ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವಿ ಕಲೆಗೆ ‘ಮರುಜನ್ಮ’ ನೀಡಲು ಯತ್ನ

ಗೋಕರ್ಣದ ಯುವಕರ ಪ್ರತಿಭೆಗೆ ವೇದಿಕೆಯಾದ ಜಿಲ್ಲಾಧಿಕಾರಿ ಕಚೇರಿ ಗೋಡೆ
Last Updated 30 ಜುಲೈ 2022, 19:31 IST
ಅಕ್ಷರ ಗಾತ್ರ

ಕಾರವಾರ: ಅತ್ಯಂತ ವಿಶಿಷ್ಟವಾದ ‘ಕಾವಿ ಕಲೆ’ಯು ಕರಾವಳಿ ಮತ್ತು ಮಲೆನಾಡಿನಲ್ಲಿ ಈ ಹಿಂದೆ ಉತ್ತುಂಗದಲ್ಲಿತ್ತು. ಕಾಲಕ್ರಮೇಣ ಅದು ನೇಪಥ್ಯಕ್ಕೆ ಸರಿಯಲು ಆರಂಭಿಸಿತು. ಅದನ್ನು ಮತ್ತಷ್ಟು ಪ್ರಚುರ ಪಡಿಸಲು ಜಿಲ್ಲೆಯ ತಂಡವೊಂದು ಶ್ರಮಿಸುತ್ತಿದೆ.

ಗೋಕರ್ಣದ ರವಿ ಗುನಗಾ ಮತ್ತು ಅವರು ಬಳಗದ ಐವರು, ಸಾಂಪ್ರದಾಯಿಕ ಕಲೆಯನ್ನು ಕಲಿತು ಅಭಿವೃದ್ಧಿ ಪಡಿಸುತ್ತಿದ್ದಾರೆ. ಜಿಲ್ಲೆಯ ಮತ್ತು ಹೊರ ಜಿಲ್ಲೆಗಳ ವಿವಿಧೆಡೆ ಕಟ್ಟಡಗಳಿಗೆ ಹೊಸ ರೂಪವನ್ನು ನೀಡಿ ಆಕರ್ಷಕವಾಗಿಸುತ್ತಿದ್ದಾರೆ.

ಕಾರವಾರದ ಜಿಲ್ಲಾಧಿಕಾರಿ ಕಚೇರಿ ಎದುರಿನ ಗೋಡೆಯಲ್ಲಿ ಅವರು ಬಿಡಿಸಿದ ಕಾವಿ ಕಲಾಕೃತಿಗಳು, ವಿವಿಧ ಗಣ್ಯರು ಹಾಗೂ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿವೆ. ಮೂರು ದಿನಗಳ ಪರಿಶ್ರಮದ ಬಳಿಕ ಮೂಡಿದ ಚಿತ್ರಗಳು ಚಿತ್ತಾಕರ್ಷಕವಾಗಿವೆ. ಜಿಲ್ಲೆಯ ಪ್ರಸಿದ್ಧ ಸುಗ್ಗಿ ಕುಣಿತದ ಕಲಾಕೃತಿಯೂ ಒಂದೆರಡು ದಿನಗಳಲ್ಲಿ ಅಳವಡಿಕೆಯಾಗಲಿದೆ.

‘ಹಿಂದಿನ ದಿನಗಳಲ್ಲಿ ಕಾವಿ ಕಲೆಯು ಬಹಳ ಪ್ರಸಿದ್ಧವಾಗಿತ್ತು. ಗೋವಾದಿಂದ ಕೇರಳದ ಕಾಸರಗೋಡು ತನಕವೂ ಕಂಡುಬರುತ್ತಿತ್ತು. ಆದರೆ, ಸಿಮೆಂಟ್ ಬಳಕೆ ಹೆಚ್ಚಾದ ಬಳಿಕ ಜನ ಕಾವಿ ಕಲೆಯ ಆಕರ್ಷಣೆ ಕಳೆದುಕೊಂಡರು’ ಎನ್ನುತ್ತಾರೆ ರವಿ ಗುನಗಾ.

‘ಗಾರೆ ಮಣ್ಣು, ಇದ್ದಿಲು, ಗುಲಗಂಜಿ ಬಣ್ಣ, ಸುಣ್ಣ ಬೆಲ್ಲ, ತಾಮ್ರದ ಅಚ್ಚು ಬಳಸಿ ಗೋಡೆಗಳ ಮೇಲೆ ಕಲಾಕೃತಿಯನ್ನು ಮೂಡಿಸುತ್ತಿದ್ದರು. ತಾಮ್ರದ ಅಚ್ಚನ್ನು ಬಿಸಿ ಮಾಡಿ, ಗೋಡೆಗೆ ಒತ್ತಿ ಹಿಡಿದಾಗ ರೇಖೆಗಳು ಮೂಡುತ್ತಿದ್ದವು. ಇದಕ್ಕೆ ಸಾಕಷ್ಟು ಸಮಯ, ತಾಳ್ಮೆ ಮತ್ತು ಪರಿಶ್ರಮ ಬೇಕಾದ ಕಾರಣಕ್ಕೋ ಏನೋ ವಿರಳವಾಗುತ್ತ ಹೋಯಿತು’ ಎಂದು ಹೇಳುತ್ತಾರೆ.

‘ಹಿರಿಯರು ಮಾಡುತ್ತಿದ್ದ ಮಾದರಿಯಲ್ಲಿ ಕಾವಿ ಕಲೆಯನ್ನು ನಾವೂ ಮಾಡುತ್ತಿಲ್ಲ. ಕಾವಿ ಕಲೆಗಳು ಇರುವ ಕಟ್ಟಡಗಳಿಗೆ ಭೇಟಿ ನೀಡಿ, ವಿವಿಧ ಪುಸ್ತಕಗಳಲ್ಲಿರುವ ಉಲ್ಲೇಖಗಳನ್ನು ಅಧ್ಯಯನ ಮಾಡಿ ಅವುಗಳಂತೆಯೇ ಬಣ್ಣ ಮಾಡಿದ್ದೇವೆ’ ಎಂದೂ ವಿವರಿಸುತ್ತಾರೆ.

ಹಲವರಿಂದ ಸಂಶೋಧನೆ

‘ಕಾವಿ ಕಲೆಯ ಬಗ್ಗೆ ಜನರಿಗೆ ಮತ್ತೆ ಆಸಕ್ತಿ ಮೂಡುತ್ತಿರುವುದು ಸಂತಸದ ಸಂಗತಿಯಾಗಿದೆ. ಡಾ.ಕೃಷ್ಣಾನಂದ ಕಾಮತ್ ಅವರು ‘ಕಾವಿ ಕಲೆ’ ಎಂಬ ಪುಸ್ತಕ ಬರೆದಿದ್ದಾರೆ. ಶೋಭಾ ಕಾರಣಿಕ,ಜನಾರ್ದನ ಹಾವಂಜೆ ಅವರೂ ಸಂಶೋಧನೆ ಮಾಡಿದ್ದಾರೆ. ಅವರೂ ನಮ್ಮ ಕೆಲಸಗಳಿಗೆ ಬೆಂಬಲ ಕೊಡುತ್ತಿದ್ದಾರೆ. ಲಲಿತ ಕಲೆ ಅಕಾಡೆಮಿಯು ಆಯೋಜಿಸಿದ್ದ ಕಾರ್ಯಾಗಾರದಲ್ಲಿ ನಾನು ಭಾಗವಹಿಸಿದ್ದೆ. ಅಲ್ಲಿ ಸಿಕ್ಕಿದ ತರಬೇತಿಯೂ ಅನುಕೂಲವಾಗಿದೆ’ ಎಂದು ರವಿ ಗುನಗಾ ಹೇಳುತ್ತಾರೆ.

***

ಈಗಾಗಲೇ ಏಳೆಂಟು ಮನೆಗಳು, ಒಂಬತ್ತು ದೇವಸ್ಥಾನಗಳಲ್ಲಿ ಕಾವಿ ಕಲಾಕೃತಿಗಳನ್ನು ರಚಿಸಿದ್ದೇವೆ. ಮತ್ತೂ ಮೂರು ದೇವಸ್ಥಾಗಳಲ್ಲಿ ರಚಿಸಲು ಬೇಡಿಕೆಯಿದೆ.

– ರವಿ ಗುನಗಾ, ಕಾವಿ ಕಲಾಕೃತಿ ರಚನೆಕಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT