ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈಕೋರ್ಟ್‌ ಪ್ರಕರಣಗಳಿಗೆ ವಕೀಲರ ನೇಮಕ

ಮಂಗಳೂರು ತಾ.ಪಂ. ಸಾಮಾನ್ಯ ಸಭೆಯಲ್ಲಿ ನಿರ್ಣಯ
Last Updated 4 ಮಾರ್ಚ್ 2020, 9:26 IST
ಅಕ್ಷರ ಗಾತ್ರ

ಮಂಗಳೂರು: ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಹೈಕೋರ್ಟ್‌ನಲ್ಲಿ ದಾಖಲಾಗುವ ಪ್ರಕರಣಗಳಲ್ಲಿ ಮಂಗಳೂರು ತಾಲ್ಲೂಕು ಪಂಚಾಯಿತಿಯ ಪರ ವಾದ ಮಂಡಿಸಲು ಪ್ರತ್ಯೇಕ ವಕೀಲರನ್ನು ನೇಮಿಸುವ ನಿರ್ಣಯವನ್ನು ಮಂಗಳವಾರ ನಡೆದ ಮಂಗಳೂರು ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಕೈಗೊಳ್ಳಲಾಯಿತು.

ವಸತಿ ಉದ್ದೇಶಕ್ಕೆ ಕಾಯ್ದಿರಿಸಿದ ಜಮೀನುಗಳ ಬಳಕೆ ವಿಳಂಬವಾಗುತ್ತಿರುವ ಕುರಿತು ಸದಸ್ಯ ಶ್ರೀಧರ್‌ ವಿಷಯ ಪ್ರಸ್ತಾಪಿಸಿದಾಗ ಉತ್ತರಿಸಿದ ತಹಶೀಲ್ದಾರ್‌ ಗುರುಪ್ರಸಾದ್‌, ‘ಜಮೀನುಗಳ ಸ್ವಾಧೀನಕ್ಕೆ ಸಂಬಂಧಿಸಿದ ಪ್ರಕರಣಗಳು ಹೈಕೋರ್ಟ್‌ನಲ್ಲಿವೆ. ಈ ವಿಚಾರದಲ್ಲಿ ವಾದ ಮಂಡಿಸಲು ಪ್ರತ್ಯೇಕವಾದ ವಕೀಲರನ್ನು ನೇಮಿಸಿಕೊಳ್ಳುವ ಅಗತ್ಯವಿದೆ’ ಎಂದು ಸಲಹೆ ನೀಡಿದರು.

ಆಡಳಿತ ಮತ್ತು ವಿರೋಧ ಪಕ್ಷಗಳ ಸದಸ್ಯರು ಈ ಸಲಹೆಗೆ ಬೆಂಬಲ ಸೂಚಿಸಿದರು. ಹೈಕೋರ್ಟ್‌ನಲ್ಲಿ ತಾಲ್ಲೂಕು ಪಂಚಾಯಿತಿ ಪರವಾಗಿ ವಾದ ಮಂಡಿಸಲು ಶೀಘ್ರದಲ್ಲೇ ವಕೀಲರನ್ನು ನೇಮಕ ಮಾಡುವುದಾಗಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಮೊಹಮ್ಮದ್ ಮೋನು ಪ್ರಕಟಿಸಿದರು.

ಪಟ್ಟಿ ಸಲ್ಲಿಸಲು ಸೂಚನೆ:ತಾಲ್ಲೂಕು ಪಂಚಾಯಿತಿ ಹೆಸರಿನಲ್ಲಿಯೇ ಖಾತೆ ಹೊಂದಿರುವ ವಸತಿ ಬಡಾವಣೆಗಳಲ್ಲಿ ನಿವೇಶನಗಳನ್ನು ಅಕ್ರಮವಾಗಿ ಪರಭಾರೆ ಆಗುತ್ತಿರುವ ಕುರಿತು ಸದಸ್ಯರಾದ ವಜ್ರಾಕ್ಷಿ ಶೆಟ್ಟಿ, ನಾಗೇಶ್‌ ಶೆಟ್ಟಿ, ಸುನೀಲ್‌ ಮತ್ತಿತರರು ದೂರಿದರು. ಕೆಲವು ಕಡೆಗಳಲ್ಲಿ ವಸತಿ ಬಡಾವಣೆಗಳಿಗೆ ರಸ್ತೆಯೇ ಇಲ್ಲದಿರುವ ಕಾರಣದಿಂದ ಬಳಕೆಗೆ ಹಿಂದೇಟು ಹಾಕುತ್ತಿರುವುದನ್ನೂ ಸಭೆಯಲ್ಲಿ ಪ್ರಸ್ತಾಪಿಸಿದರು.

ಸರ್ಕಾರದ ವಸತಿ ಯೋಜನೆಗಳಡಿ ನಿರ್ಮಿಸಿದ ಎಲ್ಲ ವಸತಿ ಬಡಾವಣೆಗಳ ಗಡಿಗಳನ್ನು ಗುರುತು ಮಾಡಿ, ಅಕ್ರಮ ಪರಭಾರೆ ತಡೆಗೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾ ಅಧಿಕಾರಿ ಜೊತೆ ಸೇರಿ ಕೆಲಸ ಮಾಡುವುದಾಗಿ ತಶೀಲ್ದಾರ್‌ ತಿಳಿಸಿದರು. ಆಸ್ತಿಗಳ ಪಟ್ಟಿಯನ್ನು ಸಿದ್ಧಪಡಿಸಿ ಮುಂದಿನ ಸಭೆಗೆ ಸಲ್ಲಿಸುವಂತೆ ಅಧ್ಯಕ್ಷರು ನಿರ್ದೇಶನ ನೀಡಿದರು.

ಗಂಜಿಮಠ– ಕುಪ್ಪೆಪದವು ರಸ್ತೆ ಕಾಮಗಾರಿಗೆ ದೀರ್ಘ ಸಮಯದ ಹಿಂದೆ ಭೂಮಿಪೂಜೆ ನಡೆದಿದ್ದರೂ, ಕೆಲಸ ಆರಂಭವಾಗದಿರುವ ಕುರಿತು ಸದಸ್ಯ ಸುನೀಲ್‌ ಆಕ್ಷೇಪ ವ್ಯಕ್ತಪಡಿಸಿದರು. ಬುಧವಾರವೇ ಕಾಮಗಾರಿ ಆರಂಭಿಸುವುದಾಗಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಭರವಸೆ ನೀಡಿದರು. ಜೋಕಟ್ಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರಸ್ತೆಗಳಲ್ಲೇ ನೂರಾರು ಟ್ರಕ್‌ಗಳನ್ನು ನಿಲ್ಲಿಸುವುದರಿಂದ ತೊಂದರೆ ಆಗುತ್ತಿರುವುದಾಗಿ ಸದಸ್ಯ ಬಶೀರ್‌ ದೂರಿದರು. ಈ ಸಂಬಂಧ ಖಾಸಗಿ ಕಂಪನಿಗಳಿಗೆ ಪತ್ರ ಬರೆದು ಎಚ್ಚರಿಕೆ ನೀಡುವಂತೆ ಮೊಹಮ್ಮದ್ ಮೋನು ಅಧಿಕಾರಿಗಳಿಗೆ ಸೂಚಿಸಿದರು.

ತೆರಿಗೆ ಪಾವತಿಗೆ ಪತ್ರ:ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರ ಕಂದಾವರ ಗ್ರಾಮ ಪಂಚಾಯಿತಿಗೆ ತೆರಿಗೆ ಪಾವತಿಸುತ್ತಿಲ್ಲ ಎಂದು ಸದಸ್ಯ ವಿಶ್ವನಾಥ ಶೆಟ್ಟಿ ಹೇಳಿದರು. ಈ ಸಂಬಂಧ ಪ್ರಾಧಿಕಾರಕ್ಕೆ ಪತ್ರ ಬರೆದಿರುವುದಾಗಿ ಕಾರ್ಯನಿರ್ವಹಣಾ ಅಧಿಕಾರಿ ಸದಾನಂದ ತಿಳಿಸಿದರು.

ಆದ್ಯಪಾಡಿ ಕಿಂಡಿ ಅಣೆಕಟ್ಟೆಯ ಹಿನ್ನೀರಿನಿಂದ ಪ್ರವಾಹ ಉಂಟಾಗಿ ಸುತ್ತಮುತ್ತಲ ಕೃಷಿ ಜಮೀನಿಗೆ ಹಾನಿಯಾಗುತ್ತಿರುವ ಬಗ್ಗೆಯೂ ಸದಸ್ಯರು ಪ್ರಸ್ತಾಪಿಸಿದರು. ಈ ಸಂಬಂಧ ಸುರತ್ಕಲ್‌ ಎನ್‌ಐಟಿಕೆಯ ತಜ್ಞರು ಅಧ್ಯಯನ ನಡೆಸಿದ್ದು, ವರದಿ ನಿರೀಕ್ಷಿಸಲಾಗಿದೆ ಎಂದು ಗ್ರಾಮೀಣ ಕುಡಿಯುವ ನೀರು ಪೂರೈಕೆ ಇಲಾಖೆ ಅಧಿಕಾರಿಗಳು ಉತ್ತರಿಸಿದರು.

ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ಪೂರ್ಣಿಮಾ ಗಣೇಶ್‌, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷೆ ಪ್ರತಿಭಾ ಶೆಟ್ಟಿ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ಸದಸ್ಯರಾದ ಸುಚರಿತ ಶೆಟ್ಟಿ ಮತ್ತು ವಿನೋದ್‌ಕುಮಾರ್‌ ಬೊಳ್ಳೂರು ಸಭೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT