿದ್ದಾರೆ.

‘ಪ್ರತಿ ಸೋಂಕಿತರಿಗೂ 10 ಜನ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರನ್ನು ಪರೀಕ್ಷಿಸಲಾಗುತ್ತಿದೆ. ಪ್ರತಿ ದಿನ 1,600 ಜನರ ಗಂಟಲು ದ್ರವ ಪರೀಕ್ಷೆ ಮಾಡಲಾಗುತ್ತಿದೆ. ಶೇ 91ರಷ್ಟು ಸೋಂಕಿತರಲ್ಲಿ ಮಾತ್ರ ರೋಗ ಲಕ್ಷಣಗಳೇ ಇಲ್ಲವಾಗಿದ್ದು, ಕೇವಲ ಶೇ 9ರಷ್ಟು ಸೋಂಕಿತರಲ್ಲಿ ರೋಗಲಕ್ಷಣಗಳು ಕಂಡು ಬರುತ್ತಿವೆ’ ಎಂದು ಅವರು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

ಆಮ್ಲಜನಕ ಪೂರೈಕೆ ವ್ಯವಸ್ಥೆ:‘ಕೋವಿಡ್ ಪೀಡಿತರಿಗೆ ಮತ್ತಷ್ಟು ಉತ್ತಮ ಚಿಕಿತ್ಸೆ ನೀಡಲು ಈ ತಿಂಗಳ ಅಂತ್ಯದೊಳಗೆ ಪ್ರತಿ ತಾಲ್ಲೂಕು ಆರೋಗ್ಯ ಕೇಂದ್ರದಲ್ಲಿ 50 ಹಾಸಿಗೆಗಳಿಗೆ ಆಮ್ಲಜನಕ ಪೂರೈಕೆಯ ವ್ಯವಸ್ಥೆ ಮಾಡಲಾಗುವುದು. ಈಗಾಗಲೇ ಕಾರವಾರ ವೈದ್ಯಕೀಯ ಕಾಲೇಜಿಗೆ 30 ವೆಂಟಿಲೇಟರ್‌ಗಳನ್ನು ನೀಡಲಾಗಿದೆ. 10 ಹೈ ಫ್ಲೋ ನೇಸಲ್ ಕ್ಯಾನುಲಾ (ಎಚ್.ಎನ್.ಪಿ.ಸಿ) ಒದಗಿಸಲಾಗಿದೆ’ ಎಂದು ಹರೀಶಕುಮಾರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT