ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೈತಖೋಲ್‌ನಲ್ಲಿ ಕುಡಿಯುವ ನೀರಿನ ಸಮಸ್ಯೆ

ಹಲವು ಕೊರತೆಗಳನ್ನು ಎದುರಿಸುತ್ತಿರುವ ಕಾರವಾರದ ಮೊದಲನೇ ವಾರ್ಡ್‌
Last Updated 23 ಫೆಬ್ರುವರಿ 2021, 19:30 IST
ಅಕ್ಷರ ಗಾತ್ರ

ಕಾರವಾರ: ನಗರದ ಹೆಸರು ಹೇಳಿದ ಕೂಡಲೇ ಎರಡೆರಡು ಬಂದರುಗಳು ನೆನಪಾಗುತ್ತವೆ. ಅವುಗಳನ್ನು ಒಳಗೊಂಡಿರುವ ವಾರ್ಡ್ ಎಂಬ ಹೆಗ್ಗಳಿಕೆ ಬೈತಖೋಲ್‌ನದ್ದು. ಆದರೆ, ಇಲ್ಲಿ ದಶಕಗಳಿಂದ ಪರಿಹಾರ ಕಾಣದೇ ಉಳಿದಿರುವ ಸಮಸ್ಯೆಗಳು ಇಂದಿಗೂ ಪ್ರಸ್ತುತವಾಗಿವೆ.

ನಗರಸಭೆಯ 31 ವಾರ್ಡ್‌ಗಳ ಪೈಕಿ ಮೊದಲನೇ ವಾರ್ಡ್, ಅಂಕೋಲಾ ಭಾಗದಿಂದ ನಗರವನ್ನು ಪ್ರವೇಶಿಸುತ್ತಲೇ ತೆರೆದುಕೊಳ್ಳುತ್ತದೆ. ಹೆದ್ದಾರಿಯಿಂದ ಎಡಭಾಗಕ್ಕೆ ಸಾಗಿದರೆ ಒಂದು ಬದಿಯಲ್ಲಿ ವಾಣಿಜ್ಯ ಬಂದರು, ಮತ್ತೊಂದು ತುದಿಯಲ್ಲಿ ಮೀನುಗಾರಿಕಾ ಬಂದರು ಕಾರ್ಯ ನಿರ್ವಹಿಸುತ್ತಿವೆ. ಸದಾ ಚಟುವಟಿಕೆಗಳಿಂದ ಕೂಡಿರುವ ವಾರ್ಡ್‌ನಲ್ಲಿ ಸ್ಥಳೀಯರು, ಬೇಸಿಗೆಕಾಲದಲ್ಲಿ ಕುಡಿಯುವ ನೀರಿಗೆ ಸ್ವಲ್ಪ ಹೆಚ್ಚೇ ಕಷ್ಟಪಡುತ್ತಾರೆ.

ಪಕ್ಕದಲ್ಲೇ ಸಮುದ್ರವಿದ್ದರೂ ಉಪ್ಪು ನೀರಿನಿಂದಾಗಿ ಸಿಹಿಯಾದ ಕುಡಿಯುವ ನೀರಿಗೆ ತತ್ವಾರ ಉಂಟಾಗುತ್ತದೆ. ಸ್ಥಳೀಯರ ಮನೆಯಂಗಳದಲ್ಲಿರುವ ಬಾವಿಗಳಲ್ಲಿ ಸಿಹಿ ನೀರು ತಳ ಸೇರುತ್ತಿದ್ದಂತೆ ಉಪ್ಪು ನೀರು ಭರ್ತಿಯಾಗುತ್ತದೆ. ಇದರಿಂದ ಬೇಸಿಗೆಯ ಎರಡು ತಿಂಗಳು ನಗರಸಭೆಯ ಟ್ಯಾಂಕರ್‌ಗಳ ಮೂಲಕ ನೀರು ಪೂರೈಕೆ ಮಾಡಲಾಗುತ್ತದೆ.

‘ಬಂದರಿನ ಸುತ್ತ ಸಮುದ್ರದಲ್ಲಿ ಹೂಳು ತೆಗೆದ ಬಳಿಕ ಜಲಮೂಲಗಳಲ್ಲಿ ಉಪ್ಪು ನೀರಿನ ಸಮಸ್ಯೆ ಹೆಚ್ಚಾಗಿದೆ. ಗೌಡವಾಡದ ನಾಲ್ಕು ಬಾವಿಗಳನ್ನು ಹೊರತು ಪಡಿಸಿದರೆ, ಮತ್ತೆಲ್ಲ ಕಡೆ ಈ ತೊಂದರೆಯಿದೆ. 10ಕ್ಕೂ ಹೆಚ್ಚು ಬಾವಿಗಳು ಸಂಪೂರ್ಣವಾಗಿ ಪಾಳು ಬಿದ್ದಿವೆ’ ಎನ್ನುತ್ತಾರೆ ನಗರಸಭೆ ಸದಸ್ಯ ರಾಜೇಶ ಮಾಜಾಳಿಕರ.

ಚರಂಡಿ ಸಮಸ್ಯೆ:

‘ಬೈತಖೋಲ್ ವಾರ್ಡ್‌ನಲ್ಲಿ ಮಳೆಗಾಲದಲ್ಲಿ ಚರಂಡಿಯ ಸಮಸ್ಯೆ ಉಲ್ಬಣಿಸುತ್ತದೆ. ಇಲ್ಲಿರುವ ಬೇರೆ ಬೇರೆ ಕಂಪನಿಗಳು ತಮ್ಮ ಆವರಣಕ್ಕೆ ಕಾಂಪೌಂಡ್ ಕಟ್ಟಿಕೊಂಡಿವೆ. ಕೆಲವು ವರ್ಷಗಳ ಹಿಂದಿನವರೆಗೆ 20-30 ಅಡಿ ಅಗಲದ ಚರಂಡಗಳಿದ್ದವು. ಈಗ ಅವುಗಳನ್ನು ಒತ್ತುವರಿ ಮಾಡಿದ್ದರಿಂದ ಕಿರಿದಾಗುತ್ತಾ ಸಾಗಿವೆ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸುತ್ತಾರೆ.

‘ಉಳಿದಂತೆ, ವಾರ್ಡ್‌ನಲ್ಲಿ ಸ್ವಚ್ಛತೆ, ರಾತ್ರಿ ಬೆಳಕಿನ ವ್ಯವಸ್ಥೆ ಚೆನ್ನಾಗಿದೆ. ಇವುಗಳಿಗೆ ನಗರಸಭೆಯ ಅಧಿಕಾರಿಗಳಿಂದಲೂ ಸ್ಪಂದನೆಯಿದೆ’ ಎಂದು ಅವರು ಹೇಳುತ್ತಾರೆ.

‘ಭೂಸ್ವಾಧೀನವಾಗಿ 60 ವರ್ಷಗಳಾದರೂ ಇನ್ನೂ ಪಹಣಿ ಪತ್ರದ ಗೊಂದಲ ಬಗೆಹರಿದಿಲ್ಲ. ನಮಗಿಲ್ಲಿ ಮನೆಗಳಿವೆ, ಅವುಗಳಿಗೆ ವಿದ್ಯುತ್, ನಗರಸಭೆಯಿಂದ ಕುಡಿಯುವ ನೀರಿನ ಸಂಪರ್ಕವಿದೆ. ಆದರೆ, ಪಹಣಿ, ಪಟ್ಟಾ ಸಿಕ್ಕಿಲ್ಲ. ಇದರಿಂದ ಯಾವುದೇ ಸೌಲಭ್ಯಗಳನ್ನು ಪಡೆದುಕೊಳ್ಳಲು ಆಗುತ್ತಿಲ್ಲ’ ಎಂದು ಸ್ಥಳೀಯ ನಿವಾಸಿ ವಿನಾಯಕ ಹರಿಕಂತ್ರ ವಿವರಿಸುತ್ತಾರೆ.

ಸುಮಾರು 5 ಸಾವಿರ ಜನಸಂಖ್ಯೆಯಿರುವ ಈ ಪ್ರದೇಶದಲ್ಲಿ 300ಕ್ಕೂ ಹೆಚ್ಚು ಮನೆಗಳಿವೆ. ಇಲ್ಲಿ 125 ವರ್ಷಗಳಷ್ಟು ಹಿಂದಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಎರಡು ಅಂಗನವಾಡಿಗಳಿವೆ.

‘ನಗರಸಭೆಗೆ ಆದಾಯ ನಷ್ಟ’:

‘ಬೈತಖೋಲ್‌ನಲ್ಲಿ ಬಂದರು ಇಲಾಖೆಯವರು ವಿವಿಧ ಕಂಪನಿಗಳಿಗೆ ಜಮೀನನ್ನು ಬೇಕಾಬಿಟ್ಟಿಯಾಗಿ ಭೋಗ್ಯಕ್ಕೆ ಕೊಟ್ಟಿದ್ದಾರೆ. ಕಂಪನಿಯವರು ನಗರಸಭೆಗೆ ಯಾವುದೇ ತೆರಿಗೆ ಪಾವತಿಸುತ್ತಿಲ್ಲ. ಈ ಬಗ್ಗೆ ಕೇಳಿದರೆ, ಬಂದರು ಇಲಾಖೆಗೇ ಪಾವತಿಸುವುದಾಗಿ ಹೇಳುತ್ತಾರೆ. ಇದರಿಂದ ನಗರಸಭೆಗೆ ಆದಾಯ ಕೊರತೆಯಾಗುತ್ತಿದೆ. ಈ ಬಗ್ಗೆ ಕಂಪನಿಗಳಿಗೆ ನೋಟಿಸ್ ಕೂಡ ಕೊಡಲಾಗಿದೆ’ ಎಂದು ರಾಜೇಶ ಮಾಜಾಳಿಕರ ಆರೋಪಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT