ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾರ್ವೆಯಲ್ಲಿ ಹೆಸರಾದ ಕಾರವಾರ ರೈಲು ನಿಲ್ದಾಣ!

Last Updated 13 ಜುಲೈ 2021, 9:05 IST
ಅಕ್ಷರ ಗಾತ್ರ

ಕಾರವಾರ: ಅಚ್ಚ ಹಸಿರಿನ ಗಿಡಮರಗಳ ನಡುವೆ ಇರುವ ಶಿರವಾಡದ ಕೊಂಕಣ ರೈಲ್ವೆ ನಿಲ್ದಾಣದ ಸೌಂದರ್ಯವು ವಿದೇಶಗಳಲ್ಲೂ ಮನಸೂರೆಗೊಳ್ಳುತ್ತಿದೆ. ಪ್ರಕೃತಿ ಸೌಂದರ್ಯಕ್ಕೆ ಪ್ರಸಿದ್ಧವಾಗಿರುವ ನಾರ್ವೆ ದೇಶದ ಮಾಜಿ ಸಚಿವರೊಬ್ಬರು ತಮ್ಮ ಟ್ವಿಟರ್ ಖಾತೆಯಲ್ಲಿ ಈ ರೈಲು ನಿಲ್ದಾಣದ ಚಿತ್ರವನ್ನು ಪ್ರಕಟಿಸಿ ‘ಅದ್ಭುತ’ ಎಂದಿದ್ದಾರೆ. ಇದು ಈ ಭಾಗದವರನ್ನು ಪುಳಕಿತಗೊಳಿಸಿದೆ.

ಅಲ್ಲಿನ ಅಂತರರಾಷ್ಟ್ರೀಯ ಅಭಿವೃದ್ಧಿ ಖಾತೆಯ ಮಾಜಿ ಸಚಿವ ಎರಿಕ್ ಸೊಲ್ಹೀಮ್ ಎಂಬುವವರು, ಜುಲೈ 6ರಂದು ಕಾರವಾರದ ರೈಲು ನಿಲ್ದಾಣದ ಚಿತ್ರವನ್ನು ಟ್ವೀಟ್ ಮಾಡಿದ್ದರು. ಈ ಬಗ್ಗೆ ಬರೆದಿರುವ ಅವರು, ‘ಅದ್ಭುತ ಹಸಿರು. ಕರ್ನಾಟಕದ ಕಾರವಾರದಲ್ಲಿರುವ ಈ ರೈಲು ನಿಲ್ದಾಣವು, ಭಾರತದ ಅತ್ಯಂತ ಹಸಿರಾದ ನಿಲ್ದಾಣಗಳಲ್ಲಿ ಒಂದಾಗಿರಲೇಬೇಕು’ ಎಂದು ಮೆಚ್ಚುಗೆ ಸೂಚಿಸಿದ್ದಾರೆ.

ಇದನ್ನು ಜುಲೈ 12ರ ಸಂಜೆ 7.30ರ ತನಕ 5,877 ಮಂದಿ ‘ಲೈಕ್’ ಮಾಡಿದ್ದು, 660 ಮಂದಿ ಪುನಃ ಟ್ವೀಟ್ ಮಾಡಿದ್ದಾರೆ. ಕಾರವಾರದವರೂ ಸೇರಿದಂತೆ ನೂರಾರು ಮಂದಿ ಕಮೆಂಟ್ ಮಾಡಿದ್ದು, ಎರಿಕ್ ಅವರ ಅಭಿಪ್ರಾಯವನ್ನು ಅನುಮೋದಿಸಿದ್ದಾರೆ.

ವೈರಲ್‌ ಆಗಿರುವ ಈ ಚಿತ್ರವನ್ನು ಸೆರೆಹಿಡಿದವರು ಕಾರವಾರದ ರೋಶನ್‌ ಕಾನಡೆ. 2020ರಲ್ಲಿ ಅವರ ಕ್ಯಾಮೆರಾ ಕಣ್ಣಿನಲ್ಲಿ ಈ ಹಸಿರ ಸೊಬಗು ಸೆರೆಯಾಗಿತ್ತು.

ರೈಲು ನಿಲ್ದಾಣದಿಂದ ಸುಮಾರು ಎರಡು ಕಿಲೋಮೀಟರ್ ದೂರದಲ್ಲಿ ದಟ್ಟವಾದ ಕಾಡಿನಿಂದ ಕೂಡಿರುವ ಬೃಹತ್ ಬೆಟ್ಟವಿದೆ. ಅದನ್ನು ಸೀಳಿ ನಿರ್ಮಿಸಲಾದ ಸುರಂಗದಲ್ಲಿ ರೈಲು ಹಳಿ ಅಳವಡಿಸಲಾಗಿದೆ. ಹಾಗಾಗಿ ಮಂಗಳೂರಿನತ್ತ ಪ್ರಯಾಣಿಸುವ ಪ್ರಯಾಣಿಕರಿಗೆ ಆರಂಭದಲ್ಲೇ ವಿಶಿಷ್ಟ ಅನುಭವ ಸಿಗುತ್ತದೆ.

ಮಂಗಳೂರಿನಿಂದ ಬೆಂಗಳೂರಿಗೆ ‘ವಿಸ್ಟಾಡೋಮ್’ ಬೋಗಿಗಳ ಸಂಚಾರಕ್ಕೆ ನೈಋತ್ಯ ರೈಲ್ವೆಯು ಜುಲೈ 11ರಿಂದ ಚಾಲನೆ ನೀಡಿದೆ. ಅದೇ ಮಾದರಿಯಲ್ಲಿ ಕಾರವಾರದಿಂದ ಸಂಚರಿಸುವ ರೈಲಿಗೂ ಅಳವಡಿಸಬೇಕು ಎಂಬ ಬೇಡಿಕೆಯಿದೆ. ಅದು ಆದಷ್ಟು ಬೇಗ ಈಡೇರಿ, ಈ ಮಾರ್ಗದ ಪ್ರಕೃತಿ ಸೌಂದರ್ಯ ಸವಿಯಲು ಅವಕಾಶ ಸಿಗಲಿ ಎಂದು ರೈಲು ಪ್ರಯಾಣಿಕರು ಕಾತರದಿಂದ ಕಾಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT