ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೃಷಿಗೆ ಪೂರಕ ವಾತಾವರಣ ಕಲ್ಪಿಸಿ’

ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಭಾರತೀಯ ಕಿಸಾನ್ ಸಂಘದ ಪ್ರತಿಭಟನೆ
Last Updated 28 ಜೂನ್ 2022, 11:26 IST
ಅಕ್ಷರ ಗಾತ್ರ

ಕಾರವಾರ: ನದಿ ಜೋಡಣೆ ಯೋಜನೆಯನ್ನು ಹಿಂಪಡೆಯುವುದು, ಕೃಷಿಗೆ ಪೂರಕವಾದ ಯೋಜನೆಗಳನ್ನು ಜಾರಿ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಭಾರತೀಯ ಕಿಸಾನ್ ಸಂಘದಿಂದ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ಜಿಲ್ಲಾಧಿಕಾರಿ ಕಚೇರಿಯ ಬಳಿ ಸೇರಿದ ವಿವಿಧ ತಾಲ್ಲೂಕು ಘಟಕಗಳ ಪದಾಧಿಕಾರಿಗಳು, ಆಯಾ ಭಾಗದಲ್ಲಿ ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ವಿವರಿಸಿದರು. ಬಳಿಕ ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವೀರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಮ ಗಾಂವ್ಕರ್ ಮಾತನಾಡಿ, ‘ಜಲ ವಿದ್ಯುತ್, ಅಣು ವಿದ್ಯುತ್, ಜಲಾಶಯಗಳು, ನೌಕಾನೆಲೆ, ಅಭಯಾರಣ್ಯದಂಥ ಬೃಹತ್ ಯೋಜನೆಗಳಿಂದ ಜಿಲ್ಲೆಯ ರೈತರು ತತ್ತರಿಸಿದ್ದಾರೆ. ಆದರೆ, ಅವರಿಗೆ ಸರ್ಕಾರದಿಂದ ಸೂಕ್ತವಾದ ಮನ್ನಣೆ ಸಿಗುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಜಿಲ್ಲೆಯಲ್ಲಿ ಕೃಷಿ, ತೋಟಗಾರಿಕೆ, ಹೈನುಗಾರಿಕೆ ಸೇರಿದಂತೆ ಕೃಷಿಗೆ ಸಂಬಂಧಿಸಿದ ವಿವಿಧ ಇಲಾಖೆಗಳಲ್ಲಿ ಶೇ 70ರಷ್ಟು ಹುದ್ದೆಗಳು ಖಾಲಿ ಇವೆ. ಇದರಿಂದ ರೈತರಿಗೆ ತಲುಪಬೇಕಾದ ಯೋಜನೆಗಳು ಮತ್ತು ಮಾಹಿತಿಗಳು ಸರಿಯಾಗಿ ತಲುಪುತ್ತಿಲ್ಲ. ಇವುಗಳನ್ನು ವಿಶೇಷ ಆದ್ಯತೆಯ ಮೇರೆಗೆ ಭರ್ತಿ ಮಾಡಬೇಕು’ ಎಂದು ಒತ್ತಾಯಿಸಿದರು.

‘ಯಲ್ಲಾಪುರ ತಾಲೂಕಿನ ಕಳಚೆಯಲ್ಲಿ ಭೂಕುಸಿತದಿಂದ ಹಾನಿಗೊಳಗಾದ ರೈತರಿಗೆ ಪರಿಹಾರ ಮತ್ತು ಪುನರ್ವಸತಿ ಒದಗಿಸಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಬಿ.ಎಸ್.ಎನ್.ಎಲ್ ದೂರವಾಣಿ ಸಂಪರ್ಕ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ವಿದ್ಯುತ್ ಇದ್ದಾಗ ಮಾತ್ರ ಮೊಬೈಲ್ ಟವರ್‌ಗಳು ಕೆಲಸ ಮಾಡುತ್ತಿವೆ. ಹಾಗಾಗಿ ಬ್ಯಾಟರಿ, ಜನರೇಟರ್‌ನಂಥ ಪರ್ಯಾಯ ವ್ಯವಸ್ಥೆಗಳನ್ನು ತಕ್ಷಣವೇ ಮಾಡಿ ದೂರವಾಣಿ ವ್ಯವಸ್ಥೆ ಸರಿಪಡಿಸಬೇಕು’ ಎಂದು ಆಗ್ರಹಿಸಿದರು.

‘ಭಟ್ಕಳ ತಾಲ್ಲೂಕಿನ ಕೆಲವು ಗ್ರಾಮೀಣ ಪ್ರದೇಶಗಳನ್ನು ಶರಾವತಿ ಅಭಯಾರಣ್ಯಕ್ಕೆ ಸೇರಿಸುವ ಹುನ್ನಾರ ನಡೆಯುತ್ತಿದೆ. ಈ ಯೋಜನೆಯನ್ನು ಕೈಬಿಡಬೇಕು. ಈಗಾಗಲೇ ಜಾರಿಯಾಗಿರುವ ದಾಂಡೇಲಿ ಅಭಯಾರಣ್ಯ ಪ್ರದೇಶದ ಗ್ರಾಮೀಣ ಪ್ರದೇಶಗಳಿಗೆ ಮೂಲಸೌಕರ್ಯ ಒದಗಿಸಲು ಅನುಮತಿ ನೀಡಬೇಕು’ ಎಂದು ಹೇಳಿದರು.

‘ಕಾಲುವೆ ತೆರವುಗೊಳಿಸಿ’:

‘ಕುಮಟಾ ತಾಲ್ಲೂಕಿನ ಹಂದಿಗೋಣದಲ್ಲಿ ಕೆಲವು ಉದ್ಯಮಿಗಳು ಉಪ್ಪುನೀರು ಸಾಗುವ ರಾಜ ಕಾಲುವೆಯನ್ನು ಅತಿಕ್ರಮಿಸಿ ಮುಚ್ಚಿದ್ದಾರೆ. ಇದರಿಂದ ಉಪ್ಪು ನೀರು ಕೃಷಿ ಜಮೀನಿಗೆ ಬರುತ್ತಿದೆ. ದೇಶದಲ್ಲಿಯೇ ವಿಶಿಷ್ಟವಾದ ಸಿಹಿ ಈರುಳ್ಳಿ ಬೆಳೆಯಲು ಇದರಿಂದ ಅಡ್ಡಿಯಾಗಿದೆ. ಕೂಡಲೇ ಒತ್ತುವರಿಯನ್ನು ತೆರವುಗೊಳಿಸಿ ರಾಜಕಾಲುವೆ ಪುನರ್ ನಿರ್ಮಿಸಿ ಕೊಡಬೇಕು. ಇಲ್ಲದಿದ್ದರೆ ಕಾನೂನು ಕ್ರಮಕ್ಕೆ ಮುಂದಾಗುವುದು ಅನಿವಾರ್ಯ’ ಎಂದು ಶಿವರಾಮ ಗಾಂವ್ಕರ್ ಎಚ್ಚರಿಕೆ ನೀಡಿದ್ದಾರೆ.

ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ ನರಸಿಂಹ ಸಾತೊಡ್ಡಿ, ಕೋಶಾಧ್ಯಕ್ಷ ಗೋಪಾಲಕೃಷ್ಣ ಭಟ್ಟ ಬಾಳೆಗದ್ದೆ, ಕಾರ್ಯದರ್ಶಿ ಗಣಪತಿ ಪಟಗಾರ, ವಿವಿಧ ತಾಲ್ಲೂಕುಗಳ ಪದಾಧಿಕಾರಿಗಳಾದ ಡಿ.ಎಂ.ನಾಯ್ಕ, ರಾಘವೇಂದ್ರ ಗಾಂವ್ಕರ್ ಹೆಗ್ಗಾರ್, ಶ್ರೀಧರ ಭಾಗ್ವತ, ಎಂ.ಆರ್.ಹೆಗಡೆ, ಗೋಪಾಲ ಭಟ್ಟ, ನಾರಾಯಣ ಭಟ್ಟ, ವಿಘ್ನೇಶ್ವರ ಭಟ್ಟ, ಸುದರ್ಶನ, ಶಿವಪ್ರಸಾದ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT