3
ಟೆಂಡರ್‌ ಪೂರ್ಣಗೊಂಡಿಲ್ಲ; ದೂರದೂರಿನಿಂದ ಬರುವ ಬಡ ವಿದ್ಯಾರ್ಥಿಗಳಿಗೆ ಸಮಸ್ಯೆ

ಈ ಬಾರಿ ಇನ್ನೂ ಸೈಕಲ್ ಸುಳಿವಿಲ್ಲ!

Published:
Updated:
ಶಾಲೆಯೊಂದರ ಆವರಣದಲ್ಲಿ ನಿಲ್ಲಿಸಿಟ್ಟಿರುವ ಸೈಕಲ್‌ಗಳು (ಸಂಗ್ರಹ ಚಿತ್ರ)

ಶಿರಸಿ: 2018- 19ನೇ ಸಾಲಿನ ಶೈಕ್ಷಣಿಕ ವರ್ಷ ಆರಂಭಗೊಂಡು ತಿಂಗಳು ಕಳೆಯುತ್ತಿದೆ. ಆದರೆ, ಸರ್ಕಾರದಿಂದ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡುವ ಸೈಕಲ್‌ಗಳ ಬಗ್ಗೆ ಸುಳಿವಿಲ್ಲದಾಗಿವೆ.

ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗೆ ಪೂರಕವಾಗಿ ಸರ್ಕಾರದಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಸೈಕಲ್ ವಿತರಣೆ ಮಾಡಲಾಗುತ್ತಿತ್ತು. ಆದರೆ, ಈ ಬಾರಿ ವಿತರಣೆಯಲ್ಲಿ ವಿಳಂಬ ನೀತಿ ಅನುಸರಿಸಲಾಗುತ್ತಿದೆ. ಸೈಕಲ್ ವಿತರಣೆಗೆ ಸರ್ಕಾರ ಇನ್ನೂ ಟೆಂಡರ್ ಕರೆದಿಲ್ಲದಿರುವುದು ವಿಳಂಬಕ್ಕೆ ಕಾರಣವಾಗಿದೆ. ಇದು ಬಸ್ ಹಾಗೂ ಇತರೆ ವಾಹನ ಸೌಲಭ್ಯದಿಂದ ವಂಚಿತಗೊಂಡಿರುವ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಸೈಕಲ್‌ಗಾಗಿ ಚಾತಕ ಪಕ್ಷಿಯಂತೆ ಕಾಯುವಂತೆ ಮಾಡಿದೆ.

ಕಾಲ್ನಡಿಗೆಯೇ ಗತಿ: ಜಿಲ್ಲೆಯ ಬಹುತೇಕ ಗುಡ್ಡಗಾಡು ಪ್ರದೇಶಗಳಿವೆ. ಹಲವು ತಾಲ್ಲೂಕುಗಳ ಬಹುತೇಕ ಗ್ರಾಮಗಳಿಗೆ ವಾಹನ ಸೌಲಭ್ಯ ಇಲ್ಲ. ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿದ್ಯಾರ್ಥಿಗಳು ನಡೆದುಕೊಂಡೆ ದೂರದ ಶಾಲೆಗಳಿಗೆ ತೆರಳಬೇಕಿದೆ. ಇಂಥ ಪರಿಸ್ಥಿತಿಯಲ್ಲಿ ಸರ್ಕಾರ ನೀಡುವ ಸೈಕಲ್ ಬಹುಪಯೋಗಿ ಆಗಿರುತ್ತದೆ. ಆದರೆ, ಬಡ ವಿದ್ಯಾರ್ಥಿಗಳಿಗೆ ಈ ಬಾರಿ ತೀವ್ರ ನಿರಾಸೆ ಉಂಟಾಗಿದೆ.

45 ಸಾವಿರಕ್ಕೂ ಹೆಚ್ಚು ಸೈಕಲ್ ಬೇಡಿಕೆ: ‘ಜಿಲ್ಲೆಯ 11 ತಾಲ್ಲೂಕುಗಳಲ್ಲಿ 8ನೇ ತರಗತಿಯ ಸುಮಾರು 45 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ ಮಾಡುವ ಕುರಿತು ಬೇಡಿಕೆ ಇದೆ. ಆದರೆ, ಸರ್ಕಾರದಿಂದ ಇನ್ನೂ ಶಿಕ್ಷಣ ಇಲಾಖೆಗೆ ಸೈಕಲ್ ವಿತರಣೆಗೆ ಸಂಬಂಧಿಸಿದ ಯಾವುದೇ ಮಾಹಿತಿ ಅಥವಾ ಸೈಕಲ್‌ನ ಬಿಡಿಭಾಗಗಳು ಬಂದಿಲ್ಲ. ಪ್ರತಿ ವರ್ಷ ಜೂನ್ ವೇಳೆಗಾಗಲೇ ಟೆಂಡರ್ ಕರೆದು ಸೈಕಲ್ ಬಿಡಿ ಭಾಗಗಳ ಜೋಡಣೆ ಕಾರ್ಯ ನಡೆಯುತ್ತಿತ್ತು. ಈ ವಿಳಂಬ ವಿದ್ಯಾರ್ಥಿಗಳ ಶೈಕ್ಷಣಿಕ ಬದುಕಿನ ಮೇಲೆ ಪರಿಣಾಮ ಬೀರುತ್ತದೆ’ ಎನ್ನುತ್ತಾರೆ ವಿದ್ಯಾರ್ಥಿ ಪಾಲಕರಾದ ಎಂ.ಪಿ.ಮಾದೇವ.

ವಿತರಣೆಗೆ ಒತ್ತಾಯ: ‘ಪ್ರತಿ ವರ್ಷ ಶೈಕ್ಷಣಿಕ ವರ್ಷದ ಆರಂಭದೊಂದಿಗೆ ಸೈಕಲ್ ವಿತರಣೆ ಮಾಡಬೇಕೆಂಬ ಸರ್ಕಾರದ ನಿಯಮವಿದೆ. ಆದರೆ, ಪರಿ ಬಾರಿಯೂ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವರ್ಷ ಮುಗಿಯುವ ವೇಳೆ ಸೈಕಲ್ ನೀಡಲಾಗುತ್ತದೆ. ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗುವುದರಿಂದ ಶಿಕ್ಷಣ ಇಲಾಖೆ ತುರ್ತಾಗಿ ಸೈಕಲ್ ವಿತರಣೆಗೆ ಮುಂದಾಗಬೇಕು’ ಎಂದು ವಿದ್ಯಾರ್ಥಿಗಳ ಪಾಲಕರು ಒತ್ತಾಯಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !