ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬನವಾಸಿಯೊಂದು ಬೆರಗು’ 22ಕ್ಕೆ

Last Updated 11 ಡಿಸೆಂಬರ್ 2018, 12:33 IST
ಅಕ್ಷರ ಗಾತ್ರ

ಶಿರಸಿ: ಕನ್ನಡದ ಪ್ರಥಮ ರಾಜಧಾನಿ, ತಾಲ್ಲೂಕಿನ ಬನವಾಸಿಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಬನವಾಸಿ ಅಭಿವೃದ್ಧಿ ಪ್ರಾಧಿಕಾರದ ಅಡಿಯಲ್ಲಿ ಡಿ.22ರಂದು ‘ಬನವಾಸಿಯೊಂದು ಬೆರಗು’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಕದಂಬರ ನಾಡಿನ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡುವುದರೊಂದಿಗೆ ವಿವಿಧ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಉಪವಿಭಾಗಾಧಿಕಾರಿ ಕೆ. ರಾಜು ಮೊಗವೀರ ಅವರು, ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದರು. ಪ್ರಾಧಿಕಾರ ರಚನೆಯಾದ ಮೇಲೆ ಬಂದಿರುವ ಅನುದಾನದಲ್ಲಿ ಮೂಲ ಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡಲಾಗಿತ್ತು. ಪ್ರಸ್ತುತ ಇತಿಹಾಸದ ಅರಿವು ಮೂಡಿಸುವ ಭಾಗವಾಗಿ, ಪ್ರವಾಸೋದ್ಯಮ ಇಲಾಖೆ, ಮಧುಕೇಶ್ವರ ದೇವಾಲಯ, ಜಿಲ್ಲಾಡಳಿತದ ಸಹಕಾರದಲ್ಲಿ ಕಾರ್ಯಕ್ರಮ ಸಂಘಟಿಸಲಾಗಿದೆ ಎಂದರು.

‘ಕುಂಚದಲ್ಲಿ ಕದಂಬರ ಬನವಾಸಿ’ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳಿಗೆ ಸ್ಥಳದಲ್ಲೇ ಚಿತ್ರ ಬಿಡಿಸುವ ಸ್ಪರ್ಧೆ ನಡೆಯಲಿದೆ. ಮಧುಕೇಶ್ವರ ದೇವಾಲಯ, ಸುತ್ತಮುತ್ತಲಿನ ವಿಶೇಷತೆಗಳ ಬಗ್ಗೆ ತಜ್ಞರಿಂದ ಮಾಹಿತಿ ಪಡೆದ ನಂತರ ಸ್ಪರ್ಧಿಗಳು, ಯಾವುದಾದರೊಂದು ವಿಶೇಷವನ್ನು ಆಯ್ದುಕೊಂಡು, ಪಂಪವನದಲ್ಲಿ ನಡೆಯುವ ಸ್ಪರ್ಧೆಯಲ್ಲಿ ಚಿತ್ರ ಬಿಡಿಸಬಹುದು. ಪ್ರಾಥಮಿಕ ವಿಭಾಗದಲ್ಲಿ ಪ್ರಥಮ ₹ 3000, ದ್ವಿತೀಯ ₹ 2000, ತೃತೀಯ ₹ 1000, ಪ್ರೌಢಶಾಲಾ ವಿಭಾಗದಲ್ಲಿ ಪ್ರಥಮ ₹ 5000, ದ್ವಿತೀಯ ₹ 3000, ತೃತೀಯ ₹ 1000 ಮೊತ್ತದ ಬಹುಮಾನ ನಿಗದಿಪಡಿಸಲಾಗಿದೆ ಎಂದು ತಿಳಿಸಿದರು.

‘ಬಿಂಬದಲ್ಲಿ ಬನವಾಸಿ’ ಕಾಲೇಜು ವಿದ್ಯಾರ್ಥಿಗಳಿಗೆ ಫೋಟೊಗ್ರಫಿ ಸ್ಪರ್ಧೆ ನಡೆಯಲಿದೆ. ಬನವಾಸಿ ಮಧುಕೇಶ್ವರ ದೇವಾಲಯ, ಆವರಣದ ದೇವರು, ನದಿ, ಐತಿಹಾಸಿಕ ಮಹತ್ವವನ್ನು ತಜ್ಞರು, ವಿದ್ಯಾರ್ಥಿಗಳಿಗೆ ತಿಳಿಸುವರು. ನಂತರ ವಿದ್ಯಾರ್ಥಿಗಳು ತಾವು ಕಂಡ ವೈಶಿಷ್ಟ್ಯವನ್ನು ಕ್ಯಾಮೆರಾ ಅಥವಾ ಮೊಬೈಲ್‌ನಲ್ಲಿ ಸೆರೆಹಿಡಿಯಬಹುದು. ಅದನ್ನು ಅಲ್ಲಿಯೇ ಉಪವಿಭಾಗಾಧಿಕಾರಿ ಕಚೇರಿಯ ಸಿಬ್ಬಂದಿಗೆ ನೀಡಬೇಕು. ಈ ಸ್ಪರ್ಧೆಗೆ ಪ್ರಥಮ ₹ 5000, ದ್ವಿತೀಯ ₹ 3000, ತೃತೀಯ ₹ 2000 ಬಹುಮಾನ ಇಡಲಾಗಿದೆ. ಕಾಲೇಜು ವಿದ್ಯಾರ್ಥಿಗಳನ್ನು ಕೇಂದ್ರೀಕರಿಸಿ, ಇತಿಹಾಸ ಮತ್ತು ಶಾಸನ ಅಧ್ಯಯನ ಕಾರ್ಯಾಗಾರ ಆಯೋಜಿಸಲಾಗಿದೆ. ಇತಿಹಾಸ ತಜ್ಞ ಡಾ.ಎ.ಕೆ.ಶಾಸ್ತ್ರಿ ಅವರು ‘ಉತ್ತರ ಕನ್ನಡ ಜಿಲ್ಲೆ ಮೋಡಿ ಲಿಪಿಯ ಚಾರಿತ್ರಿಕ ದಾಖಲೆಗಳು’ ಕುರಿತು, ಶಾಸನ ತಜ್ಞ ಡಾ.ರಾಜಶೇಖರಪ್ಪ ಅವರು ‘ಬನವಾಸಿ ಚರಿತ್ರೆಗೆ ಸಂಬಂಧಿಸಿದ ಶಾಸನಗಳ ಲಿಪಿ’ ಕುರಿತು ಮಾಹಿತಿ ನೀಡುವರು. ಸಂಜೆ ಸಭಾ ಕಾರ್ಯಕ್ರಮ, ಕಾಲೇಜು ವಿದ್ಯಾರ್ಥಿಗಳ ಆಯ್ದ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT