ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಕೋಲ | ಸೌಕರ್ಯವಿಲ್ಲದೇ ಬೆಂದು ಹೋದ ಬೇಣದಳ್ಳಿ

ಮೊಗಟಾ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗ್ರಾಮ: ದುರ್ಗಮ ಹಾದಿಯಲ್ಲಿ ನಿತ್ಯವೂ ಸಂಚಾರ
Last Updated 2 ಡಿಸೆಂಬರ್ 2019, 19:45 IST
ಅಕ್ಷರ ಗಾತ್ರ

ಕಾರವಾರ: ‘ಪಟ್ಟಣಕ್ಕೆ ಹೋಗಲುಯಾವುದಾದರೊಂದು ವಾಹನ ಸಿಗಬೇಕೆಂದರೆ ದುರ್ಗಮ ಕಾಡಿನಲ್ಲಿ 10 ಕಿಲೋಮೀಟರ್ ನಡೆಯಬೇಕು. ಅನಾರೋಗ್ಯ ಕಾಡಿದರೆ ರೋಗಿಯನ್ನು ಕಂಬಳಿಯಲ್ಲಿ ಹೊತ್ತುಕೊಂಡು ಹೋಗಬೇಕು. ನಮ್ಮ ತಾತನ ಕಾಲದಿಂದಲೂ ಇದನ್ನು ಅನುಭವಿಸುತ್ತಾ ಬಂದಿದ್ದೇವೆ. ಮುಂದೆ ನಮ್ಮ ಮೊಮ್ಮಕ್ಕಳೂ ಇದೇ ವ್ಯವಸ್ಥೆಯಲ್ಲಿ ಕಳೆಯಬೇಕಾ..?’

– ಇದು ಅಂಕೋಲಾ ತಾಲ್ಲೂಕಿನ ಮೊಗಟಾ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬೇಣದಳ್ಳಿ ಎಂಬ ಕುಗ್ರಾಮದ ಜನರ ಚಿಂತಾಜನಕ ಪ್ರಶ್ನೆ.ತಾಲ್ಲೂಕಾ ಕೆಂದ್ರದಿಂದ 40 ಕಿಲೋಮೀಟರ್ ದೂರದಲ್ಲಿರುವ ಇಲ್ಲಿಯ ಜನರು ದಶಕಗಳಿಂದ ಮೂಲಸೌಕರ್ಯಗಳಿಂದ ವಂಚಿತರಾಗುತ್ತಲೇ ಬಂದಿದ್ದಾರೆ. 200ಕ್ಕೂ ಹೆಚ್ಚು ಜನಸಂಖ್ಯೆಯಿದೆ. ಎಲ್ಲರೂ ಮರಾಠಿ ಸಮುದಾಯದವರೇ ಆಗಿದ್ದಾರೆ.

‘ತಂತ್ರಜ್ಞಾನಗಳು ಬೆಳೆದಿರಬಹುದು, ನಗರಗಳು ಅಭಿವೃದ್ಧಿಯಾಗಿರಬಹುದು. ಆದರೆ, ನಾವು ಮಾತ್ರ ಕತ್ತಲೆಯಲ್ಲೇ ಇದ್ದೇವೆ. ಗ್ರಾಮೀಣ ಭಾಗದ ಜನರ ಸಮಸ್ಯೆಗಳಿಗೆ ಸ್ಪಂದಿಸಲು ಜನಪ್ರತಿನಿಧಿಗಳು ಆಸಕ್ತಿ ತೋರುವುದಿಲ್ಲ. ಕೆಲವು ವರ್ಷಗಳ ಹಿಂದೆ ಜೆ.ಸಿ.ಬಿ. ಯಂತ್ರವನ್ನು ತಂದು ಕಚ್ಚಾರಸ್ತೆಯನ್ನೇನೋ ಮಾಡಿ ಹೋದರು. ಇಲ್ಲಿತನಕ ಇದರ ಮೇಲೆ ವಾಹನ ಸಂಚಾರ ಸಾಧ್ಯವಾಗಿಲ್ಲ. ಹೊಂಡ ಹಾಗೂ ಕಲ್ಲುಗಳಿಂದ ತುಂಬಿದ ರಸ್ತೆ ಮೇಲೆ ಬೈಕ್ ಓಡಿಸಬೇಕೆಂದರೂ ಪ್ರಾಣದ ಹಂಗು ತೊರೆಯಬೇಕಾಗುತ್ತದೆ’ ಎಂದು ಗ್ರಾಮಸ್ಥ ರಾಘವೇಂದ್ರ ಲುಮ್ಮ ಮರಾಠಿ ಸಮಸ್ಯೆಯನ್ನು ಹೇಳಿಕೊಂಡರು.

‘ಮಳೆಗಾಲ ಮುಗಿದ ಮೇಲೆ ಪ್ರತಿವರ್ಷ ಪಂಚಾಯ್ತಿ ಅನುದಾನವನ್ನು ಈ ರಸ್ತೆಗೆ ಸುರಿಯಲಾಗುತ್ತದೆ. ಮಣ್ಣು ಹಾಕಿ ಹೊಂಡಗಳನ್ನು ಮುಚ್ಚಿದರೆ ಅದುತಾತ್ಕಾಲಿಕ ಮಾತ್ರ. ಪುನಃಮಳೆಗಾಲದಲ್ಲಿ ಯಥಾಸ್ಥಿತಿಗೆ ತಲುಪಿರುತ್ತದೆ. ಬದಲಾಗಿ ಅದೇ ಅನುದಾನವನ್ನು ಕಾಂಕ್ರೀಟ್ ರಸ್ತೆಗೆವಿನಿಯೋಗಿಸಿದರೆ ನಾಲ್ಕೈದು ವರ್ಷದೊಳಗೆಸುಸಜ್ಜಿತ ಹಾಗೂಶಾಶ್ವತ ರಸ್ತೆ ನಿರ್ಮಾಣವಾಗುತ್ತದೆ. ಈ ಬಗ್ಗೆ ಜನಪ್ರತಿನಿಧಿಗಳಿಗೂ ಹಲವು ಬಾರಿ ಮನವರಿಕೆ ಮಾಡಿದ್ದೇವೆ. ಆದರೂ ನಿರ್ಲಕ್ಷ್ಯ ವಹಿಸಿದ್ದಾರೆ’ ಎಂದು ನಾಗೇಶ ಜಾನಗ್ಯಾ ಮರಾಠಿ ಅಸಮಾಧಾನ ವ್ಯಕ್ತಪಡಿಸಿದರು.

ಕಾನನದಲ್ಲಿ ಹೆರಿಗೆ: ‘ಬೇಣದಳ್ಳಿ ಗ್ರಾಮದ ಜನ ಪ್ರತಿಯೊಂದು ಕೆಲಸ ಕಾರ್ಯಗಳಿಗೂ ಕುಮಟಾವನ್ನೇ ಅವಲಂಬಿಸಬೇಕಿದೆ. ದಿನಸಿ ಸಾಮಗ್ರಿ ಬೇಕೆಂದರೂ ಏಳೆಂಟು ಕಿಲೋಮೀಟರ್ ನಡೆದು, ಬ್ರಹ್ಮೂರಿನಿಂದ ಬಸ್‌ ಮೂಲಕ ಪಟ್ಟಣಕ್ಕೆ ಹೋಗಬೇಕು. ಅನಾರೋಗ್ಯ ಕಾಡಿದರೆ ಇಲ್ಲಿಗೆ ಯಾವ ವಾಹನವೂ ಬರುವುದಿಲ್ಲ. ರೋಗಿಗಳನ್ನು ಕಂಬಳಿಯಲ್ಲೇ ಹೊರಬೇಕು. ನಾಲ್ಕೈದು ವರ್ಷಗಳ ಹಿಂದೆ ಗರ್ಭಿಣಿಯೊಬ್ಬರನ್ನು ಕಂಬಳಿಯಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಕಾಡಿನ ಮಧ್ಯದಲ್ಲೇ ಅವರಿಗೆ ಹೆರಿಗೆಯಾಗಿತ್ತು. ಇಂತಹ ಘಟನೆಗಳು ನಡೆದ ಮೇಲೆಯೂ ಜನಪ್ರತಿನಿಧಿಗಳು ಎಚ್ಚೆತ್ತುಕೊಂಡಿಲ್ಲ’ ಎಂದು ಗ್ರಾಮಸ್ಥ ವೆಂಕಟ್ರಮಣ ಮರಾಠಿ ಬೇಸರಿಸುತ್ತಾರೆ.

ಸೇತುವೆ ಇಲ್ಲದೇ ಸಂಪರ್ಕಕಡಿತ: ‘ಬೇಣದಳ್ಳಿ ಗ್ರಾಮಕ್ಕೆ ಹೊಂದಿಕೊಂಡಿರುವ ಅಗ್ರಹಾರ, ಶೇಡೂರು, ಕಮ್ಮಿಕೇರಿ ಭಾಗದ ಜನರು ಮಳೆಗಾಲದಲ್ಲಿ ಅಕ್ಷರಶಃ ಹೈರಾಣಾಗುತ್ತಾರೆ.ಇಲ್ಲಿನ ಹಳ್ಳವು ಉಕ್ಕಿ ಹರಿಯುವುದರಿಂದ ಸಂಪರ್ಕವೇ ಗ್ರಾಮಗಳ ನಡುವಿನ ಸಂಪರ್ಕವೇ ಕಡಿತಗೊಂಡು ಬಿಡುತ್ತದೆ. ನಾವು ತಾತ್ಕಾಲಿಕ ಕಾಲುಸಂಕವನ್ನು ನಿರ್ಮಿಸಿಕೊಂಡರೂ ಅದು ನೀರಿನ ರಭಸಕ್ಕೆ ಕೊಚ್ಚಿ ಹೋಗುತ್ತದೆ. ನಮಗೆ ಈ ಮಳೆಗಾಲದೊಳಗೆ ಸೇತುವೆಯ ಅವಶ್ಯಕತೆಯೂ ಜಾಸ್ತಿ ಇದೆ’ ಎನ್ನುತ್ತಾರೆಶೇಡೂರು ಗ್ರಾಮದ ನಾರಾಯಣ ಮರಾಠಿ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಸುಜಾತಾ ಗಾಂವಕರ, ‘ಈ ಭಾಗದಲ್ಲಿ ತೂಗು ಸೇತುವೆ ನಿರ್ಮಿಸಲು ಅಧಿಕಾರಿಗಳು ಪರಿಶೀಲನೆ ನಡೆಸಿ ಹೋದ ಬಗ್ಗೆ ಮಾಹಿತಿಯಿದೆ. ಇಲ್ಲಿಯ ಪರಿಸ್ಥಿತಿ ನಮಗೂ ತಿಳಿದಿದೆ. ಸೇತುವೆ ನಿರ್ಮಾಣಕ್ಕಾಗಿ ನಾವೂ ಒತ್ತಾಯಿಸುತ್ತೇವೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT