ಗುರುವಾರ , ನವೆಂಬರ್ 21, 2019
21 °C
2017–18ನೇ ಸಾಲಿನ ಇನ್ನೂ 162 ಜನರ ಬಾಂಡ್ ಬಾಕಿ

393 ಮಕ್ಕಳಿಗೆ ಭಾಗ್ಯಲಕ್ಷ್ಮಿ ಬಾಂಡ್ ವಿತರಣೆ

Published:
Updated:
Prajavani

ಶಿರಸಿ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ನೀಡುವ ಭಾಗ್ಯಲಕ್ಷ್ಮಿ ಬಾಂಡ್ ಅನ್ನು ತಾಲ್ಲೂಕಿನ 393 ಫಲಾನುಭವಿಗಳಿಗೆ ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಗುರುವಾರ ಇಲ್ಲಿ ವಿತರಿಸಿದರು.

ನಂತರ ಮಾತನಾಡಿದ ಅವರು, ‘ಈ ಹಿಂದೆ ವಿತರಿಸಿದ್ದ 11 ಬಾಂಡ್ ಸೇರಿ, ಒಟ್ಟು 404 ಫಲಾನುಭವಿಗಳಿಗೆ 2017–18ನೇ ಸಾಲಿನ ಭಾಗ್ಯಲಕ್ಷ್ಮಿ ಬಾಂಡ್ ವಿತರಿಸಲಾಗಿದೆ. ಇನ್ನೂ 162 ಬಾಂಡ್‌ಗಳು ಬರಬೇಕಾಗಿವೆ. 2018–19ನೇ ಸಾಲಿನಲ್ಲಿ 466 ಜನರಿಗೆ ಬಾಂಡ್ ವಿತರಿಸುವುದು ಬಾಕಿಯಿದೆ. ಆದಷ್ಟು ಶೀಘ್ರ ವಿತರಣೆಗೆ ಸರ್ಕಾರ ಕ್ರಮ ಕೈಗೊಳ್ಳುತ್ತದೆ’ ಎಂದರು.

ಸ್ತ್ರೀಭ್ರೂಣ ಹತ್ಯೆ ತಡೆಯುವ ನಿಟ್ಟಿನಲ್ಲಿ 2006–07ನೇ ಸಾಲಿನಿಂದ ಈ ಯೋಜನೆಯನ್ನು ಆರಂಭಿಸಲಾಗಿದೆ. ವಿವಿಧ ಕಾರಣಗಳಿಂದ ಹಿಂದೆ ಬಿದ್ದಿದ್ದ ಬಾಂಡ್ ವಿತರಣೆಗೆ ಹೊಸ ಸರ್ಕಾರ ವೇಗ ನೀಡಿದೆ. ಫಲಾನುಭವಿ ಮಗುವಿನ ಹೆಸರಿನಲ್ಲಿ ₹ 1ಲಕ್ಷ ವಿಮೆ ಮಾಡಿಸಲಾಗುತ್ತದೆ. ಮಗುವಿಗೆ 18 ವರ್ಷ ತುಂಬುವ ಹೊತ್ತಿಗೆ ಅದು ಅವರಿಗೆ ಸಿಗುತ್ತದೆ. ಸ್ವಾಭಿಮಾನಿ ಬದುಕು ಕಟ್ಟಿಕೊಳ್ಳಲು ಈ ಯೋಜನೆ ಸಹಕಾರಿಯಾಗಿದೆ ಎಂದು ಹೇಳಿದರು.

ಸಮಾಜದಲ್ಲಿ ಲಿಂಗಾನುಪಾತದಲ್ಲಿ ಅಗುತ್ತಿರುವ ವ್ಯತ್ಯಾಸ ಹೋಗಲಾಡಿಸುವ ಜತೆಗೆ ಹೆಣ್ಣು ಮಗುವಿನ ಬಗ್ಗೆ ಕುಟುಂಬದ ಸದಸ್ಯರಲ್ಲಿ ಪ್ರೀತಿಯ ಭಾವ ಮೂಡಿಸುವ ಉದ್ದೇಶದಿಂದ ಸರ್ಕಾರ ಈ ಯೋಜನೆ ಅನುಷ್ಠಾನಗೊಳಿಸಿದೆ. ಪಾಲಕರು ಮಕ್ಕಳ ಆರೋಗ್ಯ, ದೈಹಿಕ ಸದೃಢತೆಗೆ ಆದ್ಯತೆ ನೀಡಬೇಕು. ಆಹಾರ ಪದ್ಧತಿ ಸರಿಯಾಗಿದ್ದರೆ ಕುಟುಂಬ ಆರೋಗ್ಯವಾಗಿರುತ್ತದೆ ಎಂದು ಸಲಹೆ ಮಾಡಿದರು.

ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಶ್ರೀಲತಾ ಕಾಳೇರಮನೆ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯ್ತಿ ಸದಸ್ಯೆಯರಾದ ಉಷಾ ಹೆಗಡೆ, ಪ್ರಭಾವತಿ ಗೌಡ, ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷ ಚಂದ್ರು ದೇವಾಡಿಗ, ಸದಸ್ಯರಾದ ವಿನಾಯಕ ಭಟ್ಟ, ನಾಗರಾಜ ಶೆಟ್ಟಿ, ನರಸಿಂಹ ಹೆಗಡೆ, ಉಪವಿಭಾಗಾಧಿಕಾರಿ ಡಾ.ಈಶ್ವರ ಉಳ್ಳಾಗಡ್ಡಿ, ತಹಶೀಲ್ದಾರ್ ಎಂ.ಆರ್.ಕುಲಕರ್ಣಿ, ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಎಫ್.ಜಿ.ಚಿನ್ನಣ್ಣನವರ್ ಇದ್ದರು. ಶಿಶುಅಭಿವೃದ್ಧಿ ಯೋಜನಾಧಿಕಾರಿ ದತ್ತಾತ್ರೇಯ ಭಟ್ಟ ಸ್ವಾಗತಿಸಿದರು.

ಪ್ರತಿಕ್ರಿಯಿಸಿ (+)