ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ | ಆಟೋ ಚಾಲಕರಿಗೆ ಬ್ಯಾಡ್ಜ್ ನವೀಕರಣ ವಿಳಂಬ, ನೆರವು ಕೈತಪ್ಪುವ ಆತಂಕ

ಲಾಕ್‌ಡೌನ್ ಸಂದರ್ಭದಲ್ಲಿ ಬಂದಾಗಿದ್ದ ಪ್ರಾದೇಶಿಕ ಸಾರಿಗೆ ಕಚೇರಿ
Last Updated 12 ಮೇ 2020, 4:03 IST
ಅಕ್ಷರ ಗಾತ್ರ

ಶಿರಸಿ: ಸಂಕಷ್ಟದಲ್ಲಿರುವ ಆಟೊರಿಕ್ಷಾ ಚಾಲಕರು, ಟ್ಯಾಕ್ಸಿ ಚಾಲಕರಿಗೆ ಸರ್ಕಾರ ಘೋಷಿಸಿರುವ ವಿಶೇಷ ಪ್ಯಾಕೇಜ್‌ನ ಧನಸಹಾಯ ಕೈತಪ್ಪಬಹುದೆಂದು ಹಲವರು ಆತಂಕದಲ್ಲಿದ್ದಾರೆ. ಚಾಲಕರು ಪಡೆದಿರುವ ಬ್ಯಾಡ್ಜ್ ನವೀಕರಣಗೊಳಿಸಿಕೊಳ್ಳಲು ಆಗದಿರುವುದು ಇದಕ್ಕೆ ಕಾರಣವಾಗಿದೆ.

ಸಾಮಾನ್ಯವಾಗಿ ಬಾಡಿಗೆ ಹೊಡೆಯುವ ವಾಹನಗಳನ್ನು ಚಾಲಕರು ವರ್ಷದ ಆರಂಭದಲ್ಲಿ ಖರೀದಿಸುತ್ತಾರೆ. ಫೆಬ್ರುವರಿಯಿಂದ ಏಪ್ರಿಲ್‌ವರೆಗೆ ವಾಹನ ಖರೀದಿ ಜೋರಾಗಿರುತ್ತದೆ. ಈ ವಾಹನಗಳ ಬಾಡಿಗೆ ಹೊಡೆಯಲು ಚಾಲಕರು ವಿಶೇಷ ಬ್ಯಾಡ್ಜ್‌ಗಳಿಗೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಂದ ಅನುಮತಿ ಪಡೆಯಬೇಕಾಗುತ್ತದೆ. ಈವರೆಗಿನ ನಿಯಮದಂತೆ ಪ್ರತಿ ಮೂರು ವರ್ಷಕ್ಕೊಮ್ಮೆ ಇದನ್ನು ನವೀಕರಿಸಿಕೊಳ್ಳಬೇಕಾಗಿತ್ತು. ಈಗಿನ ಹೊಸ ನಿಯಮದಂತೆ ಇದನ್ನು ಐದು ವರ್ಷಕ್ಕೊಮ್ಮೆ ನವೀಕರಿಸಬೇಕು. ವಿವಿಧ ಕಾರಣಗಳಿಂದಾಗಿ ಬ್ಯಾಡ್ಜ್ ನವೀಕರಿಸಿಕೊಳ್ಳಲು ಸಾಧ್ಯವಾಗದೇ ಇರುವ ಚಾಲಕರಿಗೆ ಈಗ ಸರ್ಕಾರ ಘೋಷಿಸಿರುವ ₹ 5000 ಧನ ಸಹಾಯ ಕೈತಪ್ಪುವ ಭಯ ಎದುರಾಗಿದೆ.

‘ಫೆಬ್ರುವರಿ ಕೊನೆಯಲ್ಲಿ ಬಾಡ್ಜ್ ನವೀಕರಣಗೊಳಿಸುವ ಅವಧಿ ಬಂದಿತ್ತು. ಅಷ್ಟರಲ್ಲಿ ಮಾರಿಕಾಂಬಾ ಜಾತ್ರೆ, ಮತ್ತಿತರ ಕಾರಣಗಳಿಗೆ ವಿಳಂಬವಾಯಿತು. ನವೀಕರಣಕ್ಕೆ ದಾಖಲೆ ಕೊಡುವಷ್ಟರಲ್ಲಿ ಕೋವಿಡ್‌ 19 ಸಾಂಕ್ರಾಮಿಕ ಕಾಯಿಲೆ ನಿಯಂತ್ರಣಕ್ಕೆ ಲಾಕ್‌ಡೌನ್ ಜಾರಿಗೊಂಡಿತು. ಪ್ರಾದೇಶಿಕ ಸಾರಿಗೆ ಕಚೇರಿ ಬಂದಾಗಿದ್ದರಿಂದ ಬ್ಯಾಡ್ಜ್ ನವೀಕರಣಗೊಳಿಸಿಕೊಳ್ಳಲು ಆಗಲಿಲ್ಲ. ಈಗ ಒಂದೂವರೆ ತಿಂಗಳಿನಿಂದ ರಿಕ್ಷಾ ಬಾಡಿಗೆಯೂ ಇಲ್ಲ’ ಎನ್ನುತ್ತಾರೆ ಆರು ವರ್ಷಗಳಿಂದ ಬಾಡಿಗೆ ರಿಕ್ಷಾ ಓಡಿಸುವ ಚಾಲಕ ರಾಮು.

‘ಸಂಘದ ಸದಸ್ಯತ್ವ ಹೊಂದಿರುವ ಮತ್ತು ರಿಕ್ಷಾ ಓಡಿಸುವುದನ್ನೇ ವೃತ್ತಿಯಾಗಿಸಿಕೊಂಡಿರುವವರನ್ನು ಪರಿಗಣಿಸಿ ಸರ್ಕಾರ ಧನಸಹಾಯ ನೀಡಬೇಕು. ಇಲ್ಲವಾದಲ್ಲಿ ಜಿಲ್ಲೆಯಲ್ಲಿ ಹಲವಾರು ವೃತ್ತಿನಿರತ ರಿಕ್ಷಾ ಚಾಲಕರಿಗೆ ಅನ್ಯಾಯವಾಗುತ್ತದೆ’ ಎಂದು ಅವರು ಹೇಳಿದರು.

‘ಮಾರ್ಚ್‌ 1ರ ಪೂರ್ವ ಬ್ಯಾಡ್ಜ್ ನವೀಕರಣಗೊಳಿಸಿದವರನ್ನು ಮಾತ್ರ ಧನಸಹಾಯ ನೀಡಲು ಪರಿಗಣಿಸುವ ಮಾನದಂಡವನ್ನು ಸರ್ಕಾರ ವಿಧಿಸಿದೆ. ಈ ಷರತ್ತನ್ನು ಸರ್ಕಾರ ಕೈಬಿಡಬೇಕು. ಈ ಅವಧಿಯ ಪೂರ್ವ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದವರು, ಸ್ವತಃ ಆರ್‌ಟಿಒ ಕಚೇರಿಗೆ ಹೋಗಿ ಅರ್ಜಿ ಸಲ್ಲಿಸಿ, ಹಣ ತುಂಬಿ ಬಂದವರು ಇದ್ದಾರೆ. ಲಾಕ್‌ಡೌನ್ ಕಾರಣಕ್ಕೆ ಅವರ ಬ್ಯಾಡ್ಜ್ ನವೀಕರಣ ವಿಳಂಬವಾಗಿದೆ. ಜಿಲ್ಲೆಯಲ್ಲಿ ಸುಮಾರು 7000 ರಿಕ್ಷಾ ಚಾಲಕರಿದ್ದಾರೆ. ಅವರಲ್ಲಿ 1000ಕ್ಕೂ ಅಧಿಕ ಜನರು ಬ್ಯಾಡ್ಜ್ ನವೀಕರಣಕ್ಕೆ ಅರ್ಜಿ ಸಲ್ಲಿಸಿದವರಿದ್ದಾರೆ’ ಎನ್ನುತ್ತಾರೆ ಉತ್ತರ ಕನ್ನಡ ಜಿಲ್ಲಾ ಆಟೊ ಚಾಲಕರ ಮಾಲೀಕರ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ವಿಶ್ವನಾಥ ಗೌಡ.

‘ಪ್ರಯಾಣಿಕರ ಡೈರಿ ಪ್ರಾರಂಭಿಸಿ’

ಭಟ್ಕಳದಲ್ಲಿ ರಿಕ್ಷಾ ಚಾಲಕರೊಬ್ಬರು ರೋಗಿಯೊಬ್ಬರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದ ಕಾರಣಕ್ಕೆ, ಅವರಿಗೂ ಕೋವಿಡ್ 19 ತಗುಲಿದೆ. ಸಮಾಜ ಹಾಗೂ ರಿಕ್ಷಾ ಚಾಲಕರ ಆರೋಗ್ಯ ಹಿತದೃಷ್ಟಿಯಿಂದ ಈ ನಿಯಮ ಪಾಲಿಸುವಂತೆ ಜಿಲ್ಲಾ ಆಟೊ ಚಾಲಕರ ಮಾಲೀಕರ ಕ್ಷೇಮಾಭಿವೃದ್ಧಿ ಸಂಘ ಕೆಲವು ಸಲಹೆಗಳನ್ನು ನೀಡಿದೆ.

* ಚಾಲಕರು ಪರಸ್ಪರ ಅಂತರ ಪಾಲಿಸಬೇಕು

* ರಿಕ್ಷಾದಲ್ಲಿ ಬಾಡಿಗೆಗೆ ಬರುವ ಪ್ರಯಾಣಿಕರ ಮಾಹಿತಿಯ ಡೈರಿಯನ್ನು ಮಾಡಿ, ‍ಪ್ರಯಾಣಿಕರ ಹೆಸರು, ದೂರವಾಣಿ ಸಂಖ್ಯೆ ನಮೂದಿಸಿಕೊಂಡಿರಬೇಕು

* ಯಾವುದೇ ಪ್ರಯಾಣಿಕನ ಆರೋಗ್ಯದ ಬಗ್ಗೆ ಅನುಮಾನವಿದ್ದಲ್ಲಿ ಸಂಘದ ಪ್ರಮುಖರು ಅಥವಾ ಪೊಲೀಸರಿಗೆ ಮಾಹಿತಿ ನೀಡಬೇಕು

* ಪ್ರಯಾಣಿಕರಿಂದ ಹಣ ಪಡೆದ ಮೇಲೆ ಸ್ಯಾನಿಟೈಸರ್ ಹಾಕಿ ಕೈಯನ್ನು ಉಜ್ಜಬೇಕು

* ಮನೆಗೆ ಹೋದಾಕ್ಷಣ ಸ್ನಾನ ಮಾಡುವುದನ್ನು ರೂಢಿಸಿಕೊಳ್ಳಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT