ಮಂಗಳವಾರ, ಅಕ್ಟೋಬರ್ 20, 2020
22 °C
ಬೆಳೆಗಾರರಲ್ಲಿ ಆತ್ಮವಿಶ್ವಾಸ ಮೂಡಿಸಿರುವ ಸಹಕಾರ ಸಂಘಗಳು

ಏರುಗತಿಯಲ್ಲಿ ಚಾಲಿ ಅಡಿಕೆ ದರ

ಸಂಧ್ಯಾ ಹೆಗಡೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ಲಾಕ್‌ಡೌನ್‌ ನಡುವೆಯೇ ಅಡಿಕೆ ಮಾರುಕಟ್ಟೆಯಲ್ಲಿ ದರ ಏರುಗತಿಯಲ್ಲಿ ಸಾಗಿದ್ದು ಬೆಳೆಗಾರರಲ್ಲಿ ಆತ್ಮವಿಶ್ವಾಸ ಮೂಡಿಸಿದೆ. ಗುರುವಾರದ ವಹಿವಾಟಿನ ಅಂತ್ಯದಲ್ಲಿ ಚಾಲಿ ಕ್ವಿಂಟಲ್‌ವೊಂದಕ್ಕೆ ಗರಿಷ್ಠ ₹ 30,600 ತಲುಪಿದ್ದರೆ, ಕೆಂಪಡಿಕೆಗೆ ಗರಿಷ್ಠ ₹ 39,700 ದರ ಲಭ್ಯವಾಯಿತು.

ಲಾಕ್‌ಡೌನ್ ಘೋಷಣೆಯಾದ ನಂತರ ಸುಮಾರು 20 ದಿನ ಸ್ಥಗಿತಗೊಂಡಿದ್ದ ಅಡಿಕೆ ಮಾರುಕಟ್ಟೆ, ಕಳೆದ 10 ದಿನಗಳ ಹಿಂದೆ ಪುನರಾರಂಭಗೊಂಡಿದೆ. ಏಕಾಏಕಿ ಅಡಿಕೆ ಮಾರುಕಟ್ಟೆ ಬಂದಾಗಿದ್ದರಿಂದ ಕಂಗಾಲಾಗಿದ್ದ ರೈತರು, ಜೀವನೋಪಾಯಕ್ಕೆ ಆಧಾರವಾಗಿರುವ ಉತ್ಪನ್ನ ಮಾರಾಟ ಮಾಡುವುದರ ಬಗ್ಗೆ ಚಿಂತಿತರಾಗಿದ್ದರು. ಬೆಳಗಾರರ ನೋವಿಗೆ ಸ್ಪಂದಿಸಿದ ಸಹಕಾರ ಸಂಘಗಳು ಅಡಿಕೆ ವಹಿವಾಟನ್ನು ಆರಂಭಿಸುವ ಮೂಲಕ ಧೈರ್ಯ ತುಂಬಿದ್ದವು.

ತೋಟಗಾರ್ಸ್ ಕೋ ಆಪರೇಟಿವ್ ಸೇಲ್ ಸೊಸೈಟಿ (ಟಿಎಸ್ಎಸ್‌) ಹಳೆಯ ದರದಲ್ಲೇ ನೇರ ಖರೀದಿ ಆರಂಭಿಸಿದರೆ, ಅದರ ಬೆನ್ನಲ್ಲೇ ತಾಲ್ಲೂಕು ಮಾರ್ಕೆಟಿಂಗ್ ಸೊಸೈಟಿ (ಟಿಎಂಎಸ್) ಟೆಂಡರ್‌ ಖರೀದಿ ಪ್ರಾರಂಭಿಸಿತು. ದಿನದಿಂದ ದಿನಕ್ಕೆ ತೇಜಿಯಾಗುತ್ತ, ಚಾಲಿ ಕ್ವಿಂಟಲ್‌ವೊಂದಕ್ಕೆ ₹ 3800ರಷ್ಟು ಹಾಗೂ ಕೆಂಪಡಿಕೆ ಕ್ವಿಂಟಲ್‌ವೊಂದಕ್ಕೆ ₹ 2000ದಷ್ಟು ದರ ಏರಿಕೆ ಕಂಡಿದೆ.

ಉತ್ತರ ಭಾರತ ಕೆಲವು ರಾಜ್ಯಗಳಲ್ಲಿ ಅಡಿಕೆ, ಪಾನ್‌ ಮಸಾಲಾ ಜಗಿದು ಉಗುಳುವುದನ್ನು ನಿಷೇಧಗೊಳಿಸಿದ ಮೇಲೆ, ಅಡಿಕೆ ದರ ಕುಸಿತವಾಗಬಹುದೆಂಬ ಚಿಂತೆಯಲ್ಲಿದ್ದ ಬೆಳೆಗಾರರು, ಈಗ ದರ ಏರಿಕೆ ಕಂಡು ನಿಟ್ಟುಸಿರು ಬಿಟ್ಟಿದ್ದಾರೆ.

’ಮಾರುಕಟ್ಟೆಯಲ್ಲಿ ಅಡಿಕೆ ದಾಸ್ತಾನು ಖಾಲಿಯಾಗಿದೆ. ಹೀಗಾಗಿ, ಬೇಡಿಕೆಯ ಆಧಾರದಲ್ಲಿ ದರ ಏರಿಕೆಯಾಗುತ್ತಿದೆ. ಪಾನ್‌ ಮಸಾಲಾ, ಗುಟ್ಕಾ ತಿನ್ನುವವರು, ಪರ್ಯಾಯವಾಗಿ ಚಾಲಿ ಅಡಿಕೆ ಬಳಕೆ ಮಾಡುತ್ತಿದ್ದಾರೆ. ಇದು ಕೂಡ ದರ ಏರಿಕೆಗೆ ಕಾರಣವಾಗಿರಬಹುದು. ಲಾಕ್‌ಡೌನ್ ಮುಗಿದು ಎಲ್ಲ ವ್ಯವಸ್ಥೆಗಳು ಮೊದಲಿನಂತಾದರೆ ಕೃತಕ ದರ ಇಳಿಕೆಯಾಗುವ ಸಾಧ್ಯತೆ ಇದೆ’ ಎನ್ನುತ್ತಾರೆ ಮಾರುಕಟ್ಟೆ ತಜ್ಞರು.

‘ಬೇಡಿಕೆ ಹಾಗೂ ಪೂರೈಕೆಯ ನಡುವಿನ ಕೊಂಡಿ ವ್ಯತ್ಯಯವಾಗಿರುವ ಕಾರಣ ದರ ಏರಿಕೆ ಆಗುತ್ತಿರುವ ಸಾಧ್ಯತೆಯಿದೆ. ಲಾಕ್‌ಡೌನ್ ನಂತರ ಇದೇ ದರ ನಿರೀಕ್ಷಿಸುವಂತಿಲ್ಲ. ಅಲ್ಲದೇ, ಕೆಂಪಡಿಕೆ ದರ ಏರುವ ಸಾಧ್ಯತೆಯಿಲ್ಲ’ ಎನ್ನುತ್ತಾರೆ ಟಿಎಸ್‌ಎಸ್‌ ಪ್ರಧಾನ ವ್ಯವಸ್ಥಾಪಕ ರವೀಶ ಹೆಗಡೆ.

‘ಸದ್ಯಕ್ಕೆ ಬೇರೆ ಕಡೆಗಳಲ್ಲಿ ಅಡಿಕೆ ವ್ಯಾಪಾರ ಪೂರ್ಣ ಪ್ರಮಾಣದಲ್ಲಿ ಆರಂಭವಾಗಿಲ್ಲ. ಅಲ್ಲದೇ, ಶಿರಸಿ ಮಾರುಕಟ್ಟೆಯಲ್ಲೇ ಗರಿಷ್ಠ ದರ ಸಿಗುತ್ತಿದೆ. ಒಳ್ಳೆಯ ಚಾಲಿಗೆ ಮುಂಬೈ, ಅಹಮ್ಮದಾಬಾದ್‌ನಲ್ಲಿ ಹೆಚ್ಚು ಬೇಡಿಕೆ ಇತ್ತು. ಈ ಬಾರಿ ಉತ್ತರ ಪ್ರದೇಶದಲ್ಲೂ ಬೇಡಿಕೆ ಹೆಚ್ಚಿದೆ’ ಎನ್ನುತ್ತಾರೆ ಟಿಎಂಎಸ್ ವ್ಯವಸ್ಥಾಪಕ ಎಂ.ಎ.ಹೆಗಡೆ.

ಟೆಂಡರ್‌ದಾರರೇ ಇ ಟೆಂಡರ್‌ ನೋಂದಣಿ ಮಾಡುತ್ತಿರುವುದು ಈಗಿನ ಹೊಸ ಬೆಳವಣಿಗೆಯಾಗಿದೆ. ಇಲ್ಲಿಯ ತನಕ ಎಪಿಎಂಸಿಯಲ್ಲಿ ಕಂಪ್ಯೂಟರ್ ಆಪರೇಟರ್‌ಗಳು ನೋಂದಣಿ ಮಾಡುತ್ತಿದ್ದರು ಎಂದು ಅವರು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು