ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ: ಮಾರಿಕಾಂಬೆ ಪ್ರಸಾದಕ್ಕೆ ‘ಭೋಗ್’ ಮಾನ್ಯತೆ

ಆಹಾರ ಗುಣಮಟ್ಟ ಪರಿಶೀಲಿಸಿ ಪ್ರಮಾಣ ಪತ್ರ ಸಲ್ಲಿಕೆ
Last Updated 3 ಆಗಸ್ಟ್ 2022, 19:30 IST
ಅಕ್ಷರ ಗಾತ್ರ

ಶಿರಸಿ: ನಾಡಿನ ಶಕ್ತಿಪೀಠದಲ್ಲೊಂದಾದ ಇಲ್ಲಿನ ಮಾರಿಕಾಂಬಾ ದೇವಾಲಯದಲ್ಲಿ ಮಧ್ಯಾಹ್ನ ಭಕ್ತರಿಗೆ ನೀಡುವ ಅನ್ನ ಪ್ರಸಾದಕ್ಕೆ ರಾಷ್ಟ್ರೀಯ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರ ನೀಡುವ ‘ಭೋಗ್’ (Blissfull Hygiene Offering to God) ಪ್ರಮಾಣಪತ್ರ ಲಭಿಸಿದೆ.

ರಾಜ್ಯದ ಪ್ರಮುಖ ನಾಲ್ಕು ದೇವಾಲಯಗಳಿಗೆ ಕೆಲ ದಿನಗಳ ಹಿಂದಷ್ಟೆ ಈ ಪ್ರಮಾಣ ಪತ್ರ ದೊರೆತಿದ್ದು ಇವದರಲ್ಲಿ ಶಿರಸಿಯ ಮಾರಿಕಾಂಬಾ ದೇವಾಲಯವೂ ಒಂದಾಗಿದೆ. ಪ್ರತಿನಿತ್ಯ ಇಲ್ಲಿ ಮಧ್ಯಾಹ್ನ ಸರಾಸರಿ 800 ರಿಂದ 1 ಸಾವಿರ ಭಕ್ತರು ಅನ್ನ ಪ್ರಸಾದ ಸ್ವೀಕರಿಸುತ್ತಿದ್ದಾರೆ.

ದೇವಾಲಯಗಳಲ್ಲಿ ದೇವರಿಗೆ ಅರ್ಪಿಸುವ ನೇವೇದ್ಯ, ಭಕ್ತರಿಗೆ ವಿತರಿಸುವ ಪ್ರಸಾದದ ಗುಣಮಟ್ಟ, ತಯಾರಿಸುವ ವಿಧಾನ, ಪಾಕಶಾಲೆಯ ನಿರ್ವಹಣೆ ಸೇರಿದಂತೆ ಹಲವು ಪ್ರಕಾರಗಳನ್ನು ಪರಿಶೀಲಿಸಿ ಗುಣಮಟ್ಟ ಖಚಿತಪಡಿಸಿಕೊಂಡ ಬಳಿಕ ಪ್ರಾಧಿಕಾರ ‘ಭೋಗ್’ ಪ್ರಮಾಣ ಪತ್ರ ನೀಡಿದೆ.

ಕಳೆದ ವರ್ಷ ‘ಭೋಗ್’ ಪ್ರಮಾಣಪತ್ರ ನೀಡಬಹುದಾದ ದೇವಸ್ಥಾನಗಳ ಪಟ್ಟಿ ಸಿದ್ಧಪಡಿಸಿದ್ದ ಪ್ರಾಧಿಕಾರ ಆಯಾ ದೇವಾಲಯಗಳಿಗೆ ನಿರ್ದಿಷ್ಟ ಮಾನದಂಡಗಳನ್ನು ಅನುಸರಿಸುವ ಕುರಿತು ಸೂಚಿಸಿತ್ತು. ಇದರ ಭಾಗವಾಗಿ ಕಳೆದ ಜನವರಿ ವೇಳೆಗೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿಗಳ ತಂಡ ದೇವಸ್ಥಾನಕ್ಕೆ ಭೇಟಿ ನೀಡಿ ಪಾಕಶಾಲೆ ವೀಕ್ಷಿಸಿತ್ತು.

‘ಭೋಗ್ ಪ್ರಮಾಣ ಪತ್ರ ಪಡೆಯಲುರಾಷ್ಟ್ರೀಯ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರ ಕೆಲವು ಮಾನದಂಡ ನಿರ್ದಿಷ್ಟಪಡಿಸಿದೆ. ಈ ಮಾನದಂಡಗಳನ್ನು ಅಂಕದ ಆಧಾರದಲ್ಲಿ ಅಳೆಯಲಾಗುತ್ತಿದ್ದು 116 ಅಂಕಕ್ಕೆ ಕನಿಷ್ಠ 90 ಅಂಕ ಗಳಿಸಿರಬೇಕು. ಮಾರಿಕಾಂಬಾ ದೇವಾಲಯ 100ಕ್ಕೂ ಹೆಚ್ಚು ಅಂಕಗಳಿಸಿ ಪ್ರಮಾಣಪತ್ರಕ್ಕೆ ಅರ್ಹತೆ ಪಡೆಯಿತು’ ಎಂದು ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಇಲಾಖೆಯ ಜಿಲ್ಲಾ ಅಧಿಕಾರಿ ಡಾ.ರಾಜಶೇಖರ ಪಾಳೆದವರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಆಹಾರ ತಯಾರಿಕಾ ಕೊಠಡಿಯು ಗಾಳಿ, ಬೆಳಕು ಸೌಲಭ್ಯದೊಂದಿಗೆ ಸುಸಜ್ಜಿತವಾಗಿರಬೇಕಿತ್ತು. ಸೋರುವಿಕೆ ಇಲ್ಲದ, ಉತ್ತಮ ಗುಣಮಟ್ಟದ ಗೋಡೆ, ಕಾಲು ಜಾರದಂತಹ ನೆಲಹಾಸು, ತುಕ್ಕು ಹಿಡಿಯದ ಕಿಟಕಿ ಬಾಗಿಲು, ಆಹಾರ ತಯಾರಿಸುವ ಪಾತ್ರೆಯ ಶುಚಿತ್ವ, ಆಹಾರ ತಯಾರಿಕಾ ಸಾಮಾಗ್ರಿಗಳ ದಾಸ್ತಾನು ಕೊಠಡಿ, ಪಾತ್ರೆ ತೊಳೆಯುವ ನೀರು, ತ್ಯಾಜ್ಯ ವಿಲೇವಾರಿ ಇತ್ಯಾದಿಗಳ ಗುಣಮಟ್ಟವನ್ನು ಪರೀಕ್ಷಿಸಿದ ಬಳಿಕ ಪ್ರಮಾಣಪತ್ರಕ್ಕೆ ಶಿಫಾರಸ್ಸು ಮಾಡಲಾಯಿತು’ ಎಂದು ವಿವರಿಸಿದರು.

ಪ್ರಮಾಣಪತ್ರ ವಿತರಣೆ ಬಾಕಿ:

ಮಾರಿಕಾಂಬಾ ದೇವಸ್ಥಾನದ ಪ್ರಸಾದ ವಿತರಣೆಗೆ ರಾಷ್ಟ್ರೀಯ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರದಿಂದ ‘ಭೋಗ್’ ಪ್ರಮಾಣಪತ್ರ ಘೋಷಣೆಯಾಗಿದೆ. ಆದರೆ ದೇವಸ್ಥಾನಕ್ಕೆ ಅಧಿಕೃತವಾಗಿ ಪ್ರಮಾಣಪತ್ರ ಇನ್ನೂ ಹಸ್ತಾಂತರವಾಗಿಲ್ಲ.

‘ಪ್ರಮಾಣಪತ್ರ ನೀಡಲು ಪ್ರಾಧಿಕಾರ ಸೂಚಿಸಿದ್ದ ಮಾನದಂಡಗಳನ್ನು ಪಾಲಿಸಲು ಪಾಕಶಾಲೆ, ಆಹಾರ ತಯಾರಿಕೆಗೆ ಬಳಸುವ ಪರಿಕರಗಳಲ್ಲಿ ಬದಲಾವಣೆ ಮಾಡಿಕೊಳ್ಳಲಾಗಿತ್ತು. 20ಕ್ಕೂ ಹೆಚ್ಚು ಪಾಕಶಾಲೆ ವಿಭಾಗದ ಸಿಬ್ಬಂದಿಗೆ ವಿಶೇಷ ತರಬೇತಿಯನ್ನೂ ನೀಡಲಾಗಿತ್ತು. ಪ್ರಮಾಣಪತ್ರ ಹಸ್ತಾಂತರಕ್ಕೆ ಕಾಯುತ್ತಿದ್ದೇವೆ’ ಎಂದು ದೇವಸ್ಥಾನದ ಅಧ್ಯಕ್ಷ ಆರ್.ಜಿ.ನಾಯ್ಕ ಪ್ರತಿಕ್ರಿಯಿಸಿದರು.

‘ಪ್ರಮಾಣಪತ್ರ ಶೀಘ್ರವೇ ನೀಡಲು ದಿನ ನಿಗದಿಪಡಿಸಲಾಗುವುದು. ಆಗಾಗ ದೇವಾಲಯದ ಪಾಕಶಾಲೆ, ಪ್ರಸಾದ ಗುಣಮಟ್ಟ ಪರಿಶೀಲನೆ ನಡೆಯಲಿದೆ. ಜಿಲ್ಲೆಯ ಮುರ್ಡೇಶ್ವರ ದೇವಾಲಯವನ್ನು ಮುಂದಿನ ವರ್ಷ ಭೋಗ್ ಪ್ರಮಾಣಪತ್ರಕ್ಕೆ ಆಯ್ಕೆ ಮಾಡಿ ಪ್ರಸ್ತಾವ ಸಲ್ಲಿಸಿದ್ದೇವೆ’ ಎಂದು ಡಾ.ರಾಜಶೇಖರ ಪಾಳೆದವರ ತಿಳಿಸಿದರು.

ದೇಶದ ವಿವಿಧೆಡೆಯಿಂದ ಭಕ್ತರು ದೇವಾಲಯಕ್ಕೆ ಭೇಟಿ ನೀಡುತ್ತಿದ್ದು, ಭೋಗ್ ಪ್ರಮಾಣಪತ್ರ ಭಕ್ತರಲ್ಲಿ ಪ್ರಸಾದದ ಗುಣಮಟ್ಟದ ಕುರಿತು ಮತ್ತಷ್ಟು ಭರವಸೆ ಮೂಡಿಸಿದೆ.

- ಡಾ.ರಾಜಶೇಖರ ಪಾಳೆದವರ,ಜಿಲ್ಲಾ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಅಧಿಕಾರಿ

ಮೊದಲಿನಿಂದಲೂ ದೇವಸ್ಥಾನ ಪ್ರಸಾದ ವಿತರಣೆಯಲ್ಲಿ ಗುಣಮಟ್ಟ ಕಾಯ್ದುಕೊಂಡುಬಂದಿದ್ದು, ಈಚೆಗೆ ಪರಿಣಾಮಕಾರಿ ಬದಲಾವಣೆ ಮಾಡಿಕೊಳ್ಳಲಾಗಿದೆ.

- ಆರ್.ಜಿ.ನಾಯ್ಕ,ಮಾರಿಕಾಂಬಾ ದೇವಸ್ಥಾನದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT