ಶನಿವಾರ, ಡಿಸೆಂಬರ್ 7, 2019
22 °C
ಭಟ್ಕಳದಲ್ಲಿ ಪ್ರಯಾಣಿಕರಿಗೆ ನಿತ್ಯವೂ ತಪ್ಪದ ಗೋಳು: ಮಳೆ, ಬಿಸಿಲಿಗೆ ಕಂಗಾಲು

ವೇಗ ಪಡೆಯದ ಭಟ್ಕಳ ಬಸ್ ನಿಲ್ದಾಣ ಕಾಮಗಾರಿ

ರಾಘವೇಂದ್ರ ಭಟ್ Updated:

ಅಕ್ಷರ ಗಾತ್ರ : | |

Prajavani

ಭಟ್ಕಳ: ಕಳೆದ ವರ್ಷ ಮಳೆಗಾಲದಲ್ಲಿ ಕುಸಿದು ಬಿದ್ದಿದ್ದ ಪಟ್ಟಣದ ಬಸ್ ನಿಲ್ದಾಣ ಇನ್ನೂ ತಲೆಯೆತ್ತಿಲ್ಲ. ಪ್ರಯಾಣಿಕರು ಸರಿಯಾದ ತಂಗುದಾಣವಿಲ್ಲದೇ ಮಳೆ, ಬಿಸಿಲಿನಲ್ಲೇ ಪರದಾಡುತ್ತ ಬಸ್‌ಗಾಗಿ ಕಾಯಬೇಕಿದೆ. ಹೊಸ ಕಟ್ಟಡದ ಕಾಮಗಾರಿಯನ್ನು ಮಳೆಗಾಲ ಸೇರಿಸಿ ಒಟ್ಟು 16 ತಿಂಗಳ ಅವಧಿಯಲ್ಲಿ ಪೂರ್ಣಗೊಳಿಸಬೇಕಿತ್ತು. ಆದರೆ, ಇನ್ನೂ ಪೂರ್ಣಗೊಂಡಿಲ್ಲ.

ಬಸ್ ನಿಲ್ದಾಣದ ಕಬ್ಬಿಣದ ಅವಶೇಷಗಳಲ್ಲಿ ಕೆಲವನ್ನು ತೆರವು ಮಾಡಿದ್ದರೂ ಮತ್ತಷ್ಟು ಸಾಮಗ್ರಿ ನಿಲ್ದಾಣದ ನಡುವೆಯೇ ಬಿದ್ದುಕೊಂಡಿವೆ. ತಾತ್ಕಾಲಿಕವಾಗಿ ತಗಡಿನ ತಂಗುದಾಣ, ಒಂದೆರಡು ಆಸನಗಳನ್ನು ಅಳವಡಿಸಲಾಗಿದೆ. ಆದರೆ, ಗಾಳಿ ಮಳೆಗೆ ಇದರ ಆಶ್ರಯ ಪಡೆದವರು ಸಂಪೂರ್ಣ ಒದ್ದೆಯಾಗುತ್ತಾರೆ. ಅಲ್ಲದೇ ಇಲ್ಲಿ ಪ್ರಯಾಣಿಕರಿಗಿಂತ ಹೆಚ್ಚು ದ್ವಿಚಕ್ರ ವಾಹನಗಳಿರುತ್ತವೆ.  ಪ್ರಯಾಣಿಕರು ಮಾತ್ರ ಮಳೆ, ಬಿಸಿಲು, ಚಳಿಯಲ್ಲಿ ಒದ್ದಾಡುತ್ತಿದ್ದಾರೆ.

‘ವಾಹನ ಪಾರ್ಕಿಂಗ್ ವ್ಯವಸ್ಥೆ ಇಲ್ಲ, ರಾತ್ರಿ ವೇಳೆ ಕಂಟ್ರೋಲರ್ ಇರುವುದಿಲ್ಲ. ಒಂದೇ ಫ್ಲಡ್ ಲೈಟ್ ಉರಿಯುವುದರಿಂದ ನಿಲ್ದಾಣವೆಲ್ಲ ಕತ್ತಲೋ ಕತ್ತಲು. ಇದರಿಂದ ಪ್ರಯಾಣಿರಿಗೆ ಸುರಕ್ಷತೆಯೇ ಇಲ್ಲವಾಗಿದೆ’ ಎಂದು ಕರ್ನಾಟಕ ಸ್ವಾಭಿಮಾನಿ ಕ್ರಾಂತಿ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕುಮಾರ ನಾಯ್ಕ ಆಕ್ಷೇಪಿಸುತ್ತಾರೆ.

ಈಗಿನ ಬಸ್ ನಿಲ್ದಾಣ ನೋಡಿದರೆ ಯಾವುದೋ ಪಾಳುಬಿದ್ದ ನಿಲ್ದಾಣವೆಂಬಂತೆ ಗೋಚರವಾಗುತ್ತದೆ. ಕುಡಿಯುವ ನೀರು ಸೇರಿದಂತೆ ಯಾವುದೇ ಸೌಲಭ್ಯ ಇಲ್ಲಿಲ್ಲ. ಇಲ್ಲಿ ಸುರಕ್ಷತೆಯಿಲ್ಲದ ಕಾರಣ ಪೋಲಿ ಹುಡುಗರ ಕಾಟವೂ ಹೆಚ್ಚಿದ್ದು, ನಿಂತುಕೊಳ್ಳಲು ಮುಜುಗರವಾಗುತ್ತದೆ ಎಂದು ಹೆಸರು ಹೇಳಲು ಬಯಸದ ಕಾಲೇಜು ವಿದ್ಯಾರ್ಥಿನಿಯೊಬ್ಬರು ದೂರುತ್ತಾರೆ.

ಇನ್ನು ಐದಾರು ತಿಂಗಳಲ್ಲಿ ಮತ್ತೆ ಮಳೆಗಾಲ ಆರಂಭವಾಗಲಿದೆ. ಅಷ್ಟರೊಳಗೆ ಸಮಸ್ಯೆಗಳಿಗೆ ಮುಕ್ತಿ ಸಿಕ್ಕಿ ಬಸ್ ನಿಲ್ದಾಣ ಕಾಮಗಾರಿ ಪೂರ್ಣಗೊಳ್ಳಲಿದೆಯೇ ಎಂದು ನಾಗರಿಕರು ಪ್ರಶ್ನಿಸುತ್ತಿದ್ದಾರೆ.

‘ಇನ್ನೆರಡು ತಿಂಗಳಲ್ಲಿ ನಿರ್ಮಾಣ’: ‘ಬಸ್ ನಿಲ್ದಾಣದ ಹೊಸ ಕಟ್ಟಡದ ಕಾಮಗಾರಿ ತಾಂತ್ರಿಕ ತೊಂದರೆಗಳಿಂದ ತಡವಾಗಿದೆ. ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಅರಿವಿದೆ. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಮುಖ್ಯ ಕಾಮಗಾರಿಗಳನ್ನು ಕೇಂದ್ರೀಯ ವಿಭಾಗ ನೋಡಿಕೊಳ್ಳುತ್ತದೆ. ಕಾಮಗಾರಿ ಪೂರ್ಣಗೊಂಡ ಬಳಿಕ ನಮ್ಮ ಸುಪರ್ದಿಗೆ ಒಪ್ಪಿಸುತ್ತಾರೆ’ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ವಿವೇಕ್ ಹೆಗಡೆ ಪ್ರತಿಕ್ರಿಯಿಸಿದರು.

ಭಟ್ಕಳ ಘಟಕ ವ್ಯವಸ್ಥಾಪಕ ವೈ.ಕೆ ಬಾನಾವಳಿಕರ್ ಮಾತನಾಡಿ, ‘ಪ್ರಯಾಣಿಕರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಸಾರ್ವಜನಿಕರ ದೂರನ್ನು ಮೇಲಧಿಕಾರಿಗಳ ಗಮನಕ್ಕೆ ಆಗಾಗ ತರುತ್ತಿದ್ದೇವೆ. ತಾತ್ಕಾಲಿಕವಾಗಿ ತಂಗುದಾಣ ನಿರ್ಮಿಸಲಾಗಿದೆ. ಹೊಸ್ ಬಸ್ ನಿಲ್ದಾಣದ ಕಾಮಗಾರಿ ಪೂರ್ಣಗೊಳ್ಳಲಿದೆ. ಅಲ್ಲಿಯವರೆಗೆ ಪ್ರಯಾಣಿಕರಿಗೆ ಆಗುವ ತೊಂದರೆಯನ್ನು ಕಡಿಮೆ ಮಾಡಲು ಸಿಬ್ಬಂದಿ ಜಾಗ್ರತೆ ವಹಿಸುತ್ತಿದ್ದಾರೆ’ ಎಂದರು.

ಸಾರ್ವಜನಿಕರು ಏನಂತಾರೆ?

 

ಲಗೇಜ್‌ ಇಡಲೂ ವ್ಯವಸ್ಥೆಯಿಲ್ಲ

ಈಗಿನ ಬಸ್ ನಿಲ್ದಾಣದಲ್ಲಿ ದೂರದೂರುಗಳ ಪ್ರಯಾಣಿಕರು ಒಂದೈದು ನಿಮಿಷ ಸುಧಾರಿಸಿಕೊಳ್ಳಲೂ ಸಾಧ್ಯವಾಗದಂಥ ಪರಿಸ್ಥಿತಿ ಇದೆ. ಲಗೇಜ್ ಇಡಲೂ ಸರಿಯಾದ ವ್ಯವಸ್ಥೆ ಇಲ್ಲ.

–  ಗಣಪತಿ ನಾಯ್ಕ , ಮುಟ್ಟಳ್ಳಿ ರಿಕ್ಷಾ ಚಾಲಕ

ರೋಗಿಗಳೂ ಬಿಸಿಲಲ್ಲೇ ನಿಲ್ಲುವ ಪರಿಸ್ಥಿತಿ

ಆರೋಗ್ಯ ತಪಾಸಣೆಗೆ ನಿತ್ಯವೂ ಉಡುಪಿ, ಮಣಿಪಾಲ, ಮಂಗಳೂರಿಗೆ ಸಾಕಷ್ಟು ಮಂದಿ ಹಿರಿಯರು ಪ್ರಯಾಣಿಸುತ್ತಾರೆ. ಅವರು ಇಲ್ಲಿ ಬಸ್‌ಗಾಗಿ ಬಿಸಿಲು, ಮಳೆಯಲ್ಲೇ ಕಾಯಬೇಕಿದೆ

– ಮುಬಾಷಿರ್ ಹಲ್ಲಾರೆ, ತಂಝೀಮ್ ಕಾರ್ಯಕಾರಿ ಸಮಿತಿ ಸದಸ್ಯ

ಅಂಗವಿಕಲರಿಗೂ ಸೂಕ್ತ ಆಸನವಿಲ್ಲ

ಗ್ರಾಮೀಣ ಪ್ರದೇಶಗಳಿಗೆ ತೆರಳುವ ವಿದ್ಯಾರ್ಥಿಗಳು ತಮ್ಮ ಮಣಭಾರದ ಬ್ಯಾಗನ್ನು ಹೊತ್ತುಕೊಂಡು ಬಿಸಿಲಿನಲ್ಲೇ ನಿಂತಿರಬೇಕಾಗಿದೆ. ಅಂಗವಿಕಲರಿಗೂ ಸೂಕ್ತ ಆಸನವಿಲ್ಲ.

– ಗೀತಾ ಭಟ್ , ಪ್ರಶಿಕ್ಷಣಾರ್ಥಿ, ಜ್ಞಾನೇಶ್ವರಿ ಬಿಇಡಿ ಕಾಲೇಜು

––––

ಅಂಕಿ ಅಂಶ

45 ವರ್ಷ ಹಿಂದಿನ ನಿಲ್ದಾಣ

2 ವರ್ಷಗಳ ಹಿಂದೆ ಹಳೆಯ ನಿಲ್ದಾಣ ಕಟ್ಟಡ ಕುಸಿತ 

ಭಟ್ಕಳ ಘಟಕದಿಂದ ಸಂಚರಿಸುವ ಬಸ್‌ಗಳ ಸಂಖ್ಯೆ 79 

₹ 5 ಕೋಟಿ ವೆಚ್ಚದಲ್ಲಿ ಹೊಸ ಕಟ್ಟಡ ನಿರ್ಮಾಣ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು