ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂತದ ಬಾಯಲ್ಲಿ ಭಗವದ್ಗೀತೆ ಓದಿಸಬೇಕಾಗಿಲ್ಲ

ಬಿಜೆಪಿ ಅಭ್ಯರ್ಥಿ ಶಿವರಾಮ ಹೆಬ್ಬಾರ್ ತಿರುಗೇಟು
Last Updated 27 ನವೆಂಬರ್ 2019, 10:54 IST
ಅಕ್ಷರ ಗಾತ್ರ

ಶಿರಸಿ: ‘ನಾನು ಕಟ್ಟಿದ ಮನೆಗೆ ವಾಪಸ್ ಬಂದಿದ್ದೇನೆ. ಆದರೆ, ಸಿದ್ದರಾಮಯ್ಯ ಬೇರೆಯವರು ಕಟ್ಟಿದ ಮನೆಗೆ ಹೋಗಿ ಒಳಹೊಕ್ಕಿದ್ದಾರೆ’ ಎಂದು ಬಿಜೆಪಿ ಅಭ್ಯರ್ಥಿ ಶಿವರಾಮ ಹೆಬ್ಬಾರ್ ತಿರುಗೇಟು ನೀಡಿದರು.

ತಾಲ್ಲೂಕಿನ ಕಲ್ಲಿಯಲ್ಲಿ ಮಂಗಳವಾರ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಮಾತಿನುದ್ದಕ್ಕೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸೋಮವಾರ ಪ್ರಚಾರ ಸಭೆಯಲ್ಲಿ ಮಾಡಿದ ಟೀಕೆಗೆ ಉತ್ತರಿಸಿದರು. ‘ರಾಜಕೀಯದಲ್ಲಿ ಪಕ್ಷಾಂತರ ದೊಡ್ಡ ವಿಷಯವಲ್ಲ. ಪಕ್ಷಾಂತರದ ಬಗ್ಗೆ ಸಿದ್ದರಾಮಯ್ಯ, ಶಾಸಕ ಆರ್.ವಿ.ದೇಶಪಾಂಡೆ ನನಗೆ ಪಾಠ ಹೇಳುವುದು ಬೇಕಾಗಿಲ್ಲ. ಯಾರು ಎಷ್ಟು ಬಾರಿ ಪಕ್ಷಾಂತರ ಮಾಡಿದ್ದಾರೆಂಬುದು ನಾಲ್ಕು ದಶಕಗಳಿಂದ ರಾಜಕೀಯದಲ್ಲಿರುವ ನನಗೆ ಗೊತ್ತಿದೆ. ಭೂತದ ಬಾಯಲ್ಲಿ ಭಗವದ್ಗೀತೆ ಓದಿಸಬೇಕಾದ ಅವಶ್ಯಕತೆಯಿಲ್ಲ’ ಎಂದರು.

’ಕಾಂಗ್ರೆಸ್ ನಾಯಕರು ಚುನಾವಣೆ ಪ್ರಚಾರ ಮಾಡಲಿ. ಎಷ್ಟೇ ದೊಡ್ಡ ನಾಯಕರಾಗಿದ್ದರೂ ವ್ಯಕ್ತಿಗತ ಟೀಕೆ ಮಾಡಿದರೆ, ಅವಹೇಳನಕಾರಿ ಪದ ಬಳಕೆ ಮಾಡಿದರೆ ನನಗೂ ಅದನ್ನು ಮಾಡಲು ಗೊತ್ತಿದೆ. ಮಾಜಿ ಮುಖ್ಯಮಂತ್ರಿಯಾದವರಿಗೆ ಮಾತಿನಲ್ಲಿ ಸಂಸ್ಕಾರ ಇರಬೇಕು. ನಾವು ರಾಜೀನಾಮೆ ನೀಡಿರುವ ಶಾಸಕರು ಸಿದ್ದರಾಮಯ್ಯ ಗುಲಾಮರಲ್ಲ. ಕ್ಷೇತ್ರದ ಜನರು ನಮ್ಮನ್ನು ಆಯ್ಕೆ ಮಾಡುತ್ತಾರೆ’ ಎಂದು ವಾಗ್ದಾಳಿ ನಡೆಸಿದರು.

‘ನನ್ನ ಪರವಾಗಿ ಕಳೆದ ಚುನಾವಣೆಯಲ್ಲಿ ಪ್ರಚಾರಕ್ಕೆ ಬಂದಿದ್ದಕ್ಕೆ ದೇಶಪಾಂಡೆ ಜನರ ಕ್ಷಮೆ ಕೇಳುವುದಾಗಿ ಹೇಳಿದ್ದಾರೆ. ದೇಶಪಾಂಡೆ ಯಲ್ಲಾಪುರ–ಮುಂಡಗೋಡ ಜನರ ಬಳಿ ಮಾತ್ರವಲ್ಲ, ಇಡೀ ಜಿಲ್ಲೆಯ ಜನರ ಕ್ಷಮೆ ಕೇಳಬೇಕು. ಜಿಲ್ಲೆಯಲ್ಲಿ ಐದು ನದಿಗಳು ಹರಿಯುತ್ತವೆ. ಇಂದಿಗೂ ಕುಮಟಾದಲ್ಲಿ ಕುಡಿಯುವ ನೀರಿನ ಸಮಸ್ಯೆಯಿದೆ. ದೇಶಪಾಂಡೆ ಜಿಲ್ಲೆಗೆ ನೀರಾವರಿ ಯೋಜನೆ ತಂದಿಲ್ಲ. ಹಳಿಯಾಳಕ್ಕೆ ನೀರಾವರಿ ಯೋಜನೆ ತರಲು ಮೂರು ದಶಕಗಳು ಬೇಕಾದವು. ನಾನು ಐದು ವರ್ಷಗಳಲ್ಲಿ 50ಸಾವಿರ ಎಕರೆ ಪ್ರದೇಶಕ್ಕೆ ನೀರುಣಿಸುವ ಯೋಜನೆ ತಂದಿದ್ದೇನೆ’ ಎಂದು ಹೇಳಿದರು.

‘ಕುಮಾರಸ್ವಾಮಿ ಸರ್ಕಾರ ಬೀಳಲು ಕೊಡುವುದಿಲ್ಲವೆಂದು ಹೇಳಿಕೆ ನೀಡಿದ್ದಾರೆ.. ಬಿಜೆಪಿ ಸ್ಥಾನ ಕಡಿಮೆಯಾಗಿ ಅತಂತ್ರ ಪರಿಸ್ಥಿತಿ ನಿರ್ಮಾಣವಾದರೆ ಜೋಕರ್ ಕಾರ್ಡ್ ಪ್ರಯೋಗಿಸಲು ಕುಮಾರಸ್ವಾಮಿ ಹೊಂಚು ಹಾಕಿದ್ದಾರೆ. ವಿಶೇಷ ಸಂದರ್ಭದ ಚುನಾವಣೆ ಇದಾಗಿದ್ದು, ಕಾರ್ಯಕರ್ತರು ಮುತುವರ್ಜಿಯಿಂದ ಕೆಲಸ ಮಾಡಬೇಕು’ ಎಂದು ಸಲಹೆ ಮಾಡಿದರು.

ಜಿಲ್ಲಾ ಪಂಚಾಯ್ತಿ ಸದಸ್ಯೆ ಉಷಾ ಹೆಗಡೆ, ಬಿಜೆಪಿ ಪ್ರಮುಖರಾದ ಗಿರೀಶ ಪಟೇಲ್, ವಿನೋದ ಪ್ರಭು, ಶಿವಕುಮಾರ್ ಗೌಡ, ದ್ಯಾಮಣ್ಣ ದೊಡ್ಮನಿ, ಗಣಪತಿ ನಾಯ್ಕ, ಶ್ರೀರಾಮ ನಾಯ್ಕ, ವೀಣಾ ನಾಯ್ಕ, ಮಂಗಲಾ ನಾಯ್ಕ, ದೇವೇಂದ್ರ ನಾಯ್ಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT