ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳೇ ಆದೇಶ ಅನುಷ್ಠಾನಕ್ಕೆ ರಿಕ್ಷಾ ಚಾಲಕರ ಒತ್ತಾಯ

ಶಾಸಕರು, ಉಪವಿಭಾಗಾಧಿಕಾರಿಗೆ ಮನವಿ
Last Updated 4 ಜೂನ್ 2019, 12:20 IST
ಅಕ್ಷರ ಗಾತ್ರ

ಶಿರಸಿ: ಶಾಲಾ ಮಕ್ಕಳನ್ನು ಬಾಡಿಗೆಗೆ ಕರೆದುಕೊಂಡು ಹೋಗಲು ಈ ಹಿಂದಿನ ಸರ್ಕಾರಿ ಆದೇಶದಂತೆ ಅವಕಾಶ ಮಾಡಿ ಕೊಡಬೇಕು ಎಂದು ಒತ್ತಾಯಿಸಿ, ನಗರದ ಆಟೊರಿಕ್ಷಾ ಚಾಲಕರು, ಮಾಲೀಕರು ಮಂಗಳವಾರ ಇಲ್ಲಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಉಪವಿಭಾಗಾಧಿಕಾರಿ ಡಾ. ಈಶ್ವರ ಉಳ್ಳಾಗಡ್ಡಿ ಅವರಿಗೆ ಮನವಿ ಸಲ್ಲಿಸಿದರು.

ನಗರದಲ್ಲಿ 400ಕ್ಕಿಂತ ಹೆಚ್ಚು ರಿಕ್ಷಾದವರು ಪ್ರತಿದಿನ 3000ಕ್ಕೂ ಹೆಚ್ಚು ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗಿ, ವಾಪಸ್‌ ಮನೆಗೆ ತಂದು ಬಿಟ್ಟು, ಈ ಬಾಡಿಗೆ ಹಣದಿಂದ ಜೀವನ ನಡೆಸುತ್ತಿದ್ದಾರೆ. ಈಗ ಏಕಾಏಕಿ ಸುಪ್ರೀಂ ಕೋರ್ಟ್ ಆದೇಶವಿದೆ ಎಂದು ಹೇಳಿರುವ ಸಂಬಂಧಪಟ್ಟ ಅಧಿಕಾರಿಗಳು, ಮೂರಕ್ಕಿಂತ ಹೆಚ್ಚು ಮಕ್ಕಳನ್ನು ಕರೆದೊಯ್ದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳುತ್ತಿರುವುದು, ರಿಕ್ಷಾದವರು ಮತ್ತು ಮಕ್ಕಳ ಪಾಲಕರಿಗೆ ತೊಂದರೆಯಾಗಿದೆ. ಜಿಲ್ಲೆಯಲ್ಲಿ ಎಲ್ಲೂ ಇಲ್ಲದ ಆದೇಶವನ್ನು ಶಿರಸಿಯಲ್ಲಿ ಜಾರಿಗೊಳಿಸಬೇಕೆಂದು ಹೇಳುತ್ತಿರುವುದು ತೊಂದರೆಯಾಗಿದೆ. ಈ ಸಮಸ್ಯೆ ಬಗೆಹರಿಯುವ ತನಕ ಶಾಲಾ ಮಕ್ಕಳ ಬಾಡಿಗೆಯನ್ನು ನಿಲ್ಲಿಸಲಾಗಿದೆ. ಇದರಿಂದ ಮಕ್ಕಳು ಮತ್ತು ಪಾಲಕರಿಗೆ ತೊಂದರೆಯಾಗುತ್ತಿದೆ ಎಂದು ರಿಕ್ಷಾ ಚಾಲಕ, ಮಾಲೀಕರು ತಿಳಿಸಿದರು.

ಚಾಲಕ, ಮಾಲೀಕರ ಗುರುತಿನ ಚೀಟಿಯನ್ನು ರಿಕ್ಷಾದ ಹಿಂಭಾಗದಲ್ಲಿ ಅಂಟಿಸಲಾಗಿದೆ. ಚಾಲಕರ ಸೀಟಿನ ಪಕ್ಕದಲ್ಲಿ ಮಕ್ಕಳನ್ನು ಕುಳ್ಳಿರಿಸಿಕೊಂಡು ಹೋದರೆ, ಅಂತಹವರ ಮೇಲೆ ಕಾನೂನು ಕ್ರಮ ಕೈಗೊಳ್ಳಬಹುದು. ಮಕ್ಕಳನ್ನು ಕರೆದೊಯ್ಯುವ ಶಾಲೆಗಳಿಗೆ ಆಟೊ ಚಾಲಕರ ಮಾಹಿತಿ ನೀಡಲಾಗಿದೆ. ಕೇವಲ ಮೂರು ಮಕ್ಕಳನ್ನು ಕರೆದುಕೊಂಡು ಹೋದರೆ, ಪಾಲಕರಿಗೆ ತೀವ್ರ ಹೊರೆಯಾಗುತ್ತದೆ. ಪ್ರಸ್ತುತ ಪ್ರತಿ ವಿದ್ಯಾರ್ಥಿಗೆ ₹ 500 ಪಡೆಯುತ್ತಿದ್ದು, ಮೂರರಿಂದ ಐವರು ವಿದ್ಯಾರ್ಥಿಗಳನ್ನು ಕರೆದೊಯ್ದರೆ ಪಾಲಕರಿಗೆ ತಿಂಗಳಿಗೆ ₹ 1000 ಬಾಡಿಗೆ ನೀಡಬೇಕಾಗುತ್ತದೆ. ಖಾಸಗಿ ವಾಹನಗಳು ನಿಯಮ ಮೀರಿ ಜನರನ್ನು ಒಯ್ಯುತ್ತಿದ್ದರೂ, ಅವರ ಮೇಲೆ ಇಲ್ಲದ ಕ್ರಮವನ್ನು ರಿಕ್ಷಾದವರ ಮೇಲೆ ಹೇರಲಾಗುತ್ತಿದೆ. ಎಲ್ಲ ನಿಯಮಗಳನ್ನು ಪಾಲಿಸುತ್ತಿರುವ ರಿಕ್ಷಾದವರ ಸಮಸ್ಯೆ ಬಗೆಹರಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಜಿಲ್ಲಾ ಆಟೋ ಚಾಲಕ, ಮಾಲೀಕರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಶ್ವನಾಥ ಗೌಡ, ಶಿರಸಿ ನಗರ ಆಟೊರಿಕ್ಷಾ ಚಾಲಕ, ಮಾಲೀಕರ ಸಂಘದ ಅಧ್ಯಕ್ಷ ನಾಗರಾಜ ಪಟಗಾರ, ಮಾರಿಕಾಂಬಾ ಆಟೊರಿಕ್ಷಾ ಚಾಲಕ, ಮಾಲೀಕರ‌ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ವಿಠ್ಠಲ ಮೊಗೇರ ನೇತೃತ್ವ ವಹಿಸಿದ್ದರು.

ಬಾಡಿಗೆ ಸ್ಥಗಿತ: ಪಾಲಕರ ಪರದಾಟ

ಮಂಗಳವಾರ ಪ್ರತಿಭಟನಾರ್ಥವಾಗಿ ನಗರದ ಎಲ್ಲ ರಿಕ್ಷಾದವರು ಶಾಲೆಗೆ ಮಕ್ಕಳನ್ನು ಕರೆದೊಯ್ಯಲು ಮನೆ ಬಾಗಿಲಿಗೆ ಬರದ ಕಾರಣ, ಪಾಲಕರು ತಮ್ಮ ವಾಹನದಲ್ಲಿ ಮಕ್ಕಳನ್ನು ಶಾಲೆಗೆ ಬಿಟ್ಟರು. ಉದ್ಯೋಗಕ್ಕೆ ಹೋಗುವ ಪಾಲಕರು, ಮಕ್ಕಳನ್ನು ಶಾಲೆಗೆ ಕಳುಹಿಸಲು ಪರದಾಡುವಂತಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT