ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಪ್ರದೇಶದಲ್ಲಿ ಬಿರುಗಾಳಿಗೆ 73 ಸಾವು: ರಾಜ್ಯದಲ್ಲಿ ಯೋಗಿ ಆದಿತ್ಯನಾಥ ಪ್ರಚಾರ ಮೊಟಕು

Last Updated 4 ಮೇ 2018, 13:09 IST
ಅಕ್ಷರ ಗಾತ್ರ

ಲಖನೌ: ಉತ್ತರ ಭಾರತದಲ್ಲಿ ದೂಳಿನಿಂದ ಕೂಡಿದ ಭಾರಿ ಬಿರುಗಾಳಿ ಮತ್ತು ಮಳೆಗೆ 124 ಜನ ಬಲಿಯಾಗಿದ್ದಾರೆ. ಉತ್ತರ ‍ಪ್ರದೇಶದಲ್ಲಿ 73 ಜನ ಮೃತಪಟ್ಟಿದ್ದು, ಆಗ್ರಾ ಹಾಗೂ ಇತರ ಸ್ಥಳಕ್ಕೆ ತುರ್ತು ಭೇಟಿ ನೀಡುವ ನಿಮಿತ್ತ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಕರ್ನಾಟಕದಲ್ಲಿ ಕೈಗೊಂಡಿರುವ ಚುನಾವಣಾ ಪ್ರಚಾರವನ್ನು ಮೊಟಕುಗೊಳಿಸಿ ರಾಜ್ಯಕ್ಕೆ ಹಿಂದಿರುಗಲಿದ್ದಾರೆ.

ಆದಿತ್ಯನಾಥ್ ಅವರು ಪ್ರಚಾರವನ್ನು ಮೊಟಕುಗೊಳಿಸಿ, ಶುಕ್ರವಾರ ರಾತ್ರಿ ಆಗ್ರಾಕ್ಕೆ ಬರಲಿದ್ದಾರೆ. ಬಿರುಗಾಳಿಯಿಂದ ಹಾನಿಗೊಳಗಾದ ಸ್ಥಳಗಳಿಗೆ ಶನಿವಾರ ಬೆಳಿಗ್ಗೆ ಭೇಟಿ ನೀಡಲಿದ್ದಾರೆ ಎಂದು ಉತ್ತರ ಪ್ರದೇಶ ವಾರ್ತಾ ಇಲಾಖೆ ಪ್ರಧಾನ ಕಾರ್ಯದರ್ಶಿ ಅವನೀಶ್‌ ಅವಸ್ತಿ ತಿಳಿಸಿದ್ದಾರೆ.

ಉತ್ತರ ಪ್ರದೇಶದಲ್ಲಿ ಬಿರುಗಾಳಿಗೆ ಜನರು ಮೃತಪಟ್ಟ ಬಳಿಕವೂ ಆದಿತ್ಯನಾಥ ಅವರು ಕರ್ನಾಟಕದಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿರುವುದಕ್ಕೆ ಸಿಎಂ ಸಿದ್ದರಾಮಯ್ಯ ಅವರು ಶನಿವಾರ ಟೀಕಿಸಿದ್ದರು.

‘ಉತ್ತರ ಪ್ರದೇಶದಲ್ಲಿ ಬಿರುಗಾಳಿಗೆ ಕನಿಷ್ಠ 64 ಜನ ಮೃತಪಟ್ಟಿದ್ದಾರೆ. ಮೃತಪಟ್ಟವರ ಕುಟುಂಬದವರ ಮತ್ತು ಪ್ರೀತಿಪಾತ್ರರ ಬಗ್ಗೆ ನನಗೆ ಸಂತಾಪವಿದೆ. ಕ್ಷಮಿಸಿ, ನಿಮ್ಮ ಮುಖ್ಯಮಂತ್ರಿ ಕರ್ನಾಟಕಕ್ಕೆ ಬೇಕಾಗಿದ್ದಾರೆ. ಅವರು ಶೀಘ್ರದಲ್ಲೇ ನಿಮ್ಮಲ್ಲಿಗೆ ಬಂದು ಕೆಲಸದಲ್ಲಿ ತೊಡಗಿಸಿಕೊಳ್ಳುವ ಬಗ್ಗೆ ಭರವಸೆ ಇದೆ’ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದರು.

ಯೋಗಿ ಆದಿತ್ಯನಾಥ ಅವರು ಆಗ್ರಾ ಜಿಲ್ಲೆಯಲ್ಲಿ ಪರಿಹಾರ ಮತ್ತು ಪುನರ್ವಸತಿ ಕಲ್ಪಿಸುವ ಕುರಿತು ಅಗತ್ಯ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಳಿಕ, ಕಾನ್ಪುರಕ್ಕೆ ತೆರಳಿ ಪರಿಹಾರ ಕಾರ್ಯಗಳನ್ನು ಪರಿಶೀಲಿಸುವ ಆದಿತ್ಯನಾಥ ಅವರು, ಹತ್ತಿರದ ಜಿಲ್ಲೆಗಳಿಗೂ ಭೇಟಿ ನೀಡುವರು ಎಂದು ಅವಸ್ತಿ ಮಾಹಿತಿ ನೀಡಿದ್ದಾರೆ.

ಬುಧವಾರ ರಾತ್ರಿ ಬೀಸಿದ ಬಿರುಗಾಳಿಗೆ ಉತ್ತರ ಪ್ರದೇಶ ಮತ್ತು ರಾಜಸ್ಥಾನಗಳಲ್ಲಿ ವ್ಯಾಪಕವಾಗಿ ಹಾನಿಯಾಗಿದ್ದು, ಸಾವು, ನೋವುಗಳು ಸಂಭವಿಸಿವೆ. ಉತ್ತರ ಪ್ರದೇಶವೊಂದರಲ್ಲೇ 73 ಜನ ಸಾವಿಗೀಡಾಗಿದ್ದು, 91 ಮಂದಿ ಗಾಯಗೊಂಡಿದ್ದಾರೆ. ಆಗ್ರಾ ಜಿಲ್ಲೆಯೊಂದರಲ್ಲೇ 43 ಜನ ಮೃತಪಟ್ಟು, 51 ಮಂದಿ ಗಾಯಗೊಂಡಿದ್ದಾರೆ.

ಬಿರುಗಾಳಿಗೆ ಮರ ನೆಲಕ್ಕುರುಳಿದೆ, ಮನೆಯೊಂದು ಹಾನಿಗೊಳಗಾಗಿರುವುದು –ಎಫ್‌ಪಿ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT