ಮಂಗಳವಾರ, ಅಕ್ಟೋಬರ್ 15, 2019
26 °C
ಭಟ್ಕಳದ ಶಂಕಿತ ಭಯೋತ್ಪಾದಕ ಅಫಾಖ್ ಲಂಕಾ ಪತ್ನಿ ವೀಸಾ ರದ್ದು

ಪಾಕಿಸ್ತಾನಕ್ಕೆ ತೆರಳಿದ ಅರ್ಸಲಾ ಅಬೀರಾ

Published:
Updated:

ಭಟ್ಕಳ: ಶಂಕಿತ ಭಯೋತ್ಪಾದಕ ಎಂದು ಬಂಧಿಸಲಾಗಿದ್ದ ಪಟ್ಟಣದ ಆಝಾದ್ ನಗರದ ಡಾ.ಅಫಾಖ್ ಲಂಕಾ ಅವರ ಪತ್ನಿ ಅರ್ಸಲಾ ಅಬೀರಾ, ಸೆಪ್ಟೆಂಬರ್ ಕೊನೆಯ ವಾರದಲ್ಲಿ ಪಾಕಿಸ್ತಾನಕ್ಕೆ ಹಿಂತಿರುಗಿದ್ದಾರೆ.

ಅವರ ವೀಸಾ ಅವಧಿ ಮುಗಿದಿದ್ದ ಕಾರಣ ಮರಳಿ ಹೋಗುವಂತೆ ವಿದೇಶಾಂಗ ಸಚಿವಾಲಯ ಸೂಚಿಸಿತ್ತು.

ಪಾಕಿಸ್ತಾನದ ಅರ್ಸಲಾ ಅಬೀರಾ ಅವರನ್ನು ಸುಮಾರು 12 ವರ್ಷಗಳ ಹಿಂದೆ ಡಾ.ಅಫಾಖ್ ಲಂಕಾ ಮದುವೆಯಾಗಿ ಭಟ್ಕಳಕ್ಕೆ ಕರೆದುಕೊಂಡು ಬಂದಿದ್ದರು.

ಪ್ರತಿ 11 ತಿಂಗಳಿಗೊಮ್ಮೆ ಅವರ ವೀಸಾವನ್ನು ನವೀಕರಣ ಮಾಡಲಾಗುತ್ತಿತ್ತು. ಆದರೆ, 2015ರಲ್ಲಿ ಶಂಕಿತ ಭಯೋತ್ಪಾದಕ ಎಂದು ಅಫಾಖ್ ಅವರನ್ನು ಬೆಂಗಳೂರು ಸಿ.ಸಿ.ಬಿ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಅಲ್ಲದೇ ಆಗಾಗ ಪಾಕಿಸ್ತಾನಕ್ಕೆ ಹೋಗಿ ಬರುತ್ತಿದ್ದ ಅರ್ಸಲಾ ಅವರನ್ನೂ ವಿಚಾರಣೆಗೆ ಒಳಪಡಿಸಿದ್ದರು. 

ಎರಡು ತಿಂಗಳ ಹಿಂದೆ ಅವಧಿ ಮುಗಿದ ವೀಸಾದ ನವೀಕರಣಕ್ಕಾಗಿ ಅವರು ವಿದೇಶಾಂಗ ಇಲಾಖೆಗೆ ಕೋರಿದ್ದರು. ಆದರೆ, ಅವರ ಅರ್ಜಿಯನ್ನು ತಿರಸ್ಕರಿಸಲಾಗಿತ್ತು. ಅವರನ್ನು ಪೊಲೀಸ್ ರಕ್ಷಣೆಯಲ್ಲಿ ದೇಶದ ಗಡಿಯವರೆಗೆ ಕಳುಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು, ‘ಅರ್ಸಲಾ ಅವರ ವೀಸಾವನ್ನು ರದ್ದು ಮಾಡಲಾಗಿದ್ದು, ದೇಶ ತೊರೆಯಲು ಅನುಮತಿ ಸಿಕ್ಕಿದೆ. ಸುಮಾರು 20 ದಿನಗಳ ಹಿಂದೆಯೇ ಅವರು ಪಾಕಿಸ್ತಾನಕ್ಕೆ ಹೋಗಿದ್ದಾರೆ’ ಎಂದು ಸ್ಪಷ್ಟಪಡಿಸಿದರು.

Post Comments (+)