ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆ ತುಂಬಿಕೊಳ್ಳಲಿದೆ ‘ವರದಾ’ ನೀರು

ಗ್ರಿಡ್ ಕಾಮಗಾರಿ ನಿಧಾನ: ಪರ್ಯಾಯ ವ್ಯವಸ್ಥೆಯತ್ತ ನೀರಾವರಿ ನಿಗಮ
Last Updated 4 ಆಗಸ್ಟ್ 2022, 19:30 IST
ಅಕ್ಷರ ಗಾತ್ರ

ಶಿರಸಿ: ಬನವಾಸಿ ಹೋಬಳಿ ವ್ಯಾಪ್ತಿಯ ಜನರ ಬಹುನಿರೀಕ್ಷಿತ ಕೆರೆ ತುಂಬಿಸುವ ಯೋಜನೆ ಶೀಘ್ರವೇ ಕಾರ್ಯಾರಂಭಗೊಳ್ಳಲಿದ್ದು, ಮುಂದಿನ ಒಂದು ತಿಂಗಳೊಳಗೆ 32 ಕೆರೆಗಳಿಗೆ ವರದಾ ನದಿಯ ನೀರು ಹರಿಯಲಿದೆ.

ಎರಡು ವರ್ಷದ ಹಿಂದೆಯೇ ಕೆರೆ ತುಂಬಿಸುವ ಯೋಜನೆಯ ಶೇ.90ರಷ್ಟು ಭಾಗ ಕಾಮಗಾರಿ ಮುಗಿದಿದ್ದರೂ ವಿದ್ಯುತ್ ಸಂಪರ್ಕದ ಅಡಚಣೆಯಿಂದಾಗಿ ಕಾರ್ಯಗತಗೊಂಡಿರಲಿಲ್ಲ. ಈ ನಡುವೆ ಬನವಾಸಿಯಲ್ಲಿ ವಿದ್ಯುತ್ ಗ್ರಿಡ್ ಸ್ಥಾಪನೆ ಕಾಮಗಾರಿಯೂ ಆರಂಭಗೊಂಡಿದ್ದರಿಂದ ಅದು ಪೂರ್ಣಗೊಳ್ಳಲು ಕರ್ನಾಟಕ ನೀರಾವರಿ ನಿಗಮ ಕಾದಿತ್ತು.

ತಾಂತ್ರಿಕ ಕಾರಣದಿಂದ ಗ್ರಿಡ್ ನಿರ್ಮಾಣ ಕೆಲಸ ಪೂರ್ಣಗೊಳ್ಳಲು ಇನ್ನೂ ಹಲವು ತಿಂಗಳು ತಗಲುವ ಸಾಧ್ಯತೆ ಇದೆ ಎಂದು ಕೆ.ಪಿ.ಟಿ.ಸಿ.ಎಲ್. ಮೂಲಗಳು ತಿಳಿಸಿವೆ. ಈ ಕಾರಣಕ್ಕೆ ನೀರಾವರಿ ನಿಗ ಭಾಶಿಯ ವಿದ್ಯುತ್ ಫೀಡರ್ ನಿಂದ ಸಂಪರ್ಕ ಪಡೆಯಲು ಮುಂದಾಗಿದೆ. ಫೀಡರ್ ನಿಂದ ಸೇತುವೆ ಪಕ್ಕದಲ್ಲಿ ನಿರ್ಮಿಸಿರುವ ಪಂಪ್‍ಹೌಸ್‍ಗೆ ಪ್ರತ್ಯೇಕ ವಿದ್ಯುತ್ ತಂತಿ ಮಾರ್ಗ ನಿರ್ಮಿಸಲಾಗುತ್ತಿದೆ.

‘ಮಳೆಗಾಲದಲ್ಲಿ ಭರ್ತಿಯಾಗಿ ಹರಿಯುವ ವರದಾ ನದಿಯಿಂದ ನೀರನ್ನು ಎತ್ತಿ ಕೆರೆಗೆ ತುಂಬಿಸಲು ಎರಡು ತಿಂಗಳ ಅವಧಿ ಮಾತ್ರ ಸಿಗುತ್ತಿದೆ. ಕೆರೆಗೆ ನೀರು ಹರಿಸಲು ಎಲ್ಲ ಸಿದ್ಧತೆಗಳು ಕಳೆದ ವರ್ಷವೇ ಪೂರ್ಣಗೊಂಡಿದ್ದರೂ ವಿದ್ಯುತ್ ಸಂಪರ್ಕ ಸಮಸ್ಯೆಯಿಂದ ಸಾಧ್ಯವಾಗಿರಲಿಲ್ಲ. ಗ್ರಿಡ್ ನಿರ್ಮಾಣಕ್ಕೆ ಇನ್ನೂ ವರ್ಷಗಟ್ಟಲೆ ಕಾಯುವ ಬದಲು ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಿಕೊಂಡಿದ್ದೇವೆ’ ಎನ್ನುತ್ತಾರೆ ಕರ್ನಾಟಕ ನೀರಾವರಿ ನಿಗಮದ ಶಿಕಾರಿಪುರ ವಿಭಾಗದ ಎಂಜಿನಿಯರ್ ಸತೀಶ್.

‘ನೀರು ಸೇದಲು ಕನಿಷ್ಠ 2 ಮೆಗಾವ್ಯಾಟ್‌ ವಿದ್ಯುತ್ ಅಗತ್ಯವಿದ್ದು, 1.6 ಮೆಗಾವ್ಯಾಟ್ ಸಾಮರ್ಥ್ಯದ ಪರಿವರ್ತಕ ಸ್ಥಾಪನೆಯಾಗಬೇಕಿದೆ. ಸದ್ಯಕ್ಕೆ ಭಾಶಿ ಗ್ರಾಮದ ಫೀಡರ್ ಮೂಲಕ ಅದನ್ನು ಪಡೆದುಕೊಳ್ಳಲಾಗುವುದು. ಇದಕ್ಕಾಗಿ ಸುಮಾರು ₹ 1.5 ಕೋಟಿ ವೆಚ್ಚ ತಗುಲಲಿದ್ದು ಅದನ್ನು ನಿಗಮವೇ ಭರಿಸುತ್ತಿದೆ. ತ್ವರಿತವಾಗಿ ಕೆರೆ ತುಂಬಿಸುವ ಯೋಜನೆ ಕಾರ್ಯಗತ ಗೊಳಿಸಲಾಗುತ್ತಿದ್ದು, ಮುಂದಿನ ಹದಿನೈದು ದಿನದಲ್ಲಿ ಕೆಲಸ ಮುಗಿಯುವ ಸಾಧ್ಯತೆ ಇದೆ’ ಎಂದು ಹೇಳಿದರು.

ಎರಡನೇ ಹಂತದ ಯೋಜನೆಗೆ ಪ್ರಸ್ತಾವ:

₹ 62.58 ಕೋಟಿ ವೆಚ್ಚದಲ್ಲಿ ಬನವಾಸಿ ಹೋಬಳಿಯ 25 ಗ್ರಾಮಗಳ 32 ಕೆರೆಗಳಿಗೆ ನೀರು ತುಂಬಿಸಲು ಯೋಜನೆ ಕೈಗೊಳ್ಳಲಾಗಿದೆ. ಪಂಪ್‍ಹೌಸ್ ನಿರ್ಮಾಣ, ಪೈಪ್‍ಲೈನ್ ಜೋಡಣೆ ಸೇರಿದಂತೆ ಕಾಮಗಾರಿಗಳೆಲ್ಲ ಪೂರ್ಣಗೊಂಡಿವೆ.

‘ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಸೂಚನೆ ಮೇರೆಗೆ ಎರಡನೇ ಹಂತದಲ್ಲಿ ಬನವಾಸಿಯಿಂದ ಸ್ವಲ್ಪ ದೂರದಲ್ಲಿರುವ 48 ಕೆರೆಗಳನ್ನು ಭರ್ತಿಗೊಳಿಸಲು ಯೋಜನೆ ರೂಪಿಸಲಾಗಿದೆ. ಸುಮಾರು ₹ 200 ಕೋಟಿ ವೆಚ್ಚದ ಪ್ರಸ್ತಾವ ಕಳುಹಿಸಿದ್ದೇವೆ’ ಎಂದು ಕರ್ನಾಟಕ ನೀರಾವರಿ ನಿಗಮದ ಎಂಜಿನಿಯರ್ ಸತೀಶ್ ‘ಪ್ರಜಾವಾಣಿ’ಗೆ ತಿಳಿಸಿದರು.

---------------------

ರೈತರ ಪಾಲಿಗೆ ವರವಾಗಲಿರುವ ಕೆರೆ ತುಂಬಿಸುವ ಯೋಜನೆ ನನ್ನ ಕನಸಿನ ಕೂಸು. ಇದು ಕಾರ್ಯಗತಗೊಳ್ಳಲು ವಿಳಂಬವಾಗದಂತೆ ನೋಡಿಕೊಳ್ಳಲು ಸೂಚನೆ ನೀಡಿದ್ದೇನೆ.

ಶಿವರಾಮ ಹೆಬ್ಬಾರ

ಕಾರ್ಮಿಕ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT