ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಲ್ಮೀಕಿ ಸಂಸ್ಥಾನದ ಬೃಹತ್ ರಥಕ್ಕೆ ಅಂತಿಮ ಸ್ಪರ್ಶ

ಯಲ್ಲಾಪುರದಲ್ಲಿ ಸಿದ್ಧವಾಗುತ್ತಿದೆ 75 ಅಡಿ ಎತ್ತರದ ಬೃಹತ್‌ ತೇರು: ಸೂಕ್ಷ್ಮ ಕೆತ್ತನೆಗಳ ಆಕರ್ಷಣೆ
Last Updated 9 ಜನವರಿ 2022, 19:30 IST
ಅಕ್ಷರ ಗಾತ್ರ

ಯಲ್ಲಾಪುರ: ಪಟ್ಟಣದ ಬಿಕ್ಕು ಗುಡಿಗಾರ ಕಲಾ ಕೇಂದ್ರದಲ್ಲಿ, ವಾಲ್ಮೀಕಿ ಮಹಾಸಂಸ್ಥಾನಕ್ಕೆ ಬೃಹತ್‌ ರಥವನ್ನು ನಿರ್ಮಿಸಲಾಗುತ್ತಿದೆ. ಕಲಾಕೇಂದ್ರದ ಸಂತೋಷ ಹಾಗೂ ಅರುಣ ಗುಡಿಗಾರ ಸಹೋದರರು ಅಂತಿಮ ಸ್ಪರ್ಶ ನೀಡುತ್ತಿದ್ದಾರೆ.

ದಾವಣಗೆರೆ ಜಿಲ್ಲೆ ಹರಿಹರ ಸಮೀಪದ ರಾಜನಳ್ಳಿಯ ವಾಲ್ಮೀಕಿ ಮಹಾಸಂಸ್ಥಾನದ ಸೂಚನೆಯಂತೆ ರಥವನ್ನು ಸಿದ್ಧಪಡಿಸಲಾಗುತ್ತಿದೆ. ಸುಮಾರು 40 ಅಡಿ ಎತ್ತರದ ರಥದ ಗಡ್ಡೆ ನಿರ್ಮಾಣವಾಗುತ್ತಿದ್ದು, ಪತಾಕೆ, ಕಲಶ ಸೇರಿ ಒಟ್ಟು ಸುಮಾರು 75 ಅಡಿ ಎತ್ತರ ಇರಲಿದೆ.

ರಥಕ್ಕೆ ಆರು ಚಕ್ರಗಳಿದ್ದು, ತಲಾ ಒಂಬತ್ತು ಅಡಿ ಎತ್ತರ ಇವೆ. ಗಡ್ಡೆ 17 ಅಡಿ, ಗಡ್ಡೆಯ ಮೇಲಿನ ಮಂಟಪದ ಪೀಠ ಐದು ಅಡಿ, ಮಂಟಪ ಒಂಬತ್ತು ಅಡಿ ಇದೆ. ಕಬ್ಬಿಣದ ಚಕ್ರಗಳನ್ನು ಅಳವಡಿಸಲಾಗುತ್ತಿದ್ದು, ಆಧುನಿಕ ತಾಂತ್ರಿಕತೆ ಬಳಸಿ ತನ್ನಿಂದ ತಾನೇ ರಥ ನಿಧಾನವಾಗಿ ಚಲಿಸುವಂತೆ ವಿನ್ಯಾಸ ಮಾಡಲಾಗುತ್ತಿದೆ.

ಆಗಮ ಶಾಸ್ತ್ರದ ವಾಸ್ತು ನಿಯಮದಂತೆ ರಥವನ್ನು ನಿರ್ಮಾಣ ಮಾಡಲಾಗಿದೆ. ರಂಜಲ, ವಾಟೆ, ಹೊನ್ನೆ ಹಾಗೂ ಕೆತ್ತನೆಗೆ ಸಾಗವಾನಿ ಮರಗಳ ಕಟ್ಟಿಗೆ ಬಳಸಲಾಗಿದೆ. ರಥದ ಸುತ್ತಲೂ ಸಂಪೂರ್ಣ ವಾಲ್ಮೀಕಿ ರಾಮಾಯಣದ ಪುತ್ರ ಕಾಮೇಷ್ಠಿ ಯಾಗದಿಂದ ಹಿಡಿದು, ಲವ ಕುಶರವರೆಗಿನ 33 ಚಿತ್ರಗಳನ್ನು ಅಂದವಾಗಿ ಕೆತ್ತಲಾಗಿದೆ. ಅಷ್ಟ ದಿಕ್ಪಾಲಕರು, ಮೇಲ್ಮುಖದಲ್ಲಿ ಅನಂತ, ಕೆಳಮುಖದಲ್ಲಿ ಬ್ರಹ್ಮನನ್ನು ಕೆತ್ತಲಾಗಿದ್ದು, ಆಕರ್ಷಕವಾಗಿವೆ.

ದಶಾವತಾರ, ನವಗ್ರಹ, ನಾಡಿನ ಸಮೃದ್ಧಿ ಬಿಂಬಿಸುವ ನಂದಿನಿ (ಗೋಮಾತೆ), ಕಾಮಧೇನು, ಕಲ್ಪವೃಕ್ಷ, ಸಂಗೀತ ವಾದ್ಯ ಮೇಳ ಹಾಗೂ ಶಕ್ತಿದೇವತೆಗಳ ಚಿತ್ರಣವನ್ನೂ ರಥ ಹೊಂದಿದೆ. ಸಾಮಾನ್ಯವಾಗಿ ಎಲ್ಲ ರಥಗಳಲ್ಲಿ ಸಿಂಹದ ಮುಖ ಮಾತ್ರವಿದ್ದರೆ, ಇದರಲ್ಲಿ ಎಂಟು ಕಡೆಗಳಲ್ಲಿ ಸಂಪೂರ್ಣ ಸಿಂಹಗಳ ಪ್ರತಿಕೃತಿಯನ್ನೇ ಕೆತ್ತಿ ಅಳವಡಿಸಲಾಗಿದೆ. ಗುರುಕುಲದಲ್ಲಿ ವಾಲ್ಮೀಕಿ ಮಹರ್ಷಿ ಪಾಠ ಹೇಳುತ್ತಿರುವ ದೃಶ್ಯವೂ ಪೂಜನೀಯವಾಗಿದೆ.

ಮಹಿಳೆಯರೂ ಸೇರಿದಂತೆ ನುರಿತ 18–20 ಕೆಲಸಗಾರರು ನಿರಂತರ ಒಂದೂವರೆ ವರ್ಷದಿಂದ ಈ ರಥದ ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಸುಮಾರು 5,000 ಘನ ಅಡಿ ಕಟ್ಟಿಗೆಯನ್ನು ಬಳಸಲಾಗಿದೆ. ಅರುಣ ಮತ್ತು ಸಂತೋಷ ಗುಡಿಗಾರ ಸಹೋದರರ ನೇತೃತ್ವದಲ್ಲಿ ಅಣ್ಣಪ್ಪ ಗುಡಿಗಾರ, ಆದಿತ್ಯ ಗುಡಿಗಾರ, ರಾಮಚಂದ್ರ, ರಾಕೇಶ, ಉಮೇಶ, ರಾಜೇಶ್, ಮಂಜುನಾಥ, ವಿಶ್ವನಾಥ, ಸಂಕೇತ, ಪುಟ್ಟಣ್ಣ, ಸಾಗರ, ಪ್ರಸಾದ, ಸಹನಾ, ಸವಿತಾ, ನಾಗವೇಣಿ, ಶಾರದಾ, ಹಾಗೂ ಶೋಭಾ ಈ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ದೇಶ– ವಿದೇಶದಲ್ಲಿ ಪ್ರಸಿದ್ಧ

ಬಿಕ್ಕು ಗುಡಿಗಾರ ಕಲಾಕೇಂದ್ರದ ಕಲಾಕೃತಿಗಳು ದೇಶ ವಿದೇಶಗಳಲ್ಲಿ ಪ್ರಸಿದ್ಧವಾಗಿವೆ. ಅಮೆರಿಕದ ನ್ಯೂಜೆರ್ಸಿ, ಗುಜರಾತಿನ ಬರೋಡಾ, ಅಹಮದಾಬಾದ್‌ನ ಸ್ವಾಮಿ ನಾರಾಯಣ ಮಂದಿರ, ನ್ಯೂಜರ್ಸಿ ಮತ್ತು ಆನಂದ್‌ನಲ್ಲಿರುವ ಇಸ್ಕಾನ್ ದೇಗುಲಗಳಿಗೆ ವಿವಿಧ ಕಲಾಕೃತಿಗಳು ಇಲ್ಲೇ ರೂಪುಗೊಂಡಿವೆ. ಕೆತ್ತನೆಗಳಿರುವ ಬೃಹತ್ ಬಾಗಿಲು, ಮಂಟಪಗಳೂ ಸೇರಿವೆ. ತುಮಕೂರು ಜಿಲ್ಲೆಯ ಪಾವಗಡದ ಚನ್ನಕೇಶವ ದೇವಸ್ಥಾನದ ಬ್ರಹ್ಮರಥವನ್ನು ಕೂಡ ಇಲ್ಲೇ ನಿರ್ಮಿಸಲಾಗಿದೆ.

ಕಾಷ್ಠ ಶಿಲ್ಪ, ಮಣ್ಣಿನ ಮೂರ್ತಿ, ಕಲ್ಲಿನಲ್ಲಿ ಕೆತ್ತನೆ, ಫೈಬರ್ ಕಲಾಕೃತಿಗಳನ್ನುಬಿಕ್ಕು ಗುಡಿಗಾರ ಕಲಾಕೇಂದ್ರದಲ್ಲಿ ತಯಾರಿಸಲಾಗುತ್ತದೆ. ಇದರ ರೂವಾರಿ ಸಂತೋಷ ಗುಡಿಗಾರ, ‘ಸರ್ ಎಂ.ವಿಶ್ವೇಶ್ವರಯ್ಯ ಶ್ರೇಷ್ಠ ಉತ್ಪಾದಕ ಪ್ರಶಸ್ತಿ’, ‘ರಾಷ್ಟ್ರೀಯ ಕಲಾ ಉತ್ಸವದಲ್ಲಿ ಪುರಸ್ಕಾರ’ ಸೇರಿದಂತೆ ಹತ್ತಾರು ಗೌರವಗಳಿಗೆ ಪಾತ್ರರಾಗಿದ್ದಾರೆ.

* ಈಗ ಶಾಸ್ತ್ರೀಯವಾದ ಕಲೆಗಳನ್ನು ಮುಂದುವರಿಸುವವರು ಬೆರಳಣಿಕೆಯಷ್ಟಿದ್ದಾರೆ. ಕಲೆ ಕಲಿಯುವ ಆಸಕ್ತಿಯುಳ್ಳ ಯುವಕ ಯುವತಿಯರು ಮುಂದೆ ಬಂದರೆ ತರಬೇತಿ ನೀಡುತ್ತೇವೆ‌.

- ಸಂತೋಷ ಗುಡಿಗಾರ, ಬಿಕ್ಕು ಗುಡಿಗಾರ ಕಲಾ ಕೆಂದ್ರದ ಮುಖ್ಯಸ್ಥ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT