ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನರ್ಹ ಪಟ್ಟ ಜೀವನದಲ್ಲಿ ಇನ್ನು ಬದಲಾಗದು: ಆರ್.ವಿ.ದೇಶಪಾಂಡೆ

ಭೀಮಣ್ಣ ನಾಯ್ಕ ನಾಮಪತ್ರ ಸಲ್ಲಿಕೆಯ ವೇಳೆ ಆರ್.ವಿ.ದೇಶಪಾಂಡೆ ಟೀಕೆ
Last Updated 1 ಡಿಸೆಂಬರ್ 2019, 12:46 IST
ಅಕ್ಷರ ಗಾತ್ರ

ಯಲ್ಲಾಪುರ: 'ಅನರ್ಹ ಶಾಸಕರ ಅಧಿಕಾರದ ಆಸೆಯಿಂದಾಗಿ ಚುನಾವಣೆ ಬಂದಿದೆ. ಪಕ್ಷಾಂತರದ ಕಾರಣಕ್ಕೆ ಈ ಚುನಾವಣೆ ನಡೆಯುತ್ತಿದೆ’ ಎಂದು ಹಳಿಯಾಳ ಶಾಸಕ ಆರ್.ವಿ.ದೇಶಪಾಂಡೆ ಹೇಳಿದರು.

ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಭೀಮಣ್ಣ ನಾಯ್ಕ ನಾಮಪತ್ರ ಸಲ್ಲಿಸುವ ಪ್ರಯುಕ್ತ ಗುರುವಾರ ಇಲ್ಲಿ ನಡೆದ ಬಹಿರಂಗ ಸಮಾವೇಶದಲ್ಲಿ ಅವರು ಮಾತನಾಡಿದರು. 'ಸ್ಪೀಕರ್ ರಮೇಶಕುಮಾರ್, ಆಗ ಶಾಸಕರಾಗಿದ್ದ ಶಿವರಾಮ ಹೆಬ್ಬಾರರನ್ನು ಅನರ್ಹತ ಮಾಡಿದ್ದರು. ಸುಪ್ರೀಂ ಕೋರ್ಟ್ ಕೂಡ ಅವರನ್ನು ಅನರ್ಹ ಎಂದು ಒಪ್ಪಿಕೊಂಡಿದೆ. ಅನರ್ಹ ಶಾಸಕರಿಗೆ ಅನರ್ಹತೆಯ ಪಟ್ಟ ಜೀವನದಲ್ಲಿ ಬದಲಾವಣೆ ಆಗುವುದಿಲ್ಲ' ಎಂದು ಕುಟುಕಿದರು.

‘ಚುನಾವಣೆ ಹಿನ್ನಲೆಯಲ್ಲಿ ರಾಜ್ಯದ ಬಿಜೆಪಿ ಸರ್ಕಾರ ತುರ್ತಾಗಿ ಕ್ಷೇತ್ರಕ್ಕೆ ಹಣ ಬಿಡುಗಡೆ ಮಾಡಿದೆ. ಆದರೆ, ಬಿಡುಗಡೆ ಮಾಡುವುದು ಮಾತ್ರವಲ್ಲ, ಆ ಹಣದಿಂದ ಕೆಲಸ ನಡೆಯಲಿ. ಕಾರ್ಯಕರ್ತರು ನಮ್ಮ ಪಕ್ಷದ ಆಸ್ತಿ. ಸಜ್ಜನರು, ಪ್ರಜ್ಞಾವಂತರು ಇರುವ ಈ ಕ್ಷೇತ್ರದಲ್ಲಿ ಗೆಲುವು ನಮ್ಮದೇ. ಕಾರ್ಯಕರ್ತರು ಮನೆ–ಮನೆಗೆ ಹೋಗಿ ಮತ ಯಾಚನೆ ಮಾಡಬೇಕು. ಸಿದ್ದರಾಮಯ್ಯ ನಾಯಕತ್ವದಲ್ಲಿ ಜೊತೆಗೆ ಸಮ್ಮಿಶ್ರ ಸರ್ಕಾರ ಮಾಡಿದ ಅಭಿವೃದ್ಧಿ ಕೆಲಸಕ್ಕೆ ಈ ಬಾರಿ ಉತ್ತರ ಸಿಗಲಿದೆ’ ಎಂದರು.

ಭೀಮಣ್ಣ ನಾಯ್ಕ ಮಾತನಾಡಿ, ‘ಪಕ್ಷಕ್ಕೆ ದ್ರೋಹ ಮಾಡಿದ ಅನರ್ಹರಿಗೆ ಮತದಾರರೇ ಬುದ್ಧಿ ಕಲಿಸಬೇಕು. ಕಾರ್ಯಕರ್ತರು ಜನರ ಬಳಿ ಹೋಗಿ ಅಧಿಕಾರಕ್ಕಾಗಿ ಅನರ್ಹ ಶಾಸಕರು ಮಾಡಿರುವ ಅನ್ಯಾಯದ ಬಗ್ಗೆ ತಿಳಿಸಬೇಕು' ಎಂದು ಹೇಳಿದರು.

ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಜಯಶ್ರೀ ಮೊಗೇರ, ಯಲ್ಲಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಎನ್.ಗಾಂವಕರ್, ಮುಂಡಗೋಡ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಹಿರೇಹಳ್ಳಿ, ಬನವಾಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮಾನಂದ ನಾಯಕ, ಪ್ರಮುಖರಾದ ಉಲ್ಲಾಸ ಶಾನಭಾಗ್ ಇದ್ದರು.

ನಾಮಪತ್ರ ಸಲ್ಲಿಕೆ: ಕಾಂಗ್ರೆಸ್ ಪಕ್ಷದ ಸಾವಿರಾರು ಕಾರ್ಯಕರ್ತರು ಪಟ್ಟಣದ ದೇವಿ ಮೈದಾನದಿಂದ ತಹಶೀಲ್ದಾರ್ ಕಚೇರಿಯವರೆಗೆ ಮೆರವಣಿಗೆ ನಡೆಸಿದರು. ನಂತರ ಭೀಮಣ್ಣ ನಾಯ್ಕ, ಚುನಾವಣಾಧಿಕಾರಿ ಈಶ್ವರ ಉಳ್ಳಾಗಡ್ಡಿ ಅವರಿಗೆ ಎರಡು ಸೆಟ್‌ಗಳಲ್ಲಿ ನಾಮಪತ್ರ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT