ಭಾನುವಾರ, ಜನವರಿ 19, 2020
24 °C
ಕಾರವಾರದಲ್ಲಿ ನೂರಾರು ಆಶಾ ಕಾರ್ಯಕರ್ತೆಯರ ಪ್ರತಿಭಟನೆ

‘15 ತಿಂಗಳ ಬಾಕಿ ವೇತನ ಕೂಡಲೇ ನೀಡಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: 15 ತಿಂಗಳಿಂದ ಬಾಕಿ ಉಳಿಸಿಕೊಂಡಿರುವ ಪ್ರೋತ್ಸಾಹ ಧನವನ್ನು ಕೂಡಲೇ ಒಂದೇ ಬಾರಿಗೆ ನೀಡಲು ಒತ್ತಾಯಿಸಿ  ಆಶಾ ಕಾರ್ಯಕರ್ತೆಯರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

ಪ್ರಮುಖ ರಸ್ತೆಗಳಲ್ಲಿ ಘೋಷಣೆ ಕೂಗುತ್ತಾ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಕುಳಿತರು.

ಎ.ಐ.ಯು.ಟಿ.ಯು.ಸಿ.ಯ ರಾಜ್ಯ ಘಟಕದ ಉಪಾಧ್ಯಕ್ಷ ಎಂ.ಶಶಿಧರ ಮಾತನಾಡಿ, ‘15 ತಿಂಗಳ ಬಾಕಿ ವೇತನ ದೊರೆಯದೇ ಕಾರ್ಯಕರ್ತೆಯರ ಭವಿಷ್ಯವೇ ಮಂಕಾಗಿದೆ. ಈಚೆಗಿನ ಬೆಲೆ ಏರಿಕೆ, ಶಿಕ್ಷಣದ ವ್ಯಾಪಾರೀಕರಣ ಮುಂತಾದ ಸಮಸ್ಯೆಗಳಿರುವಾಗ ಒಂದೂವರೆ ವರ್ಷ ಗೌರವಧನವಿಲ್ಲದೇ ದುಡಿದಿದ್ದಾರೆ. ಇದರಿಂದ ಅವರ ಬದುಕು ಬೀದಿಗೆ ಬಂದಿದೆ. ಆರೋಗ್ಯ ಇಲಾಖೆಯ ಈ ಧೋರಣೆಯ ವಿರುದ್ಧ ಎಲ್ಲಾ ಆಶಾ ಕಾರ್ಯಕರ್ತೆಯರು ಅನಿವಾರ್ಯವಾಗಿ ತಮ್ಮ ಸೇವೆಯನ್ನು ಸ್ಥಗಿತಗೊಳಿಸಿ ಹೋರಾಟದಲ್ಲಿ ತೊಡಗಿದ್ದಾರೆ’ ಎಂದು ಹೇಳಿದರು.

‘ಆರೋಗ್ಯ ಸಚಿವರು ಮಧ್ಯಸ್ಥಿಕೆ ವಹಿಸಿ ಈ ಹೆಣ್ಣು ಮಕ್ಕಳು ದುಡಿದ ಬೆವರಿಗೆ ನ್ಯಾಯಯುತವಾಗಿ ದೊರೆಯಬೇಕಾದ ಪ್ರೋತ್ಸಾಹಧನ ನೀಡಬೇಕು. ಅಲ್ಲಿಯವರೆಗೂ ಆಶಾ ಕಾರ್ಯಕರ್ತೆಯರು ವೈಚಾರಿಕವಾಗಿ, ಸಂಘಟನಾತ್ಮಕವಾಗಿ ಒಗ್ಗಟ್ಟನ್ನು ಕಾಪಾಡಿಕೊಂಡು ಹೋರಾಡಬೇಕು’ ಎಂದು ಕರೆ ನೀಡಿದರು.

‘1,000 ಜನಸಂಖ್ಯೆಗೆ ಕಾರ್ಯನಿರ್ವಹಿಸುವ ಪ್ರತಿ ಆಶಾಗೆ ಮಾಸಿಕ ₹ 3,000 ನೀಡಬೇಕು. ಇದನ್ನು ಜನಸಂಖ್ಯೆಗೆ ಅನುಗುಣವಾಗಿ ಹೆಚ್ಚಿಸಬೇಕು. ಅಂಗನವಾಡಿ ಕಾರ್ಯಕರ್ತೆಯರಿಗೆ ಇರುವಂತೆ ಆಶಾ ಕ್ಷೇಮಾಭಿವೃದ್ದಿ ನಿಧಿ ಸ್ಥಾಪಿಸಬೇಕು. ಆಶಾಗಳ ಮಾರಣಾಂತಿಕ ಕಾಯಿಲೆ ಚಿಕಿತ್ಸೆಗೆ ಮತ್ತು ಮರಣ ಹೊಂದಿದಲ್ಲಿ ಆಶಾ ಕುಟುಂಬಕ್ಕೆ ಪರಿಹಾರ ಒದಗಿಸಬೇಕು. ಈಗಾಗಲೇ ಭರವಸೆ ನೀಡಿರುವಂತೆ ಆಶಾ ಕಾರ್ಯಕರ್ತೆಯರಿಗೆ ದ್ವಿಚಕ್ರ ವಾಹನ ಖರೀದಿಸಲು ಸಹಾಯಧನ ನೀಡಬೇಕು’ ಎಂದು ವಿವಿಧ ಬೇಡಿಕೆಗಳನ್ನಿಟ್ಟರು.

ಜಿಲ್ಲಾಧಿಕಾರಿ ಮೂಲಕ ಆರೋಗ್ಯ ಸಚಿವ ಶ್ರೀರಾಮುಲು ಅವರಿಗೆ ಮನವಿ ಸಲ್ಲಿಸಿದರು. ಗಂಗಾಧರ ಬಡಿಗೇರ ನೇತೃತ್ವ ವಹಿಸಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು