ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಯಂಗಳದಲ್ಲಿ ಜೇನು ಕೃಷಿ

ರೈತರಿಗೆ ಉಪ ಆದಾಯ; ಬೆಳೆ ಹೆಚ್ಚಳಕ್ಕೆ ಉಪಾಯ
Last Updated 27 ಮೇ 2019, 12:08 IST
ಅಕ್ಷರ ಗಾತ್ರ

ಶಿರಸಿ: ಯಲ್ಲಾಪುರ ತಾಲ್ಲೂಕು ಕೋಟೆಮನೆಯಲ್ಲಿ ರಸ್ತೆ ಅಂಚಿನಲ್ಲಿ ಸರ್ಕಾರಿ ಶಾಲೆಯಿದೆ. ಈ ಶಾಲೆಯ ಎದುರು ಸಾಲಾಗಿ ಸಿದ್ದಿಗರ ಮನೆಗಳಿವೆ. ಇಲ್ಲಿ ಒಂದು ಸುತ್ತು ಓಡಾಡಿದರೆ ಜೇನಿನ ಝೇಂಕಾರ ಕಿವಿಗೆ ತಟ್ಟುತ್ತದೆ.

ಕಾಡಿನ ಸಾಂಗತ್ಯದಲ್ಲಿ ಬದುಕುವ ಸಿದ್ದಿ ಸಮುದಾಯದವರಿಗೆ ಜೇನುಗೂಡು, ಜೇನುತುಪ್ಪ ತೆಗೆಯುವ ಕಲೆ ಇವೆಲ್ಲ ರಕ್ತಗತವಾಗಿಯೇ ಬಂದಿರುತ್ತದೆ. ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುವ ಇವರು ಉಪ ಆದಾಯವಾಗಿ ಮನೆಯಂಗಳದಲ್ಲಿ ಜೇನು ಸಾಕಣೆ ಮಾಡುತ್ತಾರೆ. ಇರುವ 2–3 ಗುಂಟೆ ಜಾಗದಲ್ಲಿ ಮನೆಯ ಸುತ್ತ ಜೇನು ಪೆಟ್ಟಿಗೆಗಳನ್ನು ಇಟ್ಟಿದ್ದಾರೆ.

ಪುಗಡಿ ನೃತ್ಯ ಕಲಾವಿದೆ ಲಕ್ಷ್ಮಿ ಸಿದ್ದಿ ಅವರ ಮನೆ ಎದುರಿನ ಸಣ್ಣ ಜಾಗದಲ್ಲಿ ಎಂಟು ಜೇನು ಪೆಟ್ಟಿಗೆ ಇಟ್ಟಿದ್ದಾರೆ. ಪೆಟ್ಟಿಗೆ ಮುಚ್ಚಳವನ್ನು ತೆಗೆದು ತೋರಿಸಿದ ಅವರು, ಫ್ರೇಮ್ ಅನ್ನು ಕೈಯಲ್ಲಿ ಹಿಡಿದು, ‘ಬನ್ನಿ ನೀವು ಹಿಡಿದುಕೊಳ್ಳಬಹುದು, ಹುಳುಗಳು ಕಚ್ಚುವುದಿಲ್ಲ’ ಎನ್ನುತ್ತ ಜೇನು ಸಾಕಣೆ ಕುರಿತು ಮಾಹಿತಿ ನೀಡಿದರು.

‘ನಾಲ್ಕು ವರ್ಷಗಳ ಹಿಂದೆ ಒಂದು ಪೆಟ್ಟಿಗೆಯಿಂದ ಜೇನು ಸಾಕಣೆ ಶುರು ಮಾಡಿದವು. ಈಗ ಅಂಗಳ ತುಂಬ ಪೆಟ್ಟಿಗೆಗಳಿವೆ. ಸಮೀಪವೇ ಕಾಡು ಇರುವುದಕ್ಕೆ ಜೇನ್ನೊಣಗಳಿಗೆ ಮಕರಂದಕ್ಕೆ ಕೊರತೆಯಾಗುವುದಿಲ್ಲ. ಜೇನು ಮಕರಂದ ಸಂಗ್ರಹಿಸುವಾಗ ಹೂವುಗಳಿಗೆ ಪರಾಗಸ್ಪರ್ಶವನ್ನೂ ಮಾಡುತ್ತದೆ. ಹೀಗಾಗಿ ಜೇನಿದ್ದರೆ, ಕೃಷಿ ಬೆಳೆಯೂ ಅಧಿಕ’ ಎಂದು ಅವರು ಪಾಠ ಮಾಡಿದರು.

‘ಸಂಸಾರ ಕೋಣೆಯಲ್ಲಿ ಸಂಗ್ರಹವಾಗುವ ತುಪ್ಪ ತೆಗೆಯಬಾರದು. ಅದು ಶ್ರಮಪಡುವ ಜೇನಿಗೆ ಮೀಸಲಿಡಬೇಕು. ಮೇಲೆ ಶೇಖರಣೆಯಾಗುವ ತುಪ್ಪ ಮಾತ್ರ ನಮ್ಮ ಬಳಕೆಗೆ ಸಿಗುತ್ತದೆ. ನಾನು ತುಪ್ಪ ತೆಗೆಯುವುದು ಕಡಿಮೆ. ಮಗ ಅನಂತನೇ ಆ ಕೆಲಸ ಮಾಡುತ್ತಾನೆ. ಒಂದು ಪೆಟ್ಟಿಗೆಯಿಂದ ಒಮ್ಮೆ 4–5 ಕೆ.ಜಿ ತುಪ್ಪ ಸಿಗುತ್ತದೆ. ಗಾಳಿ–ಮಳೆಯಿದ್ದರೆ ಹುಳುಗಳು ಕೆಲಸಕ್ಕೆ ಹೋಗುವುದಿಲ್ಲ. ಆಗ ನಾವೇ ಸಕ್ಕರೆ ಪಾಕವಿಟ್ಟು, ಅವಕ್ಕೆ ಆಹಾರ ಕೊಡಬೇಕು’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

’ನಮ್ಮವರು ಜೇನು ಪರಿಣಿತರು. ಹೀಗಾಗಿ ನಾವು ತೆಗೆಯುವ ತುಪ್ಪಕ್ಕೆ ಬೇಡಿಕೆ ಹೆಚ್ಚು. ಬೆಂಗಳೂರು, ಮಂಗಳೂರಿನಿಂದ ಮನೆ ಬಾಗಿಲಿಗೆ ಬಂದು ಜೇನುತುಪ್ಪ ಒಯ್ಯುತ್ತಾರೆ. ಬೆಂಗಳೂರಿನ ಸ್ವಾಮೀಜಿಯೊಬ್ಬರು ಪ್ರತಿವರ್ಷ ನಮ್ಮ ಮನೆಗೆ ಬಂದು ಜೇನುತುಪ್ಪ ಖರೀದಿಸುತ್ತಾರೆ. ಕೆ.ಜಿ.ಯೊಂದಕ್ಕೆ ₹ 450ರಷ್ಟು ದರವಿದೆ’ ಎಂದು ಅವರು ಬೇಡಿಕೆಯ ಪರಿಯನ್ನು ಬಿಚ್ಚಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT