ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನ ಪರಿಷತ್ ಚುನಾವಣೆ: ಬಿಜೆಪಿ ವಿರುದ್ಧ ಭೀಮಣ್ಣ ಅಖಾಡಕ್ಕೆ

ಕೊನೆ ಕ್ಷಣದಲ್ಲಿ ಅಭ್ಯರ್ಥಿ ಅಂತಿಮಗೊಳಿಸಿದ ಕಾಂಗ್ರೆಸ್
Last Updated 22 ನವೆಂಬರ್ 2021, 16:13 IST
ಅಕ್ಷರ ಗಾತ್ರ

ಶಿರಸಿ: ವಿಧಾನ ಪರಿಷತ್ ಚುನಾವಣೆಗೆ ಉತ್ತರ ಕನ್ನಡ ಕ್ಷೇತ್ರದಿಂದ ಭೀಮಣ್ಣ ನಾಯ್ಕ ಅವರನ್ನು ಅಭ್ಯರ್ಥಿಯಾಗಿ ಕಾಂಗ್ರೆಸ್ ಕೊನೆ ಕ್ಷಣದಲ್ಲಿ ಘೋಷಿಸಿದೆ.

ಭೀಮಣ್ಣ ಪ್ರಸ್ತುತ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷರಾಗಿದ್ದಾರೆ. ಅಧಿಕಾರದಲ್ಲಿದ್ದು ಬಲಿಷ್ಠವಾಗಿರುವ ಬಿಜೆಪಿ ವಿರುದ್ಧ ಸೆಣಸಲು ಅವರೇ ಸೂಕ್ತ ಎಂಬ ನಿರ್ಧಾರಕ್ಕೆ ಪಕ್ಷದ ವರಿಷ್ಠರು ಬಂದಿದ್ದಾರೆ ಎಂಬುದು ಬಲ್ಲಮೂಲಗಳ ಮಾಹಿತಿ.

62 ವರ್ಷದ ಭೀಮಣ್ಣ ನಾಯ್ಕ ಕೃಷಿ ಕುಟುಂಬದಿಂದ ಬಂದವರಾಗಿದ್ದಾರೆ. ಹತ್ತಿರದ ಸಂಬಂಧಿಯೂ ಆಗಿದ್ದ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ ರಾಜಕೀಯ ಗರಡಿಯಲ್ಲಿ ಬೆಳೆದವರು. ಅಲ್ಪ ಅವಧಿ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದಲ್ಲಿ ಜಿಲ್ಲಾಮಟ್ಟದ ಪದಾಧಿಕಾರಿಯಾಗಿದ್ದರು. ಬಂಗಾರಪ್ಪ ಪಕ್ಷ ತೊರೆದು ಸಮಾಜವಾದಿ ಪಕ್ಷ ಕಟ್ಟುವ ವೇಳೆ ಅವರೊಂದಿಗೆ ಕೈಜೋಡಿಸಿ ಜಿಲ್ಲೆಯಲ್ಲಿ ಆ ಪಕ್ಷವನ್ನೂ ಸಂಘಟಿಸಿದ್ದರು.

ಬದಲಾದ ಕಾಲಘಟ್ಟದಲ್ಲಿ ಮರಳಿ ಕಾಂಗ್ರೆಸ್ ಸೇರಿದ ಭೀಮಣ್ಣ ಸತತ ಹದಿನಾಲ್ಕು ವರ್ಷದಿಂದ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ಒಂದು ಅವಧಿಗೆ ಜಿಲ್ಲಾ ಪಂಚಾಯ್ತಿ ಸದಸ್ಯರಾಗಿದ್ದ ಅವರು ಮೂರು ಬಾರಿ ವಿಧಾನ ಸಭೆ ಚುನಾವಣೆಗೆ ಸ್ಪರ್ಧಿಸಿದ್ದರು. ಇದೇ ಮೊದಲ ಬಾರಿಗೆ ಪರಿಷತ್ ಚುನಾವಣೆ ಅಖಾಡಕ್ಕೆ ಇಳಿಯುತ್ತಿದ್ದಾರೆ.

‘ಪಕ್ಷ ಸಂಘಟನೆಗೆ ಜಿಲ್ಲೆಯಾದ್ಯಂತ ಸುತ್ತಾಡಿರುವ ಭೀಮಣ್ಣ ಅವರಿಗೆ ಸ್ಥಳೀಯ ಸಂಸ್ಥೆಗಳ ಸದಸ್ಯರ ಜತೆ ನಿಕಟ ಸಂಪರ್ಕವಿದೆ. ಪಕ್ಷದ ಹಿರಿಯ ನಾಯಕರೂ ಅವರ ಬೆನ್ನಿಗೆ ನಿಂತಿದ್ದಾರೆ. ಇದೇ ಕಾರಣಕ್ಕೆ ಅವರನ್ನು ಅಭ್ಯರ್ಥಿಯಾಗಿಸುವ ನಿರ್ಣಯ ಕೈಗೊಳ್ಳಲಾಗಿದೆ’ ಎಂದು ಕಾಂಗ್ರೆಸ್ ಹಿರಿಯ ಮುಖಂಡರೊಬ್ಬರು ಪ್ರತಿಕ್ರಿಯಿಸಿದರು.

ಕಾಂಗ್ರೆಸ್‍ನಿಂದ ಅಭ್ಯರ್ಥಿಯಾಗಿ ಸ್ಪರ್ಧಿಸಲು ಹಲವರು ಆಕಾಂಕ್ಷಿಗಳಾಗಿದ್ದರು. ರವೀಂದ್ರ ನಾಯ್ಕ, ಶ್ರೀಪಾದ ಹೆಗಡೆ ಕಡವೆ, ಸಾಯಿ ಗಾಂವಕರ ಇನ್ನಿತರರು ಈ ಸಂಬಂಧ ಕೆಪಿಸಿಸಿಗೆ ಅರ್ಜಿಯನ್ನೂ ಸಲ್ಲಿಸಿದ್ದರು. ಪಕ್ಷದ ಟಿಕೆಟ್ ಪಡೆಯುವ ಸಲುವಾಗಿ ಹಲವು ಮುಖಂಡರನ್ನೂ ಭೇಟಿಯಾಗಿದ್ದರು.

ಬಿಜೆಪಿ ಅಭ್ಯರ್ಥಿ ಗಣಪತಿ ಉಳ್ವೇಕರ ವಿರುದ್ಧ ಕಾಂಗ್ರೆಸ್‍ನಿಂದ ಸ್ಪರ್ಧಿ ಯಾರು ಎಂಬ ಕುತೂಹಲಕ್ಕೆ ತೆರೆ ಬಿದ್ದಿದ್ದು, ಇದೀಗ ಚುನಾವಣಾ ಅಖಾಡ ರಂಗೇರಿದೆ.

ಮಾಜಿ ಶಾಸಕರ ಒಲವು:

ಸಚಿವರ ಸಹಿತ ಐವರು ಶಾಸಕರನ್ನೊಳಗೊಂಡ ಬಿಜೆಪಿ ಜಿಲ್ಲೆಯಲ್ಲಿ ಬಲಿಷ್ಠವಾಗಿದ್ದು ಅದರ ಗೆಲುವಿಗೆ ತಡೆಯೊಡ್ಡಲು ಭೀಮಣ್ಣ ನಾಯ್ಕ ಸೂಕ್ತ ಅಭ್ಯರ್ಥಿ ಎಂಬ ವಿಚಾರವನ್ನು ಕಾಂಗ್ರೆಸ್ ಮಾಜಿ ಶಾಸಕರು ವರಿಷ್ಠರ ಮುಂದಿಟ್ಟಿದ್ದರು ಎಂದು ಮೂಲಗಳು ತಿಳಿಸಿವೆ.

ಉತ್ತರ ಕನ್ನಡ ಕ್ಷೇತ್ರಕ್ಕೆ ಅಭ್ಯರ್ಥಿ ಅಂತಿಮಗೊಳಿಸಲು ವಿದೇಶಕ್ಕೆ ತೆರಳಿದ್ದ ಶಾಸಕ ಆರ್.ವಿ.ದೇಶಪಾಂಡೆ ಬರುವಿಕೆಗೆ ಪಕ್ಷದ ವರಿಷ್ಠರು ಕಾದಿದ್ದರು. ಅವರು ಮರಳಿದ ಬಳಿಕ ಅಭ್ಯರ್ಥಿ ಅಂತಿಮಗೊಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT