ಶನಿವಾರ, ಫೆಬ್ರವರಿ 27, 2021
31 °C
ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಭೀಮಣ್ಣ ನಾಯ್ಕ ಆರೋಪ

ಪಕ್ಷ ದ್ರೋಹ ಮಾಡಿರುವ ಹೆಬ್ಬಾರ್‌ಗೆ ಅರಳುಮರುಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ‘ಸ್ವಂತ ಅಭಿವೃದ್ಧಿಗಾಗಿ ಪಕ್ಷವನ್ನು ಬಲಿಕೊಟ್ಟಿರುವ ಶಿವರಾಮ ಹೆಬ್ಬಾರ್, ಈಗ ಬೇಕಾಬಿಟ್ಟಿ ಮಾತನಾಡಿರುವುದನ್ನು ನೋಡಿದರೆ ಅವರಿಗೆ ಅರಳುಮರುಳಾದಂತೆ ಕಾಣುತ್ತಿದೆ’ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಭೀಮಣ್ಣ ನಾಯ್ಕ ಆರೋಪಿಸಿದರು.

ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹೆಬ್ಬಾರ್ ಸ್ವಂತ ಅಭಿವೃದ್ಧಿಗಾಗಿಯೊ ಅಥವಾ ಕ್ಷೇತ್ರದ ಅಭಿವೃದ್ಧಿಗಾಗಿಯೊ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂಬುದು ಗೊತ್ತಿಲ್ಲ. ಆದರೆ, ವಿಧಾನಸಭೆ ಚುನಾವಣೆಯಲ್ಲಿ ಅವರ ಗೆಲುವಿಗಾಗಿ ಶ್ರಮಿಸಿದ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರಿಗೆ ದ್ರೋಹ ಮಾಡಿರುವ ಅವರು, ತಮ್ಮ ಅನುಭವದ ಆಧಾರದ ಮೇಲೆ ನನ್ನನ್ನು ಟೀಕಿಸುತ್ತಿದ್ದಾರೆ. ಹಿಂದೆ ಬಿಜೆಪಿಯಲ್ಲಿದ್ದು, ಅಲ್ಲಿ ಏನೂ ಸಿಗದೆ, ಕಾಂಗ್ರೆಸ್‌ಗೆ ಬಂದು ಎರಡು ಬಾರಿ ಶಾಸಕರಾಗಿ, ಈಗ ಕಾಂಗ್ರೆಸ್‌ನಿಂದ ಏನೂ ಸಿಕ್ಕಿಲ್ಲ ಎನ್ನುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ವಿಧಾನಸಭೆಗೆ ಮೊದಲ ಬಾರಿ ಸ್ಪರ್ಧಿಸಿದಾಗ ಅವರು ಸೋತಿದ್ದರು. ನಾನು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷನಾದ ಮೇಲೆ ತಳಮಟ್ಟದಿಂದ ಪಕ್ಷ ಸಂಘಟಿಸಿದ ಪರಿಣಾಮ ಅವರಿಗೆ ಗೆಲುವಾಯಿತು. ಕಾಂಗ್ರೆಸ್‌ ಸರ್ಕಾರ ರಾಜ್ಯದಲ್ಲಿದ್ದಾಗ ಅವರ ಕ್ಷೇತ್ರಕ್ಕೆ ಸಾಕಷ್ಟು ಅನುದಾನ ನೀಡಿದೆ. ಅದನ್ನು ಅವರೇ ಅನೇಕ ಬಾರಿ ಭಾಷಣದಲ್ಲಿ ಹೇಳಿಕೊಂಡಿದ್ದಾರೆ. ಈ ರೀತಿಯ ಅವಕಾಶವಾದಿ ರಾಜಕಾರಣ ಬಹಳ ದಿನ ನಡೆಯುವುದಿಲ್ಲ. ಇಡೀ ರಾಜ್ಯ ನೆರೆಯ ಸಂಕಷ್ಟದಲ್ಲಿದ್ದಾಗ 17 ಶಾಸಕರು ರಾಜಕೀಯ ಮಾಡಿ, ಸರ್ಕಾರ ಉರುಳಿಸಿದ್ದನ್ನು ಜನರು ಮರೆಯಲಿಲ್ಲ. ರಾಜಕಾರಣ ಮಾಡಬೇಕೆನ್ನುವ ಕಾರಣಕ್ಕೆ ಮನಸ್ಸಿಗೆ ಬಂದಂತೆ ಮಾತನಾಡುವುದನ್ನು ಹೆಬ್ಬಾರ್ ನಿಲ್ಲಿಸಲಿ’ ಎಂದು ಹೇಳಿದರು.

‘ಭೀಮಣ್ಣ ನಾಯ್ಕ ವ್ಯಕ್ತಿಗತವಾಗಿ ಶುದ್ಧವಾಗಿದ್ದು, ಸರ್ಕಾರದ ಸಂಪತ್ತನ್ನು ಕೊಳ್ಳೆ ಹೊಡೆದು ಜೈಲಿಗೆ ಹೋಗಿ ಬಂದ ವ್ಯಕ್ತಿಯಲ್ಲ. ಯಾವತ್ತೂ ಸಂಪತ್ತು ಕೊಳ್ಳೆ ಹೊಡೆದು ಜೈಲಿಗೆ ಹೋಗಿಲ್ಲ’ ಎಂದು ಖಾರವಾಗಿ ಹೇಳಿದ ಭೀಮಣ್ಣ, ಹೆಬ್ಬಾರ್ ಮಗ ಗಣಿ ಪ್ರಕರಣದಲ್ಲಿ ಜೈಲಿಗೆ ಹೋಗಿದ್ದನ್ನು ಪರೋಕ್ಷವಾಗಿ ಉಲ್ಲೇಖಿಸಿದರು.

‘ಸಾವಿರಾರು ಕಾರ್ಯಕರ್ತರನ್ನು ದಾರಿ ಮೇಲೆ ಹಾಕಿ ಹೋದವರು, ಶಾಸಕರ ನಿಧಿಯನ್ನೇ ಸರಿಯಾಗಿ ಬಳಸಲು ಆಗದವರು ಯೋಗ್ಯರೋ, ಅಯೋಗ್ಯರೋ ಎಂಬುದು ಉಪಚುನಾವಣೆಯಲ್ಲಿ ತಿಳಿಯಲಿದೆ. ಕಾಂಗ್ರೆಸ್‌ನಲ್ಲಿದ್ದಾಗಲೂ ಪ್ರತ್ಯೇಕವಾಗಿರುತ್ತದ್ದ ಹೆಬ್ಬಾರ್, ಕೆಲಸದ ಒತ್ತಡದಿಂದ ಹಾಗೆ ಮಾಡುತ್ತಾರೆ ಎಂದುಕೊಂಡಿದ್ದರೆ. ಅವರು ಪಕ್ಷಕ್ಕೆ ಮೋಸ ಮಾಡಿ ಹೋಗುತ್ತಾರೆ ಅಂದುಕೊಂಡಿರಲಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. 

ಉಪಚುನಾವಣೆಯಲ್ಲಿ ಸ್ಪರ್ಧಿಸಲು 7–8 ಆಕಾಂಕ್ಷಿಗಳು ಅರ್ಜಿ ನೀಡಿದ್ದಾರೆ. ಕೆಪಿಸಿಸಿ ರಚಿಸಿರುವ ಆಯ್ಕೆ ಸಮಿತಿ ಅಭ್ಯರ್ಥಿಯನ್ನು ಆಯ್ಕೆ ಮಾಡಲಿದೆ ಎಂದು ಹೇಳಿದರು. ಪ್ರಮುಖರಾದ ಜಗದೀಶ ಗೌಡ, ಎಸ್.ಟಿ.ಹೆಗಡೆ, ಶ್ರೀಕಾಂತ ತಾರಿಬಾಗೀಲ, ದೀಪಕ ದೊಡ್ಡೂರು, ವಿಕ್ಟರ್ ಡಯಾಸ್, ಯು.ಎಚ್.ಪಠಾಣ್ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.