ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಕೋಲಾ ಸಮೀಪ ಲಾರಿ, ಬೈಕ್ ಡಿಕ್ಕಿ: ಸವಾರ ಸಾವು

ಪದೇಪದೇ ಅಪಘಾತ: ಮೇಲ್ಸೇತುವೆ ನಿರ್ಮಾಣದ ಬೇಡಿಕೆಗೆ ಸಿಗದ ಸ್ಪಂದನ
Last Updated 1 ಮೇ 2021, 12:33 IST
ಅಕ್ಷರ ಗಾತ್ರ

ಅಂಕೋಲಾ: ತಾಲ್ಲೂಕಿನ ಬಳಲೆಯ ಪೆಟ್ರೋಲ್ ಬಂಕ್ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಶುಕ್ರವಾರ ಬೈಕ್ ಮತ್ತು ಲಾರಿಯ ನಡುವೆ ಡಿಕ್ಕಿಯಾಗಿದೆ. ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟಿದ್ದಾರೆ.

ತಾಲೂಕಿನ ಉಳುವರೆ ಸಮೀಪದ ಬೋಳುಕುಂಟೆ ಗ್ರಾಮದ ಕುಸ್ಲು ಈರಾ ಗೌಡ (35) ಮೃತಪಟ್ಟವರು. ವೃತ್ತಿಯಲ್ಲಿ ಲಾರಿ ಚಾಲಕರಾಗಿದ್ದ ಇವರು, ಶುಕ್ರವಾರ ಮಧ್ಯಾಹ್ನ ಮಾದನಗೇರಿ ಒಳರಸ್ತೆಯಿಂದ ಹೆದ್ದಾರಿಯತ್ತ ಪ್ರಯಾಣಿಸುತ್ತಿದ್ದರು. ಲಾರಿ ಕುಮಟಾದಿಂದ ಅಂಕೋಲಾದೆಡೆಗೆ ಚಲಿಸುತ್ತಿತ್ತು. ಈ ವೇಳೆ ಎರಡೂ ವಾಹನಗಳು ವೇಗವಾಗಿ ಬಂದು ಪರಸ್ಪರ ಡಿಕ್ಕಿಯಾದವು.

ಬೈಕ್ ಸವಾರ ಗಂಭೀರವಾಗಿ ಗಾಯಗೊಂಡ ಕಾರಣ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಅಲ್ಲಿ ಅವರು ಮೃತಪಟ್ಟಿದ್ದಾರೆ. ಸಿ.ಪಿ.ಐ ಕೃಷ್ಣಾನಂದ ನಾಯಕ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ರಾಷ್ಟ್ರೀಯ ಹೆದ್ದಾರಿಯ ಅಸಮರ್ಪಕ ಕಾಮಗಾರಿ ಮತ್ತು ನಿರ್ವಹಣೆಯ ಕೊರತೆಯೇ ಅಪಘಾತಕ್ಕೆ ಕಾರಣ ಎಂದು ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಬಳಲೆ– ಮಾದನಗೇರಿಯ ಕೂಡು ರಸ್ತೆಯಲ್ಲಿ ಮೇಲ್ಸೇತುವೆ ನಿರ್ಮಿಸುವಂತೆ ನಾಲ್ಕು ವರ್ಷಗಳಿಂದ ಹೋರಾಟ ನಡೆಯುತ್ತಿದೆ. ಇತ್ತೀಚಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ, ಮೇಲ್ಸೇತುವೆ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು.

ಈ ರಸ್ತೆಯಲ್ಲಿ ನಿರಂತರವಾಗಿ ಅಪಘಾತಗಳು ಆಗುತ್ತಿರುವ ಕಾರಣ ಸೂಕ್ತ ಕ್ರಮ ಕೈಗೊಳ್ಳುವಂತೆ ಪೊಲೀಸ್ ಮತ್ತು ಸಂಬಂಧಿಸಿದ ಇಲಾಖೆಗಳಿಗೆ ಸೂಚನೆ ನೀಡಿದ್ದರು. ರಸ್ತೆಯಲ್ಲಿ ಹಂಪ್ಸ್ ಮತ್ತು ರೇಡಿಯಂ ಪಟ್ಟಿಗಳನ್ನು ಅಳವಡಿಸಲು ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿತ್ತು.

‘ಜಿಲ್ಲಾಧಿಕಾರಿ ಸೂಚನೆಯ ನಂತರವೂ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಅಪಘಾತದ ಸಾವಿನ ಜವಾಬ್ದಾರಿ ಹೊತ್ತು ಕೊಳ್ಳುವವರು ಯಾರು? ಜಿಲ್ಲಾಡಳಿತ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಥವಾ ಐ.ಆರ್.ಬಿ ಕಂಪನಿಯೇ’ ಎಂದು ಗ್ರಾಮೀಣ ಯುವ ಹೋರಾಟ ಸಮಿತಿ ಅಧ್ಯಕ್ಷ ದೇವರಾಯ ನಾಯಕ ಸೇರಿದಂತೆ ಪ್ರಮುಖರು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT