ಶನಿವಾರ, ಮೇ 28, 2022
31 °C
ನಶಿಸುತ್ತಿರುವ ಜಾನಪದ ಕಲೆಯ ಪುನರುಜ್ಜೀವನಕ್ಕೆ ಮುಂದಾದ ‘ನಬಾರ್ಡ್’

ಉತ್ತರ ಕನ್ನಡ: ಮುಖವಾಡ ಕಲೆಗೆ ಪುನರುಜ್ಜೀವನದ ಹೆಜ್ಜೆ

ಸದಾಶಿವ ಎಂ.ಎಸ್ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಜಿಲ್ಲೆಯ ಅಪರೂಪದ ಜಾನಪದ ಕೌಶಲವಾಗಿರುವ ಮುಖವಾಡ ತಯಾರಿಕೆಯನ್ನು ಪುನರುಜ್ಜೀವನಗೊಳಿಸಲು ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (ನಬಾರ್ಡ್) ಮುಂದಾಗಿದೆ. ನಶಿಸುತ್ತಿರುವ ಕಲೆಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಗೊಳಿಸಲು ಯೋಜನೆ ಸಿದ್ಧಪಡಿಸಿದೆ.

ಅಂಕೋಲಾ ತಾಲ್ಲೂಕಿನಲ್ಲಿ ಹೆಚ್ಚಾಗಿ ಬಂಡಿ ಹಬ್ಬಗಳು, ಸುಗ್ಗಿ ಕುಣಿತಗಳಂಥ ಆಚರಣೆಗಳಲ್ಲಿ ವಿವಿಧ ಮುಖವಾಡಗಳನ್ನು ಬಳಕೆ ಮಾಡಲಾಗುತ್ತದೆ. ಹುಲಿದೇವರು, ಬೀರ ದೇವರು ಮುಂತಾದ ಸ್ಥಳೀಯ ಶಕ್ತಿ ಕೇಂದ್ರಗಳಲ್ಲಿ ಅವುಗಳು ಚಾಲ್ತಿಯಲ್ಲಿವೆ.

ಇದರೊಂದಿಗೇ ಯಕ್ಷಗಾನದ ಕಿರೀಟಗಳನ್ನು ಜಾನಪದ ಕುಶಲಕರ್ಮಿಗಳು ಹಿಂದಿನಿಂದಲೂ ತಯಾರಿಸುತ್ತಿದ್ದರು. ಕಾಲಕ್ರಮೇಣ ಈ ಕುಶಲ ಕಾರ್ಯದಿಂದ ಯುವ ಪೀಳಿಗೆ ವಿಮುಖವಾಗತೊಡಗಿತು. ಇದರಿಂದ ಕಲೆ, ಜಾನಪದ ಸಂಸ್ಕೃತಿಯ ಶ್ರೀಮಂತ ಭಾಗವೊಂದು ನಿಧಾನವಾಗಿ ಹಿನ್ನಡೆ ಅನುಭವಿಸಿತು.

ಇದರ ಪಡೆದ ‘ನಬಾರ್ಡ್’ ಅಧಿಕಾರಿಗಳು, ವಿಶೇಷ ಮುಖವಾಡಗಳ ಮೂಲಕ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಮತ್ತು ಅದರ ತಯಾರಕರಿಗೆ ನೆರವಾಗಲು ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ಮುಖವಾಡ ತಯಾರಕರನ್ನು ಸಂಪರ್ಕಿಸಿದ್ದಾರೆ. ಕಲೆಯನ್ನು ಇಂದಿನ ಅಗತ್ಯಕ್ಕೆ ಸರಿಯಾಗಿ, ಮೂಲ ಜಾನಪದ ಸಂಸ್ಕೃತಿಗೆ ಧಕ್ಕೆಯಾಗದಂತೆ ಮಾರುಕಟ್ಟೆ ಮಾಡಲು ಮುಂದಡಿಯಿಟ್ಟಿದ್ದಾರೆ.

ಯೋಜನೆಯ ಬಗ್ಗೆ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ‘ನಬಾರ್ಡ್’ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕ ರೆಜಿಸ್ ಇಮ್ಯಾನುವಲ್, ‘ಜಿಲ್ಲೆಯ ಶ್ರೀಮಂತ ಜಾನಪದ ಪರಂಪರೆಗಳಲ್ಲಿ ಮುಖವಾಡಗಳ ತಯಾರಿಕೆಯೂ ಒಂದು. ಇದರ ಬಗ್ಗೆ ಯುವಕರಲ್ಲಿ ಯಾರಿಗೂ ಹೆಚ್ಚು ತಿಳಿವಳಿಕೆಯಿಲ್ಲ. ಹಾಗಾಗಿ ಆ ಕೆಲಸವನ್ನು ನಿಲ್ಲಿಸಿದ್ದಾಗಿ ಹಲವರು ಹೇಳುತ್ತಿದ್ದಾರೆ. ಈ ಹಿಂದೆ ಯಾರು ಮಾಡುತ್ತಿದ್ದರು, ಈಗ ಯಾರು ಮಾಡುತ್ತಿದ್ದಾರೆ ಎಂಬ ಬಗ್ಗೆಯೂ ಸರಿಯಾಗಿ ಮಾಹಿತಿ ಇಲ್ಲ. ಅಂಕೋಲಾ ತಾಲ್ಲೂಕಿನ ಅಂಗಡಿಬೈಲ್‌ನಲ್ಲಿ ಮಾತ್ರ ಒಬ್ಬರು ತಯಾರಿಸುತ್ತಿರುವುದು ಗೊತ್ತಾಗಿದೆ’ ಎಂದು ತಿಳಿಸಿದರು.

‘ಸಂಗ್ರಹಿಸಿರುವ ಮಾಹಿತಿಯ ಪ್ರಕಾರ 13 ವಿಧಗಳ ಮುಖವಾಡಗಳಿವೆ. ಒಂದೊಂದರ ಹಿಂದೆಯೂ ಒಂದೊಂದು ಜಾನಪದ ಕಥೆಗಳನ್ನು ಹೆಣೆಯಲಾಗಿದೆ. ಉದಾಹರಣೆಗೆ ಹುಲಿ ದೇವರ ಕಥೆಯಲ್ಲಿ ಹುಲಿ ಹೇಗೆ ಬರುತ್ತದೆ, ಅದು ಹೇಗೆ ದಾಳಿ ಮಾಡುತ್ತದೆ, ಅದಕ್ಕೆ ಪೂಜೆ ಹೇಗೆ ಮಾಡಲಾಗುತ್ತದೆ ಎಂಬುದನ್ನು ನೃತ್ಯ ರೂಪದಲ್ಲಿ ಪ್ರದರ್ಶಿಸಲಾಗುತ್ತದೆ. ಆ ‍ಪಾತ್ರವನ್ನು ನಿರ್ವಹಿಸುವ ವ್ಯಕ್ತಿಗೆ ಹುಲಿ ದೇವರ ಶಕ್ತಿ ಆವಾಹನೆಯಾಗಿರುತ್ತದೆ ಎಂದು ಸ್ಥಳೀಯರು ನಂಬುತ್ತಾರೆ. ದಕ್ಷಿಣ ಕನ್ನಡದಲ್ಲಿ ಭೂತಾರಾಧನೆಯೂ ಇದೇ ಮಾದರಿಯಲ್ಲಿದೆ’ ಎನ್ನುತ್ತಾರೆ ಅವರು.

‘ದೊಡ್ಡದಾಗಿರುವ ಇಂಥ ಮುಖವಾಡಗಳನ್ನು ಸಣ್ಣ ಗಾತ್ರದಲ್ಲಿ ತಯಾರಿಸಿದರೆ ವಿಮಾನ ನಿಲ್ದಾಣಗಳು ಸೇರಿದಂತೆ ವಿವಿಧ ಕಡೆಗಳಲ್ಲಿ ಪ್ರದರ್ಶಿಸಬಹುದು. ಇದರಿಂದ ಜಿಲ್ಲೆಯ ಅಪರೂಪದ ಜಾನಪದ ಕಲೆಯೊಂದರ ಪರಿಚಯವು ಅಂತರರಾಷ್ಟ್ರೀಯ ಮಟ್ಟದಲ್ಲಿ ಆಗುತ್ತದೆ’ ಎಂದು ಅವರು ಆಶಯ ವ್ಯಕ್ತಪಡಿಸುತ್ತಾರೆ.

‘ಈ ರೀತಿ ಮುಖವಾಡ ತಯಾರಿಸುವವರು ಇದ್ದರೆ ಮೊಬೈಲ್ ದೂರವಾಣಿ: 83105 14428 ಸಂಪರ್ಕಿಸಿ ಮಾಹಿತಿ ನೀಡಬಹುದು’ ಎಂದೂ ಅವರು ತಿಳಿಸಿದ್ದಾರೆ.

ಮಡಿಕೆ ತಯಾರಿಕೆಗೂ ತರಬೇತಿ
‘ಸಾಂಪ್ರದಾಯಿಕವಾಗಿ ಮಡಿಕೆ ತಯಾರಿಸುವುದನ್ನೂ ಪುನಶ್ಚೇತನಗೊಳಿಸಲು ನೀಲನಕ್ಷೆ ಸಿದ್ಧವಾಗಿದೆ. ಮಾರುಕಟ್ಟೆಯಲ್ಲಿ ಬದಲಾದ ಬೇಡಿಕೆಗಳಿಗೆ ಅನುಗುಣವಾಗಿ ಮಡಿಕೆ, ಲೋಟ ಮುಂತಾದವುಗಳನ್ನು ತಯಾರಿಸುವುದರ ಬಗ್ಗೆ ತರಬೇತಿ ನೀಡಲಾಗುತ್ತದೆ’ ಎಂದು ರೆಜಿಸ್ ಇಮ್ಯಾನುವಲ್ ತಿಳಿಸಿದ್ದಾರೆ.

‘ಈ ಉದ್ದೇಶಕ್ಕಾಗಿ ಮಣಿಪಾಲದ ಸೃಷ್ಟಿ ಸ್ಕೂಲ್ ಆಫ್ ಡಿಸೈನಿಂಗ್ ಮತ್ತು ಟೆಕ್ನಾಲಜಿ ಸಂಸ್ಥೆಯೊಂದಿಗೆ ಮಾತುಕತೆ ನಡೆಸಲಾಗಿದೆ. ಅಂಕೋಲಾ ತಾಲ್ಲೂಕಿನ ಕುಂಬಾರಕೇರಿಯಲ್ಲಿ 20ಕ್ಕೂ ಅಧಿಕ ಮಂದಿಯನ್ನು ಗುರುತಿಸಲಾಗಿದ್ದು, ಅವರಿಗೆ ಒಂದು ತಿಂಗಳು ತರಬೇತಿ ನೀಡಲಾಗುತ್ತದೆ. ಇದಕ್ಕೆ ತಗುಲುವ ಸಂಪೂರ್ಣ ಖರ್ಚು ಮತ್ತು ತರಬೇತಿ ಪಡೆಯುವ ಅಭ್ಯರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನಬಾರ್ಡ್ ಭರಿಸಲಿದೆ’ ಎಂದು ಹೇಳಿದ್ದಾರೆ.

*
ಉತ್ತರ ಕನ್ನಡದ ಶ್ರೀಮಂತ ಜಾನಪದ ಕಲೆಯನ್ನು ಉಳಿಸುವುದರ ಜೊತೆಗೆ ಅದಕ್ಕೆ ಮತ್ತಷ್ಟು ಪ್ರಚಾರ ಕೊಡುವುದು ಈ ಯೋಜನೆಯ ಉದ್ದೇಶವಾಗಿದೆ.
- ರೆಜಿಸ್ ಇಮ್ಯಾನುವಲ್, ‘ನಬಾರ್ಡ್’ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು