ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸಿರೆ ಉಸಿರಾಗಿಸಿಕೊಂಡ ‘ಪುರ’ ಶಾಲೆ

Last Updated 5 ಜೂನ್ 2018, 12:09 IST
ಅಕ್ಷರ ಗಾತ್ರ

ಮಾಲೂರು: ಶಾಲೆ ಎಂದರೆ ಸಹಜವಾಗಿ ಆಟ ಪಾಠ ಒಂದಿಷ್ಟು ಸಾಂಸ್ಕೃತಿಕ ಚಟುವಟಿಕೆಗಳಿಗೆ ಸೀಮಿತವಾಗಿರುತ್ತದೆ. ಈ ಪರದೆ ಆಚೆಗೆ ಗುರುತಿಸಿಕೊಂಡ ಶಾಲೆಗಳ ಸಂಖ್ಯೆ ವಿರಳ, ಆದರೆ ತಾಲ್ಲೂಕಿನ ಎಚ್.ಹೊಸಕೋಟೆ ಗ್ರಾ.ಪಂ.ವ್ಯಾಪ್ತಿಯ ಪುರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಹಸಿರು ಕ್ರಾಂತಿ ಮೂಲಕ ಜನರ ಗಮನ ಸೆಳೆದಿದೆ.

ಗ್ರಾಮದಲ್ಲಿ 450ಕ್ಕೂ ಹೆಚ್ಚು ಕುಟುಂಬಗಳು ವಾಸವಿದ್ದು, ಬಹುಪಾಲು ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿದ್ದಾರೆ. ಶಾಲೆಯಲ್ಲಿ 1ನೇ ತರಗತಿಯಿಂದ 5ನೇ ತರಗತಿಯವರೆಗೆ 62 ವಿದ್ಯಾರ್ಥಿಗಳಿದ್ದಾರೆ. ಶಾಲೆಯು ಸುಮಾರು ಒಂದು ಎಕರೆ ವಿಸ್ತಾರವಾಗಿದ್ದು, ಆವರಣದಲ್ಲಿ 450ಕ್ಕೂ ಹೆಚ್ಚು ವಿವಿಧ ಬಗೆಯ ಗಿಡ, ಮರಗಳು ಇವೆ. ಮುಖ್ಯವಾಗಿ ತರಕಾರಿ ಸೊಪ್ಪು ಹಾಗು ವಿವಿಧ ಜಾತಿಯ ಹಣ್ಣಿನ ಮರಗಳನ್ನು ಬೆಳಸಲಾಗಿದೆ. ಜತೆಗೆ ಹಾವು ನಂಜು, ಎಕ್ಕದ ಗಿಡ, ಅಲೋವೆರಾ, ಒಂದೆಲಗ, ಅಮೃತ ಬಳ್ಳಿಯಂತಹ ಔಷಧೀಯ ಗುಣ ಉಳ್ಳ ಗಿಡಗಳನ್ನು ಬೆಳಸಲಾಗಿದೆ.

ಇಲ್ಲಿ ಬೆಳೆಯುವ ತರಕಾರಿಗಳನ್ನೇ ಮಕ್ಕಳ ಬಿಸಿಯೂಟಕ್ಕೆ ಬಳಸಲಾಗುತ್ತಿದೆ. ಗ್ರಾಮ ಪಂಚಾಯಿತಿ ವತಿಯಿಂದ ಶಾಲಾ ಆವರಣದಲ್ಲಿ ನೀರಿನ ನಲ್ಲಿ ಅಳವಡಿಸಲಾಗಿದೆ. ಈ ನಲ್ಲಿಯಿಂದ ಶಾಲೆಗೆ ಅಗತ್ಯವಿರುವಷ್ಟು ನೀರು ಬಳಸಿಕೊಂಡು ಉಳಿದ ನೀರನ್ನು ದೊಡ್ಡ ತೊಟ್ಟಿಯಲ್ಲಿ ಸಂಗ್ರಹಿಸಲಾಗುತ್ತಿದೆ. ತೊಟ್ಟಿಯಿಂದ ಹನಿ ನೀರಾವರಿ ಪದ್ಧತಿ ಮೂಲಕ ಗಿಡಗಳಿಗೆ ನೀರು ಕೊಡಲಾಗುತ್ತಿದೆ. ಶಾಲೆ ಆವರಣದಲ್ಲಿ ಕಣ್ಣು ಹಾಯಿಸಿದ್ದಲ್ಲೆಲ್ಲಾ ಹಸಿರು ಕಂಗೊಳಿಸುತ್ತಿದೆ.

ಶಾಲೆ ಪ್ರವೇಶಿಸುತ್ತಿದ್ದಂತೆ ಹಚ್ಚ ಹಸಿರು ಸ್ಚಾಗತಿಸುತ್ತದೆ. ಇಲ್ಲಿನ ಮರಗಳು ಪಕ್ಷಿ ಸಂಕುಲಕ್ಕೆ ಆಶ್ರಯ ತಾಣವಾಗಿದೆ. ಹಕ್ಕಿಗಳ ಚಿಲಿ ಪಿಲಿ ಹಚ್ಚ ಹಸಿರಿನ ನಡುವೆ ಕಲಿಕೆಗೆ ಉತ್ತಮ ವಾತಾವರಣ ಉಂಟು ಮಾಡಿದೆ. ನೀರಿನ ಸಂರಕ್ಷಣೆಗಾಗಿ ಮಳೆ ನೀರು ಸಂಗ್ರಹಣೆ ಪದ್ಧತಿ ಅಳವಡಿಸಿಕೊಳ್ಳಲಾಗಿದೆ. ಜತೆಗೆ ಇಂಗು ಗುಂಡಿಗಳನ್ನು ಸಹ ನಿರ್ಮಿಸಲಾಗಿದೆ.

ಸ್ವಚ್ಛತೆಗೆ ಒತ್ತು: ಶಾಲೆಯ ಸ್ವಚ್ಛತೆಗೆ ಹೆಚ್ಚು ಒತ್ತು ಕೊಡಲಾಗಿದೆ. ವಿದ್ಯಾರ್ಥಿಗಳಿಗೆ ಪ್ರತ್ಯೇಕ ಶೌಚಾಲಯ, ಕೈ ತೊಳೆಯುವ ನೀರಿನ ತೊಟ್ಟಿ, ಮಕ್ಕಳಿಗೆ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ಮಾಡಲಾಗಿದೆ.

ಒಣ ಮತ್ತು ಹಸಿ ಕಸ ಸಂಗ್ರಹಣೆಗೆ ಪ್ರತ್ಯೇಕ ತೊಟ್ಟಿಗಳನ್ನು ನಿರ್ಮಿಸಲಾಗಿದೆ. ಈ ತೊಟ್ಟಿಗಳಲ್ಲಿ ಸಂಗ್ರಹವಾದ ತ್ಯಾಜ್ಯಗಳನ್ನು ಬೇರ್ಪಡಿಸಿ ಒಣ ಕಸವನ್ನು ಮಾರಾಟ ಮಾಡಿ ಅದರಿಂದ ಬರುವ ಹಣವನ್ನು ಶಾಲೆಯ ಅಭಿವೃದ್ಧಿಗೆ ಬಳಸಲಾಗುತ್ತಿದೆ. ಇನ್ನು ಹಸಿ ಕಸವನ್ನು ಸಾವಯವ ಕಸವನ್ನು ಗೊಬ್ಬರವಾಗಿ ಪರಿವರ್ತಿಸಿ ಗಿಡ ಮರಗಳಿಗೆ ಬಳಸಲಾಗುತ್ತಿದೆ.

ಸುಂದರ ಪರಿಸರ: ಶಾಲೆ ಪ್ರವೇಶಿಸುತ್ತಿದ್ದಂತೆ ಸುಂದರ ಪರಿಸರ ಸ್ವಾಗತಿಸುತ್ತದೆ. ಹನಿ ನೀರಾವರಿ ಪದ್ಧತಿ ಮೂಲಕ ಬೆಳೆದಿರುವ ಸುಮಾರು 61 ವಿವಿಧ ಜಾತಿಯ ಗಿಡ, ಮರಗಳನ್ನು ಬೆಳಸಲಾಗಿದೆ. ಗಿಳಿ ಗೊರವಂಕ, ಕೋಗಿಲೆ,
ಅಳಿಲುಗಳು ಶಾಲಾ ವಾತಾವರಣಕ್ಕೆ ಸೊಬಗು ತಂದಿದೆ. ಪಕ್ಷಿಗಳಿಗೆ ಪ್ರತಿ ದಿನ ಆಹಾರ ನೀರು ಪೂರೈಸಲಾಗುತ್ತಿದೆ.

ಪ್ರಶಸ್ತಿಗಳು: ಹಸಿರು ಕ್ರಾಂತಿಯ ಕಾರಣದಿಂದಲೆ ಶಾಲೆ ಸಾಕಷ್ಟು ಪ್ರಶಸ್ತಿಗಳನ್ನು ಪಡೆದಿದೆ. ಸುಂದರ ಪರಿಸರದಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಶಾಲೆಗೆ ಕಳೆದ ವರ್ಷ ಸ್ವಚ್ಛ ಭಾರತ್ ಅಭಿಯಾನದ ಅಧಿಕಾರಿಗಳು ಭೇಟಿ ನೀಡಿ ಜಿಲ್ಲಾ ಮಟ್ಟದ ಪರಿಸರ ಮಿತ್ರ ಪ್ರಥಮ ಪ್ರಶಸ್ತಿಗೆ ಆಯ್ಕೆ ಮಾಡಿದ್ದರು. 2013-14ನೇ ಸಾಲಿನ ಕಿತ್ತಳೆ ಶಾಲಾ ಪ್ರಶಸ್ತಿ, 2014-15ನೇ ಸಾಲಿನಲ್ಲಿ ಹಸಿರು ಶಾಲೆ ಪ್ರಶಸ್ತಿಗೆ ಪಾತ್ರವಾಗಿದೆ.

**
2016-17 ಸಾಲಿನಲ್ಲಿ ಬೆಂಗಳೂರು ವಿಭಾಗದ 8 ಜಿಲ್ಲೆಗಳ ವ್ಯಾಪ್ತಿಯ ಶಾಲೆಗಳ ಪೈಕಿ ಈ ಶಾಲೆಯು ರಾಜ್ಯ ಮಟ್ಟದ ಪರಿಸರ ಮಿತ್ರ ಪ್ರಶಸ್ತಿಗೆ ಭಾಜನವಾಗಿದೆ. ಬೆಂಗಳೂರಿನಲ್ಲಿ ಕಳೆದ ವರ್ಷ ನಡೆದ ಸಮಾರಂಭದಲ್ಲಿ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಖ್ಯ ಶಿಕ್ಷಕ ರಮೇಶ್ ಅವರಿಗೆ ಪ್ರಶಸ್ತಿ ಮತ್ತು ₹ 10 ಸಾವಿರ ನಗದು ನೀಡಿ ಮಾಡಿ ಸನ್ಮಾನಿಸಿದ್ದರು.

‘ಮಕ್ಕಳು ಹಾಗೂ ಗ್ರಾಮಸ್ಥರ ಸಹಕಾರದಿಂದ ಶಾಲೆಯಲ್ಲಿ ಗಿಡ, ಮರಗಳನ್ನು ಬೆಳೆಸಿದ್ದೇವೆ. ಶಾಲೆಗೆ ಪರಿಸರ ಮಿತ್ರ ಪ್ರಶಸ್ತಿ ಹಾಗೂ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ನೀಡುವ 2016-17ನೇ ಸಾಲಿನ ಪರಿಸರ ಮಿತ್ರ ಪ್ರಶಸ್ತಿ, 2017-18ನೇ ಸಾಲಿನ ರಾಜ್ಯ ಮಟ್ಟದ ಪರಿಸರ ಮಿತ್ರ ಶಾಲೆ ಹಾಗೂ 2017-18 ಸಾಲಿನ ಅಂತರರಾಷ್ಟ್ರೀಯ ಹಸಿರು ಧ್ವಜ ಶಾಲೆ ಪ್ರಶಸ್ತಿಗಳು ಸೇರಿದಂತೆ ಹಲವಾರು ಪ್ರಶಸ್ತಿಗಳು ದೊರೆತಿರುವುದರ ಹಿಂದೆ ವಿದ್ಯಾರ್ಥಿಗಳ ಹಾಗೂ ಶಿಕ್ಷಕರ ಪರಿಶ್ರಮಿದೆ’ ಎಂದು ಶಾಲೆಯ ಮುಖ್ಯ ಶಿಕ್ಷಕ ಎಂ.ರಮೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.

–ರಾಜಗೋಪಾಲ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT